ADVERTISEMENT

Sandur Bypolls: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಬಳಿ 2.5 ಕೆ.ಜಿ ‘ಬಂಗಾರ’!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:58 IST
Last Updated 24 ಅಕ್ಟೋಬರ್ 2024, 0:58 IST
ಬಂಗಾರು ಹನುಮಂತ 
ಬಂಗಾರು ಹನುಮಂತ    

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಬಳಿ 2.5 ಕೆ.ಜಿ ಚಿನ್ನಾಭರಣವಿದ್ದು, ಅವುಗಳ ಒಟ್ಟು ಮೌಲ್ಯ ₹2 ಕೋಟಿ. ಅಲ್ಲದೇ, 25 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಅವರು ಹೊಂದಿದ್ದು ಅವುಗಳ ಒಟ್ಟು ಮೌಲ್ಯ ₹20 ಲಕ್ಷ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಹನುಮಂತ ಪತ್ನಿ ಬಂಗಾರು ರೂಪಶ್ರೀ ಬಳಿ 500 ಗ್ರಾಂ ಚಿನ್ನಾಭರಣವಿದ್ದು, ಬೆಲೆ ₹40 ಲಕ್ಷ ಎಂದು ಉಲ್ಲೇಖಿಸಲಾಗಿದೆ. ಅವರು 15 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಹೊಂದಿದ್ದು ಬೆಲೆ ₹12 ಲಕ್ಷ ಎಂದು ನಮೂದಿಸಿದೆ.  

ಹನುಮಂತ ತಂದೆ ಬಂಗಾರು ಸೊಮಪ್ಪ ಮತ್ತು ತಾಯಿ ಬಂಗಾರು ಹುಲಿಗೆಮ್ಮ ಬಳಿ ಕ್ರಮವಾಗಿ 350 ಗ್ರಾಂ ಮತ್ತು 450 ಗ್ರಾಂ ಚಿನ್ನವಿದೆ. ಜತೆಗೆ ತಂದೆ ಬಳಿ 5 ಕೆ.ಜಿ, ತಾಯಿ ಬಳಿ 15 ಕೆ.ಜಿ ಬೆಳ್ಳಿ ವಸ್ತುಗಳಿವೆ ಇದೆ ಎಂದು ತಿಳಿಸಲಾಗಿದೆ. 

ADVERTISEMENT

ಇನ್ನು ಹನುಮಂತ ಅವರ ಕೈಲಿ ₹5 ಲಕ್ಷ ಹಣವಿದೆ. ಐದು ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ಬಂಗಾರು ಗುಹಾನ್‌ ಅಗ್ರಿ ಅಂಡ್‌ ಪೋಲ್ಟ್ರಿ ಹೆಸರಿನಲ್ಲಿಯೂ ಪ್ರತ್ಯೇಕವಾಗಿ ಖಾತೆ ಹೊಂದಿದ್ದಾರೆ. 

ಮಂಗಳೂರಿನಲ್ಲಿ ಅವರು ರೆಸಾರ್ಟ್‌ ಕೂಡ ಹೊಂದಿದ್ದು ಅದರ ಮೌಲ್ಯ ₹1,07,38,000 ಎಂದು ತಿಳಿಸಲಾಗಿದೆ. ಸ್ಟೋನ್‌ ಕ್ರಷರ್‌, ಪೌಲ್ಟ್ರಿ ಫಾರಂಗಳೂ ಅವರ ಮಾಲೀಕತ್ವದಲ್ಲಿದೆ.  

ಹನುಮಂತ ಅವರು ಫಾರ್ಚುನಾರ್‌ ಕಾರು, ಬುಲೆಟ್‌ ಬೈಕ್‌, ಟ್ರ್ಯಾಕ್ಟರ್‌ ಟ್ರೈಲರ್‌, ಒಂದು ಜೆಸಿಬಿಯ ಒಡೆಯ.    

ಬಂಗಾರು ಹನುಮಂತ ಅವರ ವೈಯಕ್ತಿ ಚರಾಸ್ತಿಗಳ ಒಟ್ಟು ಮೌಲ್ಯ ₹7,58,64,019. ಪತ್ನಿಯ ಚರಾಸ್ತಿ ₹1,69,82,571 ಆಗಿದೆ. 

ಇನ್ನು ಬಂಗಾರು ಹನುಮಂತ ಅವರಿಗೆ 28 ಕಡೆಗಳಲ್ಲಿ ಒಟ್ಟು 54.11 ಎಕರೆ ಕೃಷಿ ಭೂಮಿ ಇದೆ. ಇದೆಲ್ಲವೂ ಸ್ವಯಾರ್ಜಿತ ಎಂದು ತೋರಿಸಲಾಗಿದೆ. ಪತ್ನಿಯ ಬಳಿ ಒಟ್ಟು 27.27 ಎಕರೆ ಜಮೀನಿದ್ದು, ಇದೆಲ್ಲವೂ ದಾನವಾಗಿ ಬಂದಿದ್ದು ಎಂದು ಉಲ್ಲೇಖಿಸಲಾಗಿದೆ. ತಮ್ಮ ಬಳಿ ಇರುವ ಭೂಮಿಯ ಪ್ರಸ್ತುತ ಮೌಲ್ಯವನ್ನು ಬಂಗಾರು ಹನುಮಂತ ಅವರು ₹4 ಕೋಟಿ ಎಂದು ತೋರಿಸಿದ್ದಾರೆ.

ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಅವರು ಒಟ್ಟು 34 ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವೆಲ್ಲವುಗಳ ಮೇಲಿನ ಹೂಡಿಕೆ ಸೇರಿದಂತೆ ಒಟ್ಟು ಮೌಲ್ಯ ₹11 ಕೋಟಿ ಎಂದು ತಿಳಿಸಲಾಗಿದೆ.  

ಪತ್ನಿ ಬಳಿ 11 ಕಟ್ಟಡಗಳಿವೆ. ಇವೆಲ್ಲವೂ ಸ್ವಯಾರ್ಜಿತ ಎಂದು ಉಲ್ಲೇಖಿಸಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ ₹2.56 ಕೋಟಿ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಬಂಗಾರು ಹನುಮಂತ ಅವರ ಒಟ್ಟು ಸಾಲ ಮತ್ತು ಹೊಣೆಗಾರಿಕೆ ಮೊತ್ತ ₹2,54,83,569 ಆಗಿದೆ. ಪತ್ನಿಯದ್ದು 1,35,04,660 ಆಗಿದೆ. 

ಬಂಗಾರು ಹನುಮಂತ ಅವರ ವಿರುದ್ಧ ಯಾವುದೇ ದಾವೆ, ಪ್ರಕರಣಗಳು ಇಲ್ಲ ಎಂಬುದು ಅಫಿಡವಿಟ್‌ನಲ್ಲಿ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.