ಸಂಡೂರು: ಸಂಸದ ಇ.ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ಮತದಾನ ನಡೆಯಿತು. ಬಹುತೇಕ ಶಾಂತಿಯುತವಾಗಿ ನಡೆದ ಮತದಾನದಲ್ಲಿ ಅಂದಾಜು ಶೇ 76.24ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
ಒಟ್ಟು 2,36,402 ಮತದಾರರ ಪೈಕಿ 1,80,189 ಮತದಾನ ಮಾಡಿದ್ದಾರೆ. ಇದರಲ್ಲಿ 90,922 ಮಂದಿ ಪುರುಷ ಮತದಾರರು, 89,252 ಮಂದಿ ಮಹಿಳಾ ಮತದಾರರು, 12 ಲೈಂಗಿಕ ಅಲ್ಪ ಸಂಖ್ಯಾತರು ಇದ್ದಾರೆ.
ಇದೇ ಕ್ಷೇತ್ರದಲ್ಲಿ, 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ಶೇ 77.07ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಶೇ.75.16 ರಷ್ಟು ಮತದಾನವಾಗಿತ್ತು.
ಬೆಳಗ್ಗೆ 7ಕ್ಕೆ ಸರಿಯಾಗಿ ಕ್ಷೇತ್ರದಾದ್ಯಂತ ಮತದಾನ ಆರಂಭವಾಯಿತು. 9 ಗಂಟೆ ಹೊತ್ತಿಗೆ ಶೇ 10.11 ಮತದಾನವಾಗಿತ್ತು. 11 ಗಂಟೆಗೆ ಹೊತ್ತಿಗೆ ಶೇ 25.96, ಮದ್ಯಾಹ್ನ 1ಕ್ಕೆ ಶೇ 43.46, 3 ಗಂಟೆಗೆ ಶೇ 58.27, ಸಂಜೆ 5 ಗಂಟೆಗೆ 71.47ರಷ್ಟು, 6 ಗಂಟೆ ಹೊತ್ತಿಗೆ ಶೇ 75.31ರಷ್ಟು ಮತದಾನ ನಡೆದಿದ್ದಾಗಿ ಮಾಹಿತಿ ಲಭ್ಯವಾಗಿದೆ.
ತಾಲ್ಲೂಕಿನ ಕೃಷ್ಣಾನಗರ, ತೋರಣಗಲ್ ಸೇರಿದಂತೆ ಹಲವು ಕಡೆಗಳಲ್ಲಿ ತಡವಾಗಿ ಬಂದ ಮತದಾರರಿಗೆ ಟೋಕನ್ ನೀಡುವ ಮೂಲಕ ಮತದಾನಕ್ಕೆ ಅವಕಾಕಾಶ ಕಲ್ಪಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.