ADVERTISEMENT

ಸಂಡೂರು | ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ, ಇಂದಿನಿಂದಲೇ ದುಡಿಯುವೆ: ಅನ್ನಪೂರ್ಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 10:58 IST
Last Updated 23 ನವೆಂಬರ್ 2024, 10:58 IST
<div class="paragraphs"><p>ಇ. ಅನ್ನಪೂರ್ಣ</p><p></p></div>

ಇ. ಅನ್ನಪೂರ್ಣ

   

– ಪ್ರಜಾವಾಣಿ ಚಿತ್ರ

ADVERTISEMENT

ಬಳ್ಳಾರಿ: ‘ಸಂಡೂರಿನ ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್‌ಗೆ ಮತ್ತೆ ಆಶೀರ್ವಾದ ಮಾಡಿದ್ದಾರೆ. ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಜನರ ನಿರೀಕ್ಷೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡುವುದೆ. ಅದಕ್ಕಾಗಿ ಇಂದಿನಿಂದ ದುಡಿಯುವೆ’ ಎಂದು ಸಂಡೂರು ಕ್ಷೇತ್ರದ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಇ. ಅನ್ನಪೂರ್ಣ ತಿಳಿಸಿದ್ದಾರೆ.

ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಮೊದಲಿಗೆ ಸಂಡೂರಿನ ಜನತೆಗೆ ಧನ್ಯವಾದ ಅರ್ಪಿಸಿದರು.

‘ ಸಂಡೂರಿನ ಜನ ಯಾವತ್ತೂ ಕಾಂಗ್ರೆಸ್‌ ಕೈ ಬಿಟ್ಟಿಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿಗಳು, ಮಹಿಳೆಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದು, ಒಗ್ಗಟಿನ ಹೋರಾಟ ನಮ್ಮ ಗೆಲುವಿಗೆ ಕಾರಣವಾಗಿದೆ’ ಎಂದರು.

‘ನನ್ನ ಕ್ಷೇತ್ರದ ಜನ ನನಗೆ ನೀಡಿರುವ ಕೊಡುಗೆಯನ್ನು ನನ್ನ ಸೇವೆಯ ಮೂಲಕ ಮತ್ತೆ ಹಿಂದಿರುಗಿಸುವೆ. ಸಂಡೂರು ಕಾಂಗ್ರೆಸ್‌ ಭದ್ರ ಕೋಟೆ. ಅದನ್ನು ಭದ್ರಪಡಿಸುವ ಕೆಲಸ ಮಾಡುವುದಾಗಿ ಹೇಳಿದ್ದೆ. ಅದರಂತೆ ನಡೆದುಕೊಳ್ಳುವೆ’ ಎಂದು ತಿಳಿಸಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಶೇ. 49ರಷ್ಟು ಮತ ಸಿಕ್ಕಿತ್ತು. ಈಗ ಶೇ. 51 ಮತ ಸಿಕ್ಕಿದೆ. ಅದರಂತೆ ನೋಡಿದರೆ ನಮ್ಮ ಮತ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಬಳ್ಳಾರಿ ಮತ್ತು ಸಂಡೂರಿನ ಜನ ತುಕಾರಾಂ ಅವರನ್ನು ಸಂಸತ್‌ಗೆ, ನನ್ನನ್ನು ವಿಧಾನಸಭೆಗೆ ಆರಿಸಿ ಕಳುಹಿಸಿದ್ದಾರೆ. ವೈವಾಹಿಕ ಜೀನದಲ್ಲಿ ಪರಸ್ಪರ ಸಹಕಾರದೊಂದಿಗೆ ಬಾಳ್ವೆ ನಡೆಸಿದ ನಾವು, ರಾಜಕೀಯದಲ್ಲೂ ಪರಸ್ಪರ ಸಹಕರಿಸುತ್ತಲೇ ಕೆಲಸ ಮಾಡುತ್ತೇವೆ’ ಎಂದು ಅನ್ನಪೂರ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತಾಲೂಕಿನ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಅಡಿಗಲ್ಲು ಹಾಕಿದ್ದಾರೆ. ಸಂಡೂರು ಬಸ್‌ ನಿಲ್ದಾಣಕ್ಕೂ ಭೂಮಿ ಪೂಜೆ ಆಗಿದೆ. ಅದನ್ನು ಬೇಗ ಪೂರ್ಣಗೊಳಿಸುವೆ. ಅವುಗಳನ್ನು ಆದ್ಯತೆಯಾಗಿ ಪರಿಗಣಿಸುವೆ’ ಎಂದು ಇದೇ ವೇಳೆ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.