ADVERTISEMENT

ಬಿಜೆಪಿ –ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ: ಎಸ್‌.ಆರ್‌ ಹಿರೇಮಠ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 13:33 IST
Last Updated 22 ಫೆಬ್ರುವರಿ 2024, 13:33 IST
   

ಬಳ್ಳಾರಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಮಣ್ಣುಮುಕ್ಕಿಸಿದಂತೇ, 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ–ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ - ಮೋದಿ ಸರ್ಕಾರವು ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗಿ ಪರಿಣಮಿಸಿವೆ’ ಎಂದು ಆರೋಪಿಸಿದರು.

‘ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಎನ್‌ಡಿಎ ಕ್ರಮಗಳು ಅಪಾಯಕಾರಿ. ಅವು ಸಮಾಜಕ್ಕೆ ವಿಷವಿಕ್ಕುವ ಕೆಲಸ ಮಾಡುತ್ತಿವೆ. ಅಘೋಷಿತ ತುರ್ತು ಪರಿಸ್ಥಿತಿಯೊಂದೊರಲ್ಲಿ ನಾವು ಬದುಕುತ್ತಿದ್ದೇವೆ. ಇದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಕೊನೆಗಾಣಿಸಬೇಕು. ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಬೇಕು’ ಎಂದರು

ADVERTISEMENT

‘ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪ್ರಕಟಿಸಿದ ತೀರ್ಪುಗಳಲ್ಲಿ ಬಿಜೆಪಿ, ಸಂಘಪರಿವಾರಕ್ಕೆ ನೈತಿಕ ಹೊಡೆತ ಬಿದ್ದಿದೆ. ಚುನಾವಣಾ ಬಾಂಡ್‌ ಯೋಜನೆಯನ್ನು 2017ರಲ್ಲಿ ಹಣಕಾಸು ಮಸೂದೆ ರೂಪದಲ್ಲಿ ಬಿಜೆಪಿಯು ಜಾಣತನದಿಂದ ಜಾರಿಗೊಳಿಸಿತ್ತು. 2018ರಲ್ಲಿ ಅಧಿಸೂಚನೆ ಹೊರಡಿಸಿದ್ದ ಈ ಯೋಜನೆಯ ಶೇ 60ರಷ್ಟು ಲಾಭವನ್ನು ಬಿಜೆಪಿಯೇ ಪಡೆದಿತ್ತು. ಸದ್ಯ ಇದನ್ನು ಅಸಾಂವಿಧಾನಿಕ ಎಂದಿರುವ ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ. ಬಿಲ್ಕಿಸ್ ಬಾನು ಪ್ರಕರಣ, ‌ಚಂಡೀಗಢ ಮೇಯರ್‌ ಚುನಾವಣೆ ಕುರಿತ ತೀರ್ಪಿನಲ್ಲೂ ಬಿಜೆಪಿಗೆ ಮುಖಭಂಗವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ‘ ಎಂದು ಅವರು ಹೇಳಿದರು.

ಚುನಾವಣಾ ಅಯೋಗದ ಮುಖ್ಯಸ್ಥರು, ಸದಸ್ಯರ ನೇಮಕಾತಿ ಸಮಿತಿಯಲ್ಲಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಯನ್ನು ತೆಗೆದುಹಾಕಿ, ಸಂಪುಟದ ಸದಸ್ಯ ಮಂತ್ರಿಯನ್ನು ಸೇರಿಸಿಕೊಳ್ಳುವ ಮಸೂದೆಯನ್ನು ಮೋದಿ ನೇತೃತ್ವದ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ತಂದಿದೆ. ಈ ಮೂಲಕ ಆಯೋಗದ ಸ್ವಾಯತ್ತತೆ ಕಸಿದುಕೊಳ್ಳಲಾಗಿದೆ. ಇಂಥ ನಿರ್ಧಾರಗಳನ್ನು ಕೈಗೊಂಡ ಬಿಜೆಪಿಯನ್ನು ಸೋಲಿಸಬೇಕು. ಈ ವಿಚಾರಗಳನ್ನು ಜನರ ಮುಂದೆ ಕೊಂಡೊಯ್ಯಲು ನಿರ್ಧರಿಸಲಾಗಿದೆ‘ ಎಂದು ಅವರು ಹೇಳಿದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಗೆಲ್ಲಬೇಕು ಎಂದು ಹೇಳಿರುವ ಹಿರೇಮಠ, ಅದಕ್ಕೆ ತಮ್ಮ ಬೆಂಬಲ ಘೋಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.