ADVERTISEMENT

ಉತ್ತರ ಪ್ರಾಂತೀಯ ಕಾರ್ಯಕರ್ತರ 2 ನೇ ತ್ರೈವಾರ್ಷಿಕ ಸಮ್ಮೇಳನ 15 ರಂದು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:25 IST
Last Updated 12 ಡಿಸೆಂಬರ್ 2019, 10:25 IST

ಬಳ್ಳಾರಿ: ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತೀಯ ಕಾರ್ಯಕರ್ತರ 2 ನೇ ತ್ರೈವಾರ್ಷಿಕ ಸಮ್ಮೇಳನ ವು ನಗರದ ಕಮ್ಮ ಭವನದಲ್ಲಿ ಡಿ 15 ರಂದು ನಡೆಯಲಿದೆ. 14 ಜಿಲ್ಲೆಗಳ ಸುಮಾರು 4000 ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ ತಿಳಿಸಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಸಮ್ಮೇಳನದಲ್ಲಿ ಹಿಂದೂ ಸಮಾಜದ‌ ಸುರಕ್ಷತೆಯ ಕುರಿತು ಸಮಾಲೋಚನೆ ನಡೆಯಲಿದೆ ಎಂದು ನಗರದಲ್ಲಿ‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಗವಾಧ್ವಜ ಆರೋಹಣ ಮೂಲಕ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಹಿಂದುತ್ವದ ಹಿರಿಮೆ‌ ಮತ್ತು ಹಿಂದುಗಳ ಹೊಣೆಗಾರಿಕೆ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪದಾಧಿಕಾರಿ, ಬೀದರಿನ ನಾಗೇಶ‌ ಚಿನ್ನಾರೆಡ್ಡಿ ಉಪನ್ಯಾಸ ನೀಡಲಿದ್ದಾರೆ ಎಂದರು.

ADVERTISEMENT

ಶೋಭಾ ಯಾತ್ರೆ: ಮಧ್ಯಾಹ್ನ 3 ಗಂಟೆಗೆ ಕಮ್ಮಭವನದಿಂದ ಬೃಹತ್ ಶೋಭಾ ಯಾತ್ರೆಯು ನಡೆಯಲಿದೆ. ಸಂಜೆ ಸಾರ್ವಜನಿಕ ಸಭೆ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಸಂಗನಬಸವ ಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ ವೈ.ಎಂ.ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ದಜ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದ ಸಲುವಾಗಿ 36 ಸದಸ್ಯರ‌ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಸಿದ್ಧತೆಗಳೆಲ್ಲ ಪೂರ್ಣಗೊಂಡಿವೆ, ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಮುಖಂಡರಾದ ಶ್ರೀರಾಮುಲು, ಅಯ್ಯನಗೌಡ ಹೇರೂರು, ಹಂಪಿ, ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.