ADVERTISEMENT

ಸಂಡೂರು ಉಪಚುನಾವಣೆ: ಸುಲಭ ಕ್ಷೇತ್ರದಲ್ಲಿ ಕಷ್ಟದ ಗೆಲುವು

ಕಾಂಗ್ರೆಸ್‌–ಬಿಜೆಪಿ ಮತಗಳ ಅಂತರದಲ್ಲಿ ಭಾರಿ ಕುಸಿತ

ಆರ್. ಹರಿಶಂಕರ್
Published 23 ನವೆಂಬರ್ 2024, 18:41 IST
Last Updated 23 ನವೆಂಬರ್ 2024, 18:41 IST
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪತ್ನಿ ಅನ್ನಪೂರ್ಣ ಅವರಿಗೆ ಸಿಹಿ ತಿನಿಸುತ್ತಿರುವ ಬಳ್ಳಾರಿ ಸಂಸದ ಇ. ತುಕಾರಾಂ. ಚಿತ್ರದಲ್ಲಿ ಪುತ್ರ ರಘುನಂದನ್‌ ಸೇರಿದಂತೆ ಹಲವರು ಇದ್ದಾರೆ.  
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪತ್ನಿ ಅನ್ನಪೂರ್ಣ ಅವರಿಗೆ ಸಿಹಿ ತಿನಿಸುತ್ತಿರುವ ಬಳ್ಳಾರಿ ಸಂಸದ ಇ. ತುಕಾರಾಂ. ಚಿತ್ರದಲ್ಲಿ ಪುತ್ರ ರಘುನಂದನ್‌ ಸೇರಿದಂತೆ ಹಲವರು ಇದ್ದಾರೆ.     

ಬಳ್ಳಾರಿ: ರಾಜ್ಯದ ಮೂರು ಉಪಚುನಾವಣೆ ಕ್ಷೇತ್ರಗಳ ಪೈಕಿ ಸಂಡೂರಿನಲ್ಲಿ ಕಾಂಗ್ರೆಸ್‌ ಅನಾಯಾಸವಾಗಿ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಫಲಿತಾಂಶವನ್ನು ಗಮನಿಸಿದರೆ ಕಾಂಗ್ರೆಸ್‌ ಕಷ್ಟಪಟ್ಟು, ಅತೀ ಕಡಿಮೆ ಅಂತರದಲ್ಲಿ ಗೆದ್ದಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇ.ತುಕಾರಾಂ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಇಲ್ಲಿ ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಅವರ ಪತ್ನಿ ಇ. ಅನ್ನಪೂರ್ಣ ಗೆಲುವಿನ ಅಂತರ 9,649ಕ್ಕೆ ಇಳಿದಿದೆ. ಈ ಹಿಂದಿನ ಚುನಾವಣೆಗಳಂತೆ ಈ ಬಾರಿ ಮತ ಒಡೆಯಲು ಬಿಜೆಪಿಯ ಬಂಡಾಯ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ಹಾಗಾಗಿಯೇ ಕಾಂಗ್ರೆಸ್‌ ಕಷ್ಟಪಟ್ಟು ದಡ ಸೇರಬೇಕಾಯಿತು.  

ಒಂದು ಹಂತದಲ್ಲಿ ಕ್ಷೇತ್ರ ‘ಕೈ’ ತಪ್ಪಲಿದೆ ಎಂದೇ ಹೇಳಲಾಗಿತ್ತು. ಆದರೆ, ಯಾವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನ ಕ್ಷೇತ್ರದಲ್ಲಿ ಉಳಿದು ಪ್ರಚಾರ ಮಾಡಿದ ಕಾರಣಕ್ಕೆ ಚುನಾವಣಾ ಕಣ ಕೊಂಚ ಬದಲಾಯಿತು. ಮೂರು ದಿನಗಳಲ್ಲಿ ಅವರು 17 ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರು. 

ADVERTISEMENT

ಮುಖ್ಯವಾಗಿ ಅಕ್ರಮ ಗಣಿಗಾರಿಕೆ ಕಾಲದ ಘಟನಾವಳಿಗಳನ್ನು ಸಿದ್ದರಾಮಯ್ಯ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಜನಾರ್ದನ ರೆಡ್ಡಿ ಅವರ ಮೇಲಿನ ಪ್ರಕರಣಗಳನ್ನು ಉಲ್ಲೇಖಿಸಿದ್ದರು. ಇದು ಗಣಿ ಮಾಲೀಕರು ಮತ್ತು ಗಣಿ ಕಾರ್ಮಿಕರು ಕಾಂಗ್ರೆಸ್‌ ಕಡೆಗೆ ತಿರುಗುವಂತೆ ಮಾಡಿದೆ.  

ಇದರ ಜತೆಗೆ, ಮತದಾನಕ್ಕೆ ಹಿಂದಿನ ದಿನ ಮಹಿಳಾ ಮತದಾರರ ಖಾತೆಗೆ ಬಂದು ಬಿದ್ದ ಗೃಹಲಕ್ಷ್ಮಿ ಹಣ, ಜನರೊಂದಿಗೆ ಆಪ್ತವಾಗಿ ವರ್ತಿಸುವ ಸಂತೋಷ್‌ ಲಾಡ್‌ ತಂತ್ರಗಾರಿಕೆ, ಒಳಮೀಸಲಾತಿ ಬಗ್ಗೆ ಇದ್ದ ಅನುಮಾನಗಳನ್ನು ನಿವಾರಿಸಲು ಸಚಿವ ಮುನಿಯಪ್ಪ, ಆಂಜನೇಯ ಪಟ್ಟ ಶ್ರಮ ಕಾಂಗ್ರೆಸ್‌ ಕೈ ಹಿಡಿದಿದೆ. ಇನ್ನೊಂದೆಡೆ, ವಕ್ಫ್‌ ವಿಚಾರವನ್ನು ಬಿಜೆಪಿ ಹಿಂಜಿದ ರೀತಿಯೂ ಅಲ್ಪಸಂಖ್ಯಾತ ಮತಗಳನ್ನು ಧ್ರುವೀಕರಿಸಿವೆ.  

ಇತ್ತ, ಆರಂಭದಲ್ಲಿ ಒಗ್ಗಟ್ಟಾಗಿ ಕಂಡಿದ್ದ ಬಿಜೆಪಿ ಮುಖಂಡರು ಮತದಾನದ ದಿನ ಹತ್ತಿರ ಬಂದಂತೆ ವಿಭಜಿತರಾಗಿರುವುದು ಗೋಚರಿಸತೊಡಗಿತು. ರಾಜ್ಯ ನಾಯಕರು ಬಂದಾಗಷ್ಟೇ ಸ್ಥಳೀಯ ನಾಯಕರು ಕಾಣಿಸಿಕೊಳ್ಳತೊಡಗಿದ್ದರು. ಬಳ್ಳಾರಿ ಬಿಜೆಪಿಯೊಳಗಿನ ಒಳರಾಜಕೀಯ, ಸಂಡೂರು ಗೆಲ್ಲಲಾಗದು ಎಂಬ ಕೀಳರಿಮೆ, ವಿಶ್ವಾಸದ ಕೊರತೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತಗೆ  ಸೋಲುಣಿಸಿದೆ. 

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪತ್ನಿ ಅನ್ನಪೂರ್ಣ ಅವರೊಂದಿಗೆ ಗೆಲುವಿನ ಹಸ್ತ ಪ್ರದರ್ಶನ ಮಾಡುತ್ತಿರುವ ಬಳ್ಳಾರಿ ಸಂಸದ ಇ. ತುಕಾರಾಂ. 
ಅನ್ನಪೂರ್ಣ ತುಕಾರಾಂ
ಸಂಡೂರಿನ ಜನ ಯಾವತ್ತೂ ಕಾಂಗ್ರೆಸ್‌ ಕೈ ಬಿಟ್ಟಿಲ್ಲ. ಅಭಿವೃದ್ಧಿ ಕೆಲಸ ಗ್ಯಾರಂಟಿಗಳು ಮಹಿಳೆಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದು ಒಗ್ಗಟಿನ ಹೋರಾಟ ನಮ್ಮ ಗೆಲುವಿಗೆ ಕಾರಣವಾಗಿದೆ
-ಇ. ಅನ್ನಪೂರ್ಣ ವಿಜೇತ ಕಾಂಗ್ರೆಸ್‌ ಅಭ್ಯರ್ಥಿ ಸಂಡೂರು
ಧರ್ಮ ಯುದ್ಧದಲ್ಲಿ ಅಧರ್ಮ ಗೆದ್ದಿದೆ. ಸೋಲಿನ ಹೊಣೆ ಹೊರುವೆ. ಮುಸ್ಲಿಂ ಕುರುಬರು ಬೆಂಬಲಿಸಿಲ್ಲ. ಕಾಂಗ್ರೆಸ್‌ ಹಣದ ಹೊಳೆ ಹರಿಸಿದೆ. ಮತದಾನದ ಹಿಂದಿನ ದಿನ ಗೃಹಲಕ್ಷ್ಮಿ ಹಣ ಬಿಡುಗಡೆ ಆಯಿತು
-ಬಂಗಾರು ಹನುಮಂತ ಬಿಜೆಪಿ ಪರಾಜಿತ ಅಭ್ಯರ್ಥಿ ಸಂಡೂರು
ಐದು ಸಾವಿರ ಮತಗಳ ಅಂತರದಿಂದ ನಮಗೆ ಗೆಲುವು ದಕ್ಕುವ ನಿರೀಕ್ಷೆ ಇತ್ತು. ಆದರೆ ಈ ರೀತಿ ಸೋಲುತ್ತೇವೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಸಂಡೂರು ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ
-ಜನಾರ್ದನ ರೆಡ್ಡಿ ಶಾಸಕ

ಸೆಡ್ಡು ಹೊಡೆದ ಹನುಮಂತ 

ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಂಡು  ‘ಬರ್ರಿ ಇಲ್ಲಿ... ಸೆಡ್ಡು ಹೊಡೆಯುತ್ತೀನಿ ನೋಡಿ’ ಎಂದು ತೊಡೆತಟ್ಟಿ ತೋರಿಸಿದರು. ಆಗ ಪರಿಸ್ಥಿತಿ ಕಾವೇರಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಬಂಗಾರು ಹನುಮಂತ ಅವರನ್ನು ಕಾರಿನಲ್ಲಿ ಕೂರಿಸಿ ಸ್ಥಳದಿಂದ ಬೇರೆಡೆಗೆ ಕಳುಹಿಸಿದರು. ಅದರೊಂದಿಗೆ ಪರಿಸ್ಥಿತಿ ತಿಳಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.