ಬಳ್ಳಾರಿ: ‘ದೇಶದ ರಾಜಕಾರಣದ ಬಗ್ಗೆ ಚರ್ಚಿಸಲು ಇಷ್ಟವಿಲ್ಲ’ ಎನ್ನುತ್ತಲೇ ಎಸ್.ನಿಜಲಿಂಗಪ್ಪನವರ ಕೊನೆಯ ಪುತ್ರಿ ಪೂರ್ಣಿಮಾ, ತಮ್ಮ ತಂದೆಯ ರಾಜಕಾರಣದ ದಿನಗಳು ಮತ್ತು ಆ ಕಾಲಘಟ್ಟದಲ್ಲಿ ತಮ್ಮ ಕುಟುಂಬದ ಪರಿಸ್ಥಿತಿಯನ್ನು ಸ್ಮರಿಸಿದರು.
ನಗರದ ಜಂತಕಲ್ ವೀರಭದ್ರಪ್ಪನವರ ಮನೆಗೆ ಶನಿವಾರ ಭೇಟಿ ನೀಡಿದ್ದ ‘ತಿಂಗಳಾನುಗಟ್ಟಲೇ ಅಪ್ಪಾಜಿ ಮನೆಯತ್ತ ಮುಖ ಮಾಡುತ್ತಿರಲಿಲ್ಲ. ನಾನು ಎಷ್ಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತೇನೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ, ನಾನು ಅಪ್ಪಾಜಿ ಜೊತೆಯಲ್ಲಿದ್ದೆ. ಆ ಸಂದಿಗ್ಧ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿರುವೆ’ ಎಂದರು. ಅವರು ಸದ್ಯ ಕೆನಡಾದ ನಿವಾಸಿ.
‘ನಮ್ಮ ತಂದೆಯವರಿಗೆ 9 ಮಕ್ಕಳು. ಮೂವರು ಪುತ್ರರು, ಆರು ಪುತ್ರಿಯರು. ಎರಡನೆಯವರು ಮೃತರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹೊರ ದೇಶದಲ್ಲೂ ನಮ್ಮ ಕುಟುಂಬ ನೆಲೆಸಿದೆ’ ಎಂದರು.
48 ವರ್ಷಗಳ ಕಾಲ ಕೆನಡಾದಲ್ಲಿಯೇ ನೆಲೆಸಿದ್ದರಿಂದ ಈ ದೇಶದ ರಾಜಕೀಯ ಬೆಳವಣಿಗೆ ಕುರಿತು ನನಗೆ ಮಾಹಿತಿ ಇಲ್ಲ. ನನ್ನ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗಲೂ ರಾಜಕಾರಣದ ಬಗ್ಗೆ ನನಗಾಗಲೀ ಅಥವಾ ಕುಟುಂಬ ಸದಸ್ಯರಿಗಾಗಲೀ ಆಸಕ್ತಿ ಇರಲಿಲ್ಲ’ ಎಂದರು.
‘ನನ್ನ ತಂದೆಯವರ ಹುಟ್ಟೂರು ಚಿತ್ರದುರ್ಗದಲ್ಲಿ ಅಪ್ಪಾಜಿ ನೆಲೆಸಿದ್ದ ಮನೆಯೊಂದಿದೆ. ಅದನ್ನು ಬಿಟ್ಟರೆ, ಅಲ್ಲಿ ಯಾವುದೇ ಆಸ್ತಿ ಇಲ್ಲ. ಆ ಮನೆಯಲ್ಲಿ ವಾಸಿಸುತ್ತಿರುವ ಸಂಬಂಧಿಕರಿಗೇ ಬಿಟ್ಟುಕೊಡಲು ನಿರ್ಧರಿಸಿದ್ದೇವೆ ಎಂದರು.
ಬಾಲ್ಯದಲ್ಲಿ ಬಂದಿದ್ದೆ: ಬಸವರಾಜೇಶ್ವರಿ ಅವರು ಲೋಕಸಭೆ ಸದಸ್ಯೆಯಾಗಿದ್ದಾಗ, ನನ್ನ ತಂದೆ ಮುಖ್ಯಮಂತ್ರಿ ಯಾಗಿದ್ದರು. ಆ ವೇಳೆ, ಅಪ್ಪಾಜಿಯೊಂದಿಗೆ ಬಳ್ಳಾರಿಗೆ ಬಂದಿದ್ದೆ. ಆಗ ನನಗೆ ಆರು ವರ್ಷ ವಯಸ್ಸು. ನನ್ನ ಸಹೋದರಿಯೊಬ್ಬಳು ಇಲ್ಲಿಯೇ ನೆಲೆಸಿರುವುರಿಂದ ಆಗಾಗ ಬರುವೆ’ ಎಂದರು.
ಅವರ ಪತಿ ಮೃತ್ಯುಂಜಯ, ‘ಕೆನಡಾ ದೇಶ ಭ್ರಷ್ಟಾಚಾರ ಮುಕ್ತವಾಗಿದೆ. ಲಂಚಗುಳಿತನ ಎಂಬುದಿಲ್ಲ. ಅಲ್ಲಿನ ರಾಜಕಾರಣಿಗಳಲ್ಲಿ ಬದ್ಧತೆಯಿದೆ. ಅಲ್ಲಿ ಪ್ರಾಮಾಣಿಕತೆ ಅತಿ ದೊಡ್ಡಮೌಲ್ಯ. ಅದನ್ನು ಭಾರತಕ್ಕೆ ಹೋಲಿಸಲು ಆಗಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.