15 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಬಿ.ಎಸ್ ಯಡಿಯೂರಪ್ಪ
ಸಂಡೂರಿನಲ್ಲಿ ಬಿ.ಎಸ್ ಯಡಿಯೂರಪ್ಪ ಪ್ರಚಾರ *ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ
ಪ್ರಜಾವಾಣಿ ವಾರ್ತೆ Published 8 ನವೆಂಬರ್ 2024, 23:20 IST Last Updated 8 ನವೆಂಬರ್ 2024, 23:20 IST ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೋರನೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತ ಪರವಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ಪ್ರಚಾರ ನಡೆಸಿದರು. ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತಿತರರು ಇದ್ದಾರೆ
ಸಂಡೂರು (ಬಳ್ಳಾರಿ): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ್ದು, ಅಧಿಕಾರದಲ್ಲಿ ಮುಂದುವರಿಯಲು ಅವರು ಅರ್ಹರಲ್ಲ. 15 ರಿಂದ 20 ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಸಂಡೂರು ಕ್ಷೇತ್ರದ ಬೊಮ್ಮಘಟ್ಟ, ಚೋರನೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ ಮುಡಾ ಹಗರಣ ಆರೋಪ ಸಾಬೀತಾಗುತ್ತದೆ. ಇ.ಡಿ, ಸಿಬಿಐ ವಿರುದ್ಧ ಸಿದ್ದರಾಮಯ್ಯ ವಿನಾ ಕಾರಣ ಅಪಪ್ರಚಾರ ಮಾಡುತ್ತಾರೆ. ನಮಗೆ ಲೋಕಾಯುಕ್ತ ಮೇಲೆ ನಂಬಿಕೆಯಿಲ್ಲ. ಸಿಬಿಐ ತನಿಖೆ ನಡೆಸಲಿ’ ಎಂದರು.
ಕಾಂಗ್ರೆಸ್ ಗೆದ್ದರೆ ಪ್ರತಿ ಮನೆ ವಕ್ಫ್ ಆಸ್ತಿ :
‘ಕಾಂಗ್ರೆಸ್‌ಗೆ ಈ ಉಪಚುನಾವಣೆಯಲ್ಲಿ ಸೋಲಿಸದಿದ್ದರೆ, ರಾಜ್ಯದ ಪ್ರತಿ ಮನೆಯು ವಕ್ಫ್ ಆಸ್ತಿಯಾಗಲಿದೆ.ವಕ್ಫ್ ಮೂಲಕ ಹೊಸ ಜಿಹಾದಿ ಆರಂಭವಾಗಿದೆ. ಇದು ಶುದ್ಧ ದುರುಳತನ. ಕಾಂಗ್ರೆಸ್ ಗೊತ್ತಿದ್ದೇ ಇದನ್ನು ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
‘ನಾವು ವಕ್ಫ್ ಆಸ್ತಿ ಉಳಿಸುವುದಾಗಿ ಹೇಳಿದ್ದೆವು. ಅನ್ವರ್ ಮಾನಪ್ಪಾಡಿ ವರದಿ ಅದಕ್ಕೆ ಆಧಾರವಾಗಿತ್ತು. ವಕ್ಫ್ ಆಸ್ತಿಯನ್ನು ಕಬಳಿಸಲಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಕಾಂಗ್ರೆಸ್ ನಾಯಕರಾದ ರೆಹಮಾನ್ ಖಾನ್, ಸಿಎಂ ಇಬ್ರಾಹಿಂ, ಹ್ಯಾರಿಸ್ ಸೇರಿದಂತೆ ಹಲವರು ಹೆಸರು ಅದರಲ್ಲಿತ್ತು’ ಎಂದರು.
ಈಗೇನು ಮಾಡುವಿರಿ?
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ‘ನಾನು ₹1 ಲಕ್ಷ ಕೋಟಿ ದೋಚಿದ್ದು, ಅದನ್ನು ವಸೂಲಿ ಮಾಡಿ ಬಡವರಿಗೆ ಮನೆ ಕಟ್ಟಿಸಿಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅವರು ಐದು ವರ್ಷ ಅಧಿಕಾರದಲ್ಲಿ ಇದ್ದರೂ ಏನು ಮಾಡಿದರು? ಅವರದ್ದೇ ಯುಪಿಎ ಸರ್ಕಾರ ಇದ್ದರೂ ಏನು ಮಾಡಲಿಲ್ಲ. ನನ್ನನ್ನು ಜೈಲಿಗಟ್ಟಿದರು. ಅಂದು ಏನನ್ನೂ ಮಾಡಲಾಗದವರು, ಈಗ ಏನು ಮಾಡುವರು’ ಎಂದು ಪ್ರಶ್ನಿಸಿದರು.
‘ತಾಯಿ ಚಾಮುಂಡೇಶ್ವರಿ ಮುಡಾ ಹಗರಣದ ವಿಚಾರದಲ್ಲಿ ಸಿಎಂ ಕುಟುಂಬ ಸಿಲುಕುವಂತೆ ಮಾಡಿದ್ದಾಳೆ. ಮೈಸೂರಿನಿಂದ ಚಾಮುಂಡಿಯೇ ಅವರನ್ನು ಹೊರಗೆ ಹಾಕುತ್ತಾಳೆ. ನವೆಂಬರ್ 13ರ ಬಳಿಕ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಗ್ಯಾರಂಟಿ’ ಎಂದು ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನಿಹಟ್ಟಿಯಲ್ಲಿ ಶುಕ್ರವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಇದ್ದಾರೆ
ಗ್ಯಾರಂಟಿ ತಡೆಯಲು ಅನುದಾನ ನಿರಾಕರಣೆ: ಸಿದ್ದರಾಮಯ್ಯ
‘ಅನುದಾನ ಕೊಡದೇ ಹೋದರೆ ಗ್ಯಾರಂಟಿಗಳು ನಿಲ್ಲುತ್ತವೆ ಎಂಬ ದುರುದ್ದೇಶದಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ಬಾಕಿ ಅನುದಾನ ನೀಡದೇ ವಂಚಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಬನ್ನಿಹಟ್ಟಿ ಏಳುಬೆಂಚಿ ಕುಡುತಿನಿಯಲ್ಲಿ ಶುಕ್ರವಾರ ಅವರು ಪ್ರಚಾರ ನಡೆಸಿದ ಅವರು‘ದುಡ್ಡು ಕೊಡದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಿಬಿಡುತ್ತಾರೆ ಎಂದು ರಾಜ್ಯಕ್ಕೆ ನ್ಯಾಯವಾಗಿ ಬರಬೇಕಾದ ಅನುದಾನ ನಿರಾಕರಿಸಲಾಗುತ್ತಿದೆ. ₹11495 ಕೋಟಿ ಕೇಂದ್ರದಿಂದ ನಮಗೆ ಬರಬೇಕಿತ್ತು. ಇದು ನಮ್ಮದೇ ಪಾಲಿನ ಹಣ. ಇದನ್ನು ರಾಜ್ಯಕ್ಕೆ ಕೊಡದೆ ವಂಚಿಸಿದ್ದಾರೆ. ಇದೂ ಸೇರಿ ಒಟ್ಟು ₹17 ಸಾವಿರ ಕೋಟಿ ನಮಗೆ ಕೇಂದ್ರ ಸರ್ಕಾರದಿಂದ ವಂಚನೆಯಾಗಿದೆ’ ಎಂದರು. ‘ನಮ್ಮ ಬಳಿ ಸಂಬಳ ಕೊಡೋಕೆ ಹಣವಿಲ್ಲ ಎಂದು ಮೋದಿ ಹೇಳುತ್ತಾರೆ. ಹಾಗಿದ್ದರೆ ಗ್ಯಾರಂಟಿಗಳಿಗೆ ನೀಡಿದ ₹56 ಸಾವಿರ ಕೋಟಿ ಎಲ್ಲಿಯದ್ದು? ಅಭಿವೃದ್ಧಿ ಕಾರ್ಯಗಳಿಗೆ ನೀಡಿದ ₹1.20 ಲಕ್ಷ ಕೋಟಿ ಎಲ್ಲಿಯದ್ದು? ಇದೆಲ್ಲಾ ಎಲ್ಲಿಂದ ಬಂತು ಮಿಸ್ಟರ್ ಮೋದಿ’ ಎಂದು ಪ್ರಶ್ನಿಸಿದರು ರೆಡ್ಡಿ ವಿರುದ್ಧ ವಾಗ್ದಾಳಿ: ಚುನಾವಣಾ ಪ್ರಚಾರದ ಪ್ರತಿ ಬಹಿರಂಗ ಸಭೆಯಲ್ಲೂ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಯ ಕಾಲದ ಘಟನಾವಳಿಗಳನ್ನು ನೆನಪಿಸಿದರು. ‘ಬಳ್ಳಾರಿ ಜಿಲ್ಲೆಯು ಪ್ರತ್ಯೇಕ ರಾಜ್ಯ ಎಂಬಂತಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರಿಗೇ ಇಲ್ಲಿ ಮರ್ಯಾದೆ ಸಿಗುತ್ತಿರಲಿಲ್ಲ. ಅಕ್ರಮ ಗಣಿಗಾರಿಕೆ ಪ್ರಶ್ನೆ ಮಾಡಿದ ನಮಗೆ ಬಳ್ಳಾರಿಗೆ ಬರುವಂತೆ ಸವಾಲು ಹಾಕಲಾಯಿತು. ಅದನ್ನು ಮೆಟ್ಟಿ ನಾವು ಬಳ್ಳಾರಿಗೆ ಪಾದಯಾತ್ರೆ ನಡೆಸಿದೆವು’ ಎಂದು ಹೇಳಿದರು. ‘ಹಿಂದಿನ ಕಹಿ ಘಟನೆಗಳು ಮರುಕಳಿಸಬಾರದು ಎಂದಾದರೆ ಬಳ್ಳಾರಿ ಶಾಂತವಾಗಿರಬೇಕಿದ್ದರೆ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.