ಬಳ್ಳಾರಿ: ಟಿಕೆಟ್ ಘೋಷಣೆಗೂ ಮುನ್ನ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದಿದ್ದ ‘ಸಾಮಾಜಿಕ ನ್ಯಾಯ’ದ ವಿವಾದ ತಣ್ಣಾಗಾಯಿತು ಎಂದುಕೊಂಡರೂ, ಅಂತರ್ಯದಲ್ಲಿ ಗಟ್ಟಿಯಾಗಿ ಉಸಿರಾಡುತ್ತಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಇ.ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡಿದ್ದರಿಂದ ಮುನಿಸಿಕೊಂಡಿದ್ದ ಬಹುತೇಕ ನಾಯಕರು ನಾಮಪತ್ರ ಸಲ್ಲಿಕೆ ದಿನ ಕಾಣಿಸಿಕೊಂಡಿದ್ದು ಬಿಟ್ಟರೆ ಈವರೆಗೆ ಎಲ್ಲಿಯೂ ಕಂಡಿಲ್ಲ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್ ಮಟ್ಟಿಗೆ ಪ್ರತಿಷ್ಠೆಯ ವಿಷಯ. ತುರುಸಿನ ಪೈಪೋಟಿ ಇರಬೇಕಿದ್ದ ಸಂಡೂರು ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಏಕಾಂಗಿ ಆಗಿದ್ದಾರೆ. ಸಂತೋಷ್ ಲಾಡ್ ಅವರ ಸಂಬಂಧಿ ಅಕ್ಷಯ್ ಲಾಡ್ ಅವರೊಬ್ಬರೇ ಅನ್ನಪೂರ್ಣ ಬೆನ್ನಿಗಿರುವ ಸ್ಥಳೀಯ ನಾಯಕ ಎಂಬಂತಾಗಿದೆ.
‘ತುಕಾರಾಂ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ನಾವು ಮಾಡಬೇಕಾದ್ದನ್ನು ಮಾಡುತ್ತೇವೆ’ ಎಂದು ಹೇಳಿದ್ದ ಬಂಡಾಯ ನಾಯಕರು ತಮ್ಮ ಮಾತನ್ನು ನಿಜ ಮಾಡಲು ಹೊರಟಂತಿದೆ ಎಂಬ ಚರ್ಚೆ ಕಣದಲ್ಲಿ ನಡೆದಿದೆ.
‘ಅವರಿಂದ ಏನಾಗುತ್ತದೆ? ಅವರಿಂದ ಎಷ್ಟು ವೋಟು ಬರಲು ಸಾಧ್ಯ ಎಂಬ ಧಾಟಿಯಲ್ಲಿ ತುಕಾರಾಂ ಮಾತಾಡುತ್ತಾರೆ. ಅವರ ಮನಸ್ಸಲ್ಲಿ ಹೀಗಿದ್ದ ಮೇಲೆ ನಾವ್ಯಾಕೆ ಕೆಲಸ ಮಾಡಬೇಕು’ ಎಂಬ ಪ್ರಶ್ನೆ ಕೆಲ ನಾಯಕರದ್ದು.
ಇದಕ್ಕೆ ಪುಷ್ಟಿ ಎಂಬಂತೆ ಸಂಸದ ತುಕಾರಾಂ ಕರೆಯುವ ಸಭೆಗಳಿಗೆ ಬಹುತೇಕ ಮುಖಂಡರು, ಕಾರ್ಯಕರ್ತರು ಗೈರು ಆಗುತ್ತಾರೆ. ಆದರೆ, ಸಚಿವ ಸಂತೋಷ್ ಲಾಡ್ ಬಂದಾಗ ಎಲ್ಲರೂ ಹಾಜರಾಗುತ್ತಾರೆ.
‘ಸಂಡೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರ. ಇಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ಕೊಡಬೇಕೆ ಹೊರತು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಬಾರದು. ಸಂಸದ ಇ. ತುಕಾರಾಂ ಅವರ ಕುಟುಂಬದ ಅಲ್ಲದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು’ ಎಂಬುದು ಸ್ಥಳೀಯ ನಾಯಕರ ಒತ್ತಾಯವಾಗಿತ್ತು.
‘ಶಾಸಕರಾಗುವ ಅವಕಾಶ ಸಿಗುವುದಿದ್ದರೆ ಈ ಎರಡು ಅವಧಿಯಲ್ಲಿ ಸಿಗಬೇಕು. ಅಂಥದ್ದರಲ್ಲಿ ತುಕಾರಾಂ ಕುಟುಂಬಕ್ಕೇ ಮತ್ತೆ ಮಣೆ ಹಾಕಲಾಗಿದೆ. ನಮಗೆ ಅವಕಾಶ ವಂಚನೆಯಾಗಿದೆ. ಮುಂದೆ ಮೀಸಲಾತಿ ಬದಲಾದಾಗ, ಸಂತೋಷ್ ಲಾಡ್ ಅವರೇ ಬರುತ್ತಾರೆ. ಆಗ ನಮಗೆ ಎಲ್ಲಿ ಅವಕಾಶ ಸಿಗುತ್ತದೆ’ ಎಂಬುದು ಪರಿಶಿಷ್ಟ ಪಂಗಡದ ಬಹುತೇಕ ನಾಯಕರ ನೋವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ನೇತೃತ್ವದ ಸಭೆಯಲ್ಲಿ ಈ ವಿವಾದವನ್ನು ತಾತ್ಕಾಲಿಕವಾಗಿ ತಣ್ಣಗೆ ಮಾಡಲಾಗಿತ್ತಾದರೂ, ಅದು ತಣ್ಣಗಾದಂತೆ ಕಾಣುತ್ತಿಲ್ಲ.
ಬಳ್ಳಾರಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಇದ್ದಾರೆ. ಈಗ ಉಪ ಚುನಾವಣೆ ನಡೆಯುತ್ತಿರುವ ಸಂಡೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದಿತ್ತು. ನಾಮಪತ್ರ ಸಲ್ಲಿಕೆ ದಿನ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ ಬಂದು ಹೋಗಿದ್ದು ಬಿಟ್ಟರೆ ಇನ್ಯಾರೂ ಈ ವರೆಗೆ ಇತ್ತ ತಲೆ ಹಾಕಿಲ್ಲ. ಯಾಕೆ ಹೀಗೆ ಎಂದು ಕಾಂಗ್ರೆಸ್‌ನ ನಾಯಕರನ್ನು ವಿಚಾರಿಸಿದರೆ, ‘ತುಕಾರಾಂ ವರ್ತನೆ’ ಎಂಬ ಉತ್ತರ ಸಿಗುತ್ತದೆ.
ಉಪಚುನಾವಣೆಗೆ ತುಕಾರಾಂ ಕುಟುಂಬಕ್ಕೆ ಟಿಕೆಟ್ ನೀಡುವುದು ವಾಗ್ದಾನವಾಗಿತ್ತು. ಸಣ್ಣಪುಟ್ಟ ಸಮಸ್ಯೆ ಆರಂಭದಲ್ಲಿದ್ದವು. ಈಗ ಏನೂ ಇಲ್ಲ. ಹಬ್ಬದ ನಂತರ ಅಬ್ಬರ ಕಾಣಲಿದೆ.–ಅಲ್ಲಂ ಪ್ರಶಾಂತ್ ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.