ADVERTISEMENT

ದರೋಡೆ: ಹೆಡ್‌ ಕಾನ್‌ಸ್ಟೆಬಲ್‌ ಸೇರಿ 7 ಮಂದಿ ಬಂಧನ

₹38.89 ಲಕ್ಷ ಮೌಲ್ಯದ ಹಣ, ಆಭರಣ ಕದ್ದಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:11 IST
Last Updated 21 ಸೆಪ್ಟೆಂಬರ್ 2024, 16:11 IST
ಡಾ. ಶೋಭಾರಾಣಿ ವಿ.ಜೆ 
ಡಾ. ಶೋಭಾರಾಣಿ ವಿ.ಜೆ    

ಬಳ್ಳಾರಿ: ನಗರದಲ್ಲಿ ಸೆ.12ರಂದು ನಡೆದಿದ್ದ ಹಣ, ಆಭರಣ ದರೋಡೆ ಪ್ರಕರಣದಲ್ಲಿ ಬ್ರೂಸ್‌ಪೇಟೆ ಹೆಡ್ ಕಾನ್‌ಸ್ಟೆಬಲ್ ಮಹಬೂಬ್, ಗೃಹರಕ್ಷಕ ದಳದ ಮಾಜಿ ಸಿಬ್ಬಂದಿ ಆರೀಫ್‌ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್ ಇನ್ನುಳಿದ ಆರೋಪಿಗಳು. ಇವರಿಂದ ಒಟ್ಟು ₹22,41,000 ಮೌಲ್ಯದ ಹಣ, ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.  

ಕೃತ್ಯದಲ್ಲಿ ಭಾಗಿಯಾಗಿದ್ದ ಕಾನ್‌ಸ್ಟೆಬಲ್ ಮಹಬೂಬ್‌ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆ ಆರಂಭಿಸಲಾಗಿದೆ. ತಪ್ಪು ಸಾಬೀತಾದರೆ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗುವುದು ಎಂದು ಅವರು ಹೇಳಿದರು. 

ADVERTISEMENT

ಘಟನೆ: ರಘು ಎಂಬುವವರು ಸೆ. 12ರಂದು ಮುಂಜಾನೆ ₹22,99,000 ಹಣ ಮತ್ತು ₹15,90,000 ಮೌಲ್ಯದ 318 ಗ್ರಾಂ ಚಿನ್ನಾಭರಣಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಟ್ಯಾಂಕ್‌ ಬಾಂಡ್‌ ರಸ್ತೆ ಕಡೆಯಿಂದ ರಾಯದುರ್ಗ ಬಸ್ ನಿಲ್ದಾಣದ ಕಡೆಯ ಓಣಿಯಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ರಘು ಕಣ್ಣಿಗೆ ಕಾರದಪುಡಿ ಎರಚಿ ದರೋಡೆ ಮಾಡಿದ್ದರು.  

ವಶಕ್ಕೆ ಪಡೆದ ಹಣದೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಮತ್ತು ಬ್ರೂಸ್‌ಪೇಟೆ ಠಾಣೆ ಇನ್ಸ್‌ಪೆಕ್ಟರ್‌ ಸಿಂಧೂರ್‌

ತನಿಖೆಗಾಗಿ ನಗರ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಬ್ರೂಸ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಎಂ.ಎನ್. ಸಿಂಧೂರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅದರಂತೆ, ಸೆ. 21ರಂದು ಆರೀಫ್‌ ಎಂಬುವವನನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ರೆಹಮಾನ್ಎಂಬುವವರೊಂದಿಗೆ ಎರಡು ಬೈಕ್‌ಗಳಲ್ಲಿ ಹೋಗಿ ಹಣ ಮತ್ತು ಬಂಗಾರವುಳ್ಳ ಬ್ಯಾಗ್ ಕಸಿದು ಬಂದಿದ್ದಾಗಿ ವಿಚಾರಣೆ ವೇಳೆ ಆರೀಫ್‌ ತಿಳಿಸಿದ್ದ. ದರೋಡೆ ಮಾಡಿದ ಹಣ ಮತ್ತು ಆಭರಣವನ್ನು ಆರೀಫ್ ತನ್ನ ತಂಡಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಂಚಿ, ₹9 ಲಕ್ಷವನ್ನು ತನ್ನ ಆತ್ಮೀಯನಾಗಿದ್ದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹಬೂಬ್‌ಗೆ ಆರೀಫ್‌ಗೆ ನೀಡಿದ್ದ. ಕದ್ದ ಮಾಲು ಸಾಗಿಸಲು ಆರೀಫ್‌ಗೆ ಮೆಹಬೂಬ್‌ ವಾಹನದ ವ್ಯವಸ್ಥೆ ಮಾಡಿದ್ದ ಎಂದು ಗೊತ್ತಾಗಿದೆ. ಮೆಹಬೂಬ್‌ ಅವರಿಂದ ₹6.90 ಲಕ್ಷ ವಶಕ್ಕೆ ಪಡೆದಿರುವುದಾಗಿಯೂ ಎಸ್‌ಪಿ ತಿಳಿಸಿದ್ದಾರೆ.

ತನಿಖಾ ತಂಡವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ. 

ಬಂಧಿತ ಆರೋಪಿಗಳು 
ಈ ಪ್ರಕರಣದಲ್ಲಿ ಇಲಾಖೆ ಸಿಬ್ಬಂದಿಯನ್ನೇ ನಾವು ಬಂಧಿಸಿದ್ದೇವೆ. ಅಪರಾಧ ಪ್ರಕರಣಗಳಲ್ಲಿ ಸಿಬ್ಬಂದಿ ಭಾಗಿಯಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
–ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ವರ್ತನೆಯಲ್ಲಿ ಆಗಿತ್ತು ಬದಲಾವಣೆ

ಘಟನೆ ನಡೆಯುತ್ತಲೇ ಪೊಲೀಸರು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದರು. ಅದರಲ್ಲಿ ದುಷ್ಕರ್ಮಿಗಳ ಅಸ್ಪಷ್ಟ ಚಹರೆ ಸಿಕ್ಕಿತ್ತು. ಹೀಗಿರುವಾಗಲೇ ದುಷ್ಕರ್ಮಿಗಳ ವರ್ತನೆಯಲ್ಲಿ ಆಗಿದ್ದ ಬದಲಾವಣೆ ಪ್ರಕರಣಕ್ಕೆ ತಿರುವು ಕೊಟ್ಟಿತ್ತು. ಕುಡಿಯುವುದು ಜನರ ಮೇಲೆ ಜೋರು ಮಾಡುವುದನ್ನು ದರೋಡೆಕೋರರು ಹೆಚ್ಚು ಮಾಡಿದ್ದರು. ಈ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ರವಾನೆಯಾಗಿತ್ತು. ಇದೇ ಅನುಮಾನದ ಮೇಲೆ ಆರೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲವೂ ಬಯಲಾದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.