ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ, ಬಿಜೆಪಿ ಸೋತು ಶರಣಾಗಿದೆಯಾದರೂ, ಇದೇ ಮೊದಲ ಬಾರಿಗೆ ತೀವ್ರ ಪೈಪೋಟಿ ನೀಡಿದೆ. ಈ ಚುನಾವಣೆ ಎರಡೂ ಪಕ್ಷಗಳಿಗೂ ಪಾಠ ಹೇಳಿ ಕೊಡುತ್ತಿದೆ.
ಕಾಂಗ್ರೆಸ್ ಎಂದಿನಂತೆ ತನ್ನ ಸಾಂಪ್ರದಾಯಿಕ ಮತಗಳನ್ನು ರಕ್ಷಿಸಿಕೊಂಡು ಗೆಲ್ಲುತ್ತಿರುವುದು ಈ ಚುನಾವಣೆಯಲ್ಲೂ ಮುಂದುವರಿದಿದೆ. ಆದರೆ, ಬಿಜೆಪಿ ಪ್ರತಿ ಬಾರಿ ಚದುರಿ ಹೋಗುತ್ತಿದ್ದ ತನ್ನೆಲ್ಲ ಮತಗಳನ್ನು ಕ್ರೋಢೀಕರಿಸುವಲ್ಲಿ ಈ ಬಾರಿ ಯಶಸ್ವಿಯಾಗಿದೆ. ಜತೆಗೆ ಹೊಸ ಮತದಾರರನ್ನೂ ತನ್ನತ್ತ ಸೆಳೆಯುತ್ತಿರುವುದು ಈ ಚುನಾವಣೆಯಿಂದ ಗೊತ್ತಾಗುತ್ತಿದೆ.
ಮೊದಲಿನಿಂದಲೂ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿರುವ ಕಾಂಗ್ರೆಸ್ ಈ ಚುನಾವಣೆಯಲ್ಲೂ ಅದನ್ನು ಮುಂದುವರಿಸಿದೆಯಾದರೂ, ಕಾಲ ಕ್ರಮೇಣ ತನ್ನ ಹಿಡಿತ ಸಡಿಲಗೊಳಿಸುತ್ತಾ ಸಾಗಿರುವುದು ಕಂಡು ಬಂದಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಇತಿಹಾಸವನ್ನು 2004ರ ಹಿಂದಿನ ಮತ್ತು ನಂತರದ ಕಾಲಘಟ್ಟವಾಗಿ ಎರಡು ಭಾಗಗಳಾಗಿ ವಿಭಾಗಿಸಿ ನೋಡಿದರೆ ಕಾಂಗ್ರೆಸ್ ತನ್ನ ಬಲವನ್ನು ನಿಧಾನವಾಗಿ ಸಡಿಸಲಿಸುತ್ತಿರುವುದು, ಬಿಜೆಪಿ ನಿಧಾನಕ್ಕೆ ಮೇಲೇಳುತ್ತಿರುವುದು ಕಾಣುತ್ತದೆ.
1972 ರಿಂದ 1999ರ ವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗರಿಷ್ಠ ಶೇ.63.67 (ಹೀರೋಜಿಲಾಲ್–1983), ಕನಿಷ್ಠ ಶೇ 53.05 (ಎಂ.ವೈ ಘೋರ್ಪಡೆ – 1994)ರಷ್ಟು ಮತಗಳನ್ನು ಪಡೆದು ಗೆದ್ದಿದೆ. ಆದರೆ, ಎಂದೂ ಶೇ. 50ರ ಘಟ್ಟದಿಂದ ಇಳಿದಿರಲಿಲ್ಲ. ಆದರೆ, 2004ರ ನಂತದ ಕಾಲಘಟ್ಟದಲ್ಲಿ ಕಾಂಗ್ರೆಸ್ ಗೆದ್ದಿರುವುದೆಲ್ಲ ಶೇ. 45ರಿಂದ ಶೇ.50ರ ಒಳಗಿನ ಮತಗಳಿಂದ ಮಾತ್ರ.
1999ರ ಬಳಿಕ ಕಾಂಗ್ರೆಸ್ ಈ ಉಪ ಚುನಾವಣೆಯಲ್ಲಿ ಶೇ. 50ರ ಗಡಿ ದಾಟಿದಿದೆ. ಶೇ. 51.95ರಷ್ಟು (93,616 ) ಮತಗಳನ್ನು ಈ ಚುನಾವಣೆಯಲ್ಲಿ ಪಡೆದಿದೆ. ಆದರೆ, ಇದು ಕಾಂಗ್ರೆಸ್‌ಗೆ ಆಶಾದಾಯಕವೇಗೇನೂ ಕಾಣುತ್ತಿಲ್ಲ. 2004ರ ನಂತರದ ಚುನಾವಣೆಗಳಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಕ್ರೋಢೀಕೃತ ಪ್ರದರ್ಶನ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿ ಶೇ. 46.06ರಷ್ಟು ಮತ ಗಳಿಸಿ ಬೆರಗು ಮೂಡಿಸಿದೆ.
‘ಬಿಜೆಪಿ ಎಷ್ಟೇ ಪ್ರಬಲಗೊಂಡರೂ, ಕಾಂಗ್ರೆಸ್ ತನ್ನ ಮೂಲ, ಸಾಂಪ್ರದಾಯಿಕ ಮತಗಳನ್ನು ಪಡೆಯುವಲ್ಲಿ ಸದಾ ಯಶಸ್ವಿಯಾಗುತ್ತದೆ. ಒಟ್ಟು ಮತಗಳಲ್ಲಿ ಅರ್ಧದಷ್ಟನ್ನು ಪಡೆಯುವಲ್ಲಿ ಅದಕ್ಕೆ ಕಷ್ಟವೇ ಆಗುವುದಿಲ್ಲ. ಹೀಗಾಗಿ ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ ಬಲ ಕಳೆದುಕೊಳ್ಳುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
‘ಆದರೆ ಅದೇ ಹೊತ್ತಿನಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸುತ್ತಾ ಸಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೊಸ ಮತದಾರರು ಅದರ ಕಡೆ ವಾಲುತ್ತಿರುವುದರಿಂದಲೇ ಬಿಜೆಪಿ ಶೇ. 45ರ ಘಟ್ಟ ದಾಟಲು ಸಾಧ್ಯವಾಗುತ್ತಿದೆ’ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.
‘ಕೆಲ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದರೆ, ಬಳ್ಳಾರಿ ಜಿಲ್ಲೆಯ ಸ್ಥಳೀಯ ನಾಯಕರು ತಮ್ಮ ಮುನಿಸು ಪಕ್ಕಕ್ಕಿಟ್ಟು ಒಗ್ಗಟ್ಟಿನಿಂದ ದುಡಿದಿದ್ದರೆ, ಸಂಪನ್ಮೂಲದ ಸರಿಯಾದ ಹಂಚಿಕೆಯಾಗಿದ್ದಿದ್ದರೆ ಈ ಚುನಾವಣೆ ಇನ್ನಷ್ಟು ರಂಗೇರುತ್ತಿತ್ತು’ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ.
ಸಂಡೂರು ಕ್ಷೇತ್ರ: ಈ ವರೆಗೆ ಗೆದ್ದವರು
ವರ್ಷ;ಗೆದ್ದವರು;ಪಕ್ಷ;ಶೇಕಡವಾರು ಮತ
1972;ಎಂ.ವೈ ಘೋರ್ಪಡೆ;ಕಾಂಗ್ರೆಸ್;60.43
1978;ಸಿ ರುದ್ರಪ್ಪ;ಕಾಂಗ್ರೆಸ್ (ಐ);62.22
1983;ಹೀರೋಜಿ ವಿ.ಎಸ್ ಲಾಡ್;ಕಾಂಗ್ರೆಸ್;63.67
1985;ಯು ಭೂಪತಿ;ಜೆಎನ್‌ಪಿ;56.16
1989;ಎಂ.ವೈ ಘೋರ್ಪಡೆ;ಕಾಂಗ್ರೆಸ್;58.19
1994;ಎಂ.ವೈ ಘೋರ್ಪಡೆ;ಕಾಂಗ್ರೆಸ್;53.24
1999;ಎಂ.ವೈ ಘೋರ್ಪಡೆ;ಕಾಂಗ್ರೆಸ್;53.05
2004;ಸಂತೋಷ್ ಲಾಡ್;ಜೆಡಿಎಸ್;56.15
2008;ಇ.ತುಕಾರಾಂ;ಕಾಂಗ್ರೆಸ್;46.63
2013;ಇ.ತುಕಾರಾಂ;ಕಾಂಗ್ರೆಸ್;48.48
2018;ಇ.ತುಕಾರಾಂ;ಕಾಂಗ್ರೆಸ್;49.53
2023;ಇ.ತುಕಾರಾಂ;ಕಾಂಗ್ರೆಸ್;45.19
2024;ಇ.ಅನ್ನಪೂರ್ಣಾ;ಕಾಂಗ್ರೆಸ್;51.95
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.