ADVERTISEMENT

ಸಂಡೂರು: ಸಂಪತ್ತಿನ ನಾಡಿನ ಹಿಡಿತಕ್ಕೆ ಸೆಣಸು

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರತಿಷ್ಠೆ ಜೋರು

ಆರ್. ಹರಿಶಂಕರ್
Published 10 ನವೆಂಬರ್ 2024, 23:41 IST
Last Updated 10 ನವೆಂಬರ್ 2024, 23:41 IST
   

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆ ಕಣದಲ್ಲಿ ಬಿಜೆಪಿಯಿಂದ ಪಕ್ಷದ ಎಸ್‌.ಟಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತ ಮತ್ತು ಕಾಂಗ್ರೆಸ್‌ನಿಂದ ಸಂಸದ ತುಕಾರಾಂ ಅವರ ಪತ್ನಿ ಇ. ಅನ್ನಪೂರ್ಣ ಕಣದಲ್ಲಿದ್ದಾರೆ. ದಿನಗಳು ಕಳೆದಂತೆ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಬಂಗಾರು ಹನುಮಂತ ಅವರ ಬೆನ್ನ ಹಿಂದೆ ಗಾಲಿ ಜನಾರ್ದನ ರೆಡ್ಡಿ ಇದ್ದರೆ, ಇ.ಅನ್ನಪೂರ್ಣ ಅವರ ಪರ ಸಚಿವ ಸಂತೋಷ್‌ ಲಾಡ್‌ ವ್ಯಾಪಕ ಪ್ರಚಾರ ನಡೆಸಿದ್ದಾರೆ. ರಾಜಕೀಯವಾಗಿ ಮತ್ತೆ ಪ್ರವರ್ಧಮಾನಕ್ಕೆ ಬರುವ ಮತ್ತು ಬಿಜೆಪಿಯನ್ನು ಮುಂಚೂಣಿಗೆ ತರುವ ಗುರಿಯನ್ನು ಜನಾರ್ದನ ರೆಡ್ಡಿ ಹೊಂದಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲೂ ಕಳೆದ 20 ವರ್ಷಗಳಿಂದ ತಮ್ಮ ಅಣತಿ ಅನುಸಾರ ಕ್ಷೇತ್ರವನ್ನು ಭದ್ರವಾಗಿ ಕಾಪಾಡಿಕೊಂಡಿರುವ ಲಾಡ್‌ ಅವರು, ಹಿಡಿತ ಕಾಯ್ದುಕೊಳ್ಳಬೇಕೆಂದು ಬಯಸಿದ್ದಾರೆ.

ಅಪಾರ ಪ್ರಾಕೃತಿಕ ಸಂಪತ್ತುವುಳ್ಳ ಸಂಡೂರು ಕ್ಷೇತ್ರದಲ್ಲಿ ಹತ್ತಾರು ಸಾವಿರ ಕೋಟಿಗಳಷ್ಟು ಗಣಿ ವ್ಯವಹಾರ ನಡೆಯುತ್ತದೆ. ಗಣಿ ಸಂಪತ್ತಿನ ಮೇಲೆ ಎರಡೂ ಪಕ್ಷಗಳ ಕಣ್ಣಿದ್ದು, ಅವುಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ಎರಡೂ ಪಕ್ಷಗಳ ಉದ್ದೇಶ. ಹೀಗಾಗಿ ಕ್ಷೇತ್ರದ ಚುನಾವಣೆ ಮೇಲೆ ಹಲವು ವಿಷಯಗಳು ಪ್ರಭಾವ ಬೀರುತ್ತಿವೆ.

ADVERTISEMENT

ಕ್ಷೇತ್ರದಲ್ಲಿ ಒಂದು ಕಡೆ ಸಂತೋಷ್‌ ಲಾಡ್‌ ಮೇಲೆ ಜನರು ಅಕ್ಕರೆಗರೆಯುವುದು ಕಂಡರೆ, ಇನ್ನೊಂದು ಕಡೆ ಜನಾರ್ದನ ರೆಡ್ಡಿ ಅವರ ಬಗೆಗೆ ಅವ್ಯಕ್ತ ಭಯ ಇರುವುದೂ ಕಾಣುತ್ತದೆ. ಇನ್ನುಳಿದಂತೆ ಇಲ್ಲಿ ಸಂಸದ ತುಕಾರಾಂ ಮತ್ತು ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವೈಯಕ್ತಿಕ ವರ್ಚಸ್ಸು ಕೂಡ ಇದೆ. 

ಬಿಜೆಪಿ ಅಧಿಕಾರಕ್ಕೆ ಬಂದರೆ ಗಣಿ ಗುತ್ತಿಗೆಗೆ ಮತ್ತೆ ತೊಂದರೆಯಾಗುತ್ತದೆ ಎಂದು ಕಾಂಗ್ರೆಸ್‌ ಪದೇ ಪದೇ ಪ್ರಸ್ತಾಪಿಸುತ್ತಿದೆ. ಕ್ಷೇತ್ರದಲ್ಲಿ ಮೂರು ದಿನ ಉಳಿದು ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2008ರ ಕಾಲದ ಗಣಿ ಅಕ್ರಮಗಳನ್ನೇ ಹೆಚ್ಚು ಪ್ರಸ್ತಾಪಿಸಿದ್ದಾರೆ. ಈ ಅಂಶಗಳು ಗಣಿ ಮಾಲೀಕರು ಸೇರಿದಂತೆ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂಬುದೇ ಕುತೂಹಲದ ಸಂಗತಿ.

ಸಂಡೂರಿನ ಘೋರ್ಪಡೆ ರಾಜವಂಶಸ್ಥರು ಈ ಬಾರಿಯ ಚುನಾವಣೆಯಲ್ಲಿ ಯಾರ ಪರವೂ ಕೆಲಸ ಮಾಡುತ್ತಿಲ್ಲ.  ಬಿಜೆಪಿಯಲ್ಲಿ ಇರುವ ಕಾರ್ತಿಕೇಯ ಘೋರ್ಪಡೆ ಪ್ರಚಾರಕ್ಕೇ ಬಂದಿಲ್ಲ. ‘ನಾವು ಹೇಳಿದವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿಲ್ಲ’ ಎಂಬುದು ಅವರ ಮುನಿಸು ಎಂಬ ಮಾತಿದೆ. ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಇರುವ ವಿ.ವೈ. ಘೋರ್ಪಡೆ ಬಹಿರಂಗವಾಗಿ ಕಾಂಗ್ರೆಸ್‌ ನಡೆಯನ್ನು ವಿಮರ್ಶಿಸಿದ್ದು, ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.‌‌ 

ಎರಡೂ ಪಕ್ಷಗಳಿಗೂ ಆರಂಭದಲ್ಲಿ ಬಂಡಾಯದ ಭೀತಿ ಎದುರಾಗಿತ್ತು. ಬಿಜೆಪಿಯೊಳಗಿನ ಬೇಗುದಿ ಶಮನ ಮಾಡುವಲ್ಲಿ ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ. ಶ್ರೀರಾಮುಲು ಮತ್ತು ತಮ್ಮ ನಡುವಿನ ಮುನಿಸು ಬಹಿರಂಗವಾಗದಂತೆಯೂ ಅವರು ನೋಡಿಕೊಂಡಿದ್ದಾರೆ. ಆದರೆ, ಸಾಮಾಜಿಕ ನ್ಯಾಯದ ಪ್ರಶ್ನೆಗಳು ಎದ್ದಿರುವ ಕಾಂಗ್ರೆಸ್‌ನಲ್ಲಿ ಬಂಡಾಯ ಸಂಪೂರ್ಣ ಶಮನವಾಗಿಲ್ಲ. ಈ ಎಲ್ಲಾ ಅಂಶಗಳು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.