ತೋರಣಗಲ್ಲು: ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿರುವ ಅಗ್ನಿಶಾಮಕ ದಳದ ಗುತ್ತಿಗೆ ಆಧಾರಿತ ನೌಕರರಿಗೆ ಏಜೆನ್ಸಿಯಿಂದ ಸಕಾಲಕ್ಕೆ ವೇತನ ಪಾವತಿ ಆಗುತ್ತಿಲ್ಲ. ನೌಕರರು ಹಲವಾರು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.
ಬಿಟಿಪಿಎಸ್‌ನ ಅಗ್ನಿಶಾಮಕ ದಳದ ಕೇಂದ್ರದಲ್ಲಿ ಕುಡತಿನಿ ಸೇರಿದಂತೆ ಸುತ್ತಲಿನ ಗ್ರಾಮಗಳ ಒಟ್ಟು 41 ಜನ ಗುತ್ತಿಗೆ ನೌಕರರು ಹಲವಾರು ವರ್ಷಗಳಿಂದ ₹12 ಸಾವಿರ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
ಬಿಟಿಪಿಎಸ್ ಆಡಳಿತ ಮಂಡಳಿ, ಟೆಂಡರ್ ಪಡೆದ ಏಜೆನ್ಸಿಯ ಆಡಳಿತತ್ಮಾಕ ತಾಂತ್ರಿಕ ಸಮಸ್ಯೆಯಿಂದ ಪ್ರತಿ ತಿಂಗಳು ವೇತನ ವಿಳಂಬವಾಗುತ್ತಿದ್ದು, ಗುತ್ತಿಗೆ ಆಧಾರದ ನೌಕರರು ವೇತನಕ್ಕಾಗಿ ಪರಿತಪಿಸುವಂತಾಗಿದೆ.
‘ಬಿಟಿಪಿಎಸ್‌ನಿಂದ 2021ರ ಕನಿಷ್ಠ ವೇತನದ ಅನುಸಾರ ಏಜೆನ್ಸಿಗೆ ಹಣ ಪಾವತಿ ಮಾಡಿದರೂ ಸಹ ಏಜೆನ್ಸಿಯವರು ಪ್ರಸ್ತುತ ಮೂರು ತಿಂಗಳಿಂದ ನಮಗೆ ವೇತನ ನೀಡಿಲ್ಲ. ಈ ವೇತನಕ್ಕಾಗಿ ಪ್ರತಿ ತಿಂಗಳು ಅಧಿಕಾರಿಗಳ ಕಚೇರಿಗೆ ಅಲೆದು, ದುಂಬಾಲು ಬಿದ್ದು ವೇತನವನ್ನು ನಾವೇ ಮಾಡಿಸಿಕೊಳ್ಳುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ಅಗ್ನಿಶಾಮಕ ದಳದ ಗುತ್ತಿಗೆ ನೌಕರರು ಆರೋಪಿಸಿದ್ದಾರೆ.
ಬಿಟಿಪಿಎಸ್ ನ ಆಡಳಿತವು 2023ರ ನೂತನ ಕನಿಷ್ಠ ವೇತನ ಪ್ರಕಾರ ಖಾಸಗಿ ಏಜೆನ್ಸಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಆದರೆ 2021ರ ಹಳೆಯ ವೇತನದ ಅನುಸಾರ ಕಡಿಮೆ ಹಣವನ್ನು ಏಜೆನ್ಸಿಗೆ ಬಿಡುಗಡೆ ಮಾಡುವುದರಿಂದ ಗುತ್ತಿಗೆ ನೌಕರರಿಗೆ ಸಕಾಲಕ್ಕೆ ವೇತನ ನೀಡಲು ಆಗುತ್ತಿಲ್ಲ ಎನ್ನುವುದು ಏಜೆನ್ಸಿಗಳ ವಾದವಾಗಿದೆ.
ಕಡ್ಡಾಯವಾಗಿ ಪ್ರತಿ ತಿಂಗಳ ವೇತನ ನೀಡಬೇಕು. ಇಎಸ್‍ಐ ಕಾರ್ಡ್ ಹಾಗೂ ಕನಿಷ್ಠ ವೇತನ ಕಾಯ್ದೆಯ ಅನುಸಾರ ಸಕಾಲಕ್ಕೆ ಪೂರ್ಣ ಪ್ರಮಾಣದ ವೇತನ ನೀಡುಬೇಕು ಎಂದು ಗುತ್ತಿಗೆ ನೌಕರರ ಬೇಡಿಕೆಗಳಾಗಿವೆ.
‘ಗುತ್ತಿಗೆ ನೌಕರರಿಗೆ ಕನಿಷ್ಠ ವೇತನದ ಅನುಸಾರ ಸಕಾಲಕ್ಕೆ ವೇತನ ಪಾವತಿ ಮಾಡುವಂತೆ ಹಲವಾರು ಬಾರಿ ಬಿಟಿಪಿಎಸ್ ನ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಡ ನೌಕರರ ಕುಟುಂಬ ಜೀವನವು ಬಹಳ ಕಷ್ಟಕರವಾಗಿದ್ದು, ಶೀಘ್ರವಾಗಿ ವೇತನ ಪಾವತಿ ಮಾಡಬೇಕು’ ಎಂದು ಬಿಟಿಪಿಎಸ್ ಗುತ್ತಿಗೆ ಆಧಾರದ ನೌಕರರ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ ಒತ್ತಾಯಿಸಿದರು.
‘ಬಿಟಿಪಿಎಸ್ ಅಧಿಕಾರಿಗಳು ನೂತನ ಕನಿಷ್ಠ ವೇತನ ಪ್ರಕಾರ ನಮ್ಮ ಏಜೆನ್ಸಿಗೆ ಹೆಚ್ಚಿನ ಹಣ ಬಿಡುಗಡೆ ಮಾಡದೇ ಹಳೆಯ ವೇತನದ ಅನುಸಾರ ಕಡಿಮೆ ಹಣ ನೀಡುವುದರಿಂದ ನಮಗೆ ಬಹಳ ನಷ್ಠವಾಗುತ್ತಿದ್ದು, ಗುತ್ತಿಗೆ ನೌಕರರಿಗೆ ವೇತನ ನೀಡಲು ಆಗುತ್ತಿಲ್ಲ’ ಎಂದು ಪ್ರೋಪೆಷನಲ್ ಸೆಕ್ಯೂರಿಟಿ ಸರ್ವಿಸ್‍ನ ಮೇಲ್ವಿಚಾರಕ ಸಂತೋಷ ಹೇಳಿದರು.
‘ಬಿಟಿಪಿಎಸ್‍ನ ವತಿಯಿಂದ ಕನಿಷ್ಠ ವೇತನ ಕಾಯ್ದೆಯ ಅನುಸಾರ ಗುತ್ತಿಗೆ ಪಡೆದ ಏಜೆನ್ಸಿಗೆ ಸಕಾಲಕ್ಕೆ ಹಣ ಪಾವತಿಸಲಾಗಿದ್ದು, ಏಜೆನ್ಸಿಯು ವಿನಾಕಾರಣ ಬಡ ನೌಕರರಿಗೆ ವೇತನ ಪಾವತಿ ಮಾಡದಿರುವುದು ಸರಿಯಲ್ಲ ತ್ವರಿತವಾಗಿ ವೇತನ ಪಾವತಿಸಲು ಸಂಬಂಧಪಟ್ಟ ಏಜೆನ್ಸಿಗೆ ಸೂಚಿಸಲಾಗುವುದು’ ಎಂದು ಬಿಟಿಪಿಎಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಚಲಪತಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.