ಬಳ್ಳಾರಿ: ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ತೊಡೆತಟ್ಟಿ ಪ್ರಚೋದಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಎಲ್ಲ ಸುತ್ತುಗಳು ಪೂರ್ಣಗೊಂಡ ಬಳಿಕ ಬಂಗಾರು ಹನುಮಂತ, ಸೋಲಿನ ನಿರಾಸೆಯೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರ ಹೋಗುತ್ತಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಲಾರಂಭಿಸಿದರು.
ಕಾಂಗ್ರೆಸ್ ಕಾರ್ಯಕರ್ತನ್ನು ಕೂಗಿ ಕರೆದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ‘ಏಯ್ ಇಲ್ಲಿ ನೋಡಪ್ಪ, ಶೆಡ್ಡು ಹೊಡಿತೀನಿ ನೋಡಿಲ್ಲಿ‘ ಎಂದು ತೊಡೆ ತಟ್ಟಿದರು. ಆಗ ಅವರ ಸುತ್ತಲಿದ್ದ ಬಿಜೆಪಿ ಕಾರ್ಯಕರ್ತರು ಜೋರಾಗಿ ಕಿರುಚಿದರು.
ಪರಿಸ್ಥಿತಿ ಕೈಮೀರಿ ಹೋಗುವುದನ್ನು ಅರಿತ ಪೊಲೀಸರು ಬಂಗಾರು ಹನುಮಂತ ಅವರನ್ನು ತಡೆದು ಕಾರು ಹತ್ತಿಸಿ ಕಳುಹಿಸಿದರು. ಈ ಘಟನೆ ಪರಿಸ್ಥಿತಿ ಕಾವೇರುವಂತೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.