ADVERTISEMENT

ಜಿಂದಾಲ್‌ಗೆ 3667 ಎಕರೆ ಭೂಮಿ ನೀಡಿಕೆ ವಿರೋಧಿಸಿ ನಾಳೆ ಪಾದಯಾತ್ರೆ: ಹಿರೇಮಠ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 7:43 IST
Last Updated 7 ಆಗಸ್ಟ್ 2019, 7:43 IST
   

ಬಳ್ಳಾರಿ: ಜಿಂದಾಲ್‌ಗೆ 3,667 ಎಕರೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿ ಸಂಡೂರು ತಾಲ್ಲೂಕಿನ
ವಡ್ಡು ಗ್ರಾಮದಿಂದ ಬಳ್ಳಾರಿಗೆ ಪಾದಯಾತ್ರೆ ಆಗಸ್ಟ್ 8ರಿಂದ ಶುರುವಾಗಲಿದೆ ಎಂದು ಜನಸಂಗ್ರಾಮ ಪರಿಷತ್ ಮುಖಂಡ ಎಸ್.ಆರ್.ಹಿರೇಮಠ್ ತಿಳಿಸಿದರು.

ವಡ್ಡು ಗ್ರಾಮದ ಹಳ್ಳದರಾಯ ದೇವಸ್ಥಾನದಿಂದ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆಗೆ ಚಾಲನೆ ದೊರಕಲಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

9 ರಂದು ಬಳ್ಳಾರಿಗೆ ಬರಲಿರುವ ಪಾದಯಾತ್ರಿಗಳನ್ನು ಸುಧಾ ಸರ್ಕಲ್ ‌ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಸ್ವಾಗತಿಸಲಾಗುವುದು. ನಂತರ ಸಂಕಲ್ಪಸಭೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ‌ಪತ್ರವನ್ನು ಸಲ್ಲಿಸಲಾಗುವುದು ಎಂದರು.

ADVERTISEMENT

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‌ ಚಳವಳಿಯ ಐತಿಹಾಸಿಕ ದಿನವಾದ ಆಗಸ್ಟ್ 9 ರಂದೇ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಮುಕ್ತಾಯವಾಗಲಿದೆ ಎಂದರು.

ಕುರೆಕುಪ್ಪ, ಮುಸಿನಾಯಕನಹಳ್ಳಿ, ತೋರಣಗಲ್ಲು, ಸುಲ್ತಾನಪುರ ಗ್ರಾಮದ 3,667 ಎಕರೆ ಜಮೀನನ್ನು ಮಾರಾಟ ಮಾಡದೆ, ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕು. ಜಿಂದಾಲ್‌ಗೆ ಇದುವರೆಗೆ ನೀಡಿರುವ ಭೂಮಿಯ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರು ಇರುವ ಸ್ವತಂತ್ರ ಸಮಿತಿಯಿಂದ ತನಿಖೆಗೆ‌ ಒಳಪಡಿಸಬೇಕು. ಭೂಮಿ ನೀಡಿದವರಿಗೆ ಉದ್ಯೋಗ ದೊರಕಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು. ಜೀವ ಸಂಕುಲಕ್ಕೆ ಮಾರಕವಾದ ಎಪ್ಸಿಲಾನ್ ಡಾಂಬರು ಮತ್ತು‌ ಪೇಂಟ್ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು. ಕುಮಾರಸ್ವಾಮಿ, ಪಾರ್ವತಿ‌ದೇಗುಲದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು. ತುಂಗಭದ್ರಾ ಮತ್ತು ಅಲಮಟ್ಟಿ ಜಲಾಶಯದ ನೀರನ್ನು ಜಿಂದಾಲ್ ಅಕ್ರಮವಾಗಿ ಬಳಸದಂತೆ ತಡೆಗಟ್ಟಬೇಕು ಎಂದು ಪಾದಯಾತ್ರೆ ಸಂದರ್ಭದಲ್ಲಿ ಆಗ್ರಹಿಸಲಾಗುವುದು ಎಂದರು.

ರೈತ ಸಂಘ, ಮಹಾತ್ಮ ಗಾಂಧಿ ವಿವಿಧೋದ್ದೇಶ ಸಹಕಾರಿ ಸಂಘ, ರೈತ ಕೃಷಿ ಕಾರ್ಮಿಕರ ಸಂಘ, ಚಾಗನೂರು- ಸಿರಿವಾರ ನೀರಾವರಿ ಭೂ ಹೋರಾಟ ಸಮಿತಿ ಹಾಗೂ ಇಸಿಪಿಎಲ್ ಕಾರ್ಖಾನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟವು ಪಾದಯಾತ್ರೆಗೆ ಬೆಂಬಲ ನೀಡಿವೆ ಎಂದರು.

ಜಿಂದಾಲ್ ಗೆ ಭೂಮಿ ಮಾರಾಟ ಮಾಡಬಾರದು ಎಂದು ಆಗ್ರಹಿಸಿ‌ ಹಗಲುರಾತ್ರಿ ಧರಣಿ ನಡೆಸಿದ್ದ‌ ಬಿಜೆಪಿಯೇ ಈಗ ಅಧಿಕಾರದಲ್ಲಿರುವುದರಿಂದ ‌ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬಹುದು ಎಂಬ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿಲುವನ್ನು ಕೂಡಲೇ ಘೋಷಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲ್ದಳ್ಳಿ, ಸೋಮಶೇಖರ ಗೌಡ ಮತ್ತು ಮಾಧವರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.