ADVERTISEMENT

ಉಪಚುನಾವಣೆ: ಸಂಡೂರಿನಲ್ಲಿ ಲೆಕ್ಕಕಷ್ಟೇ ಮೈತ್ರಿ!

ಜೆಡಿಎಸ್‌ ಸ್ಥಳೀಯ ನಾಯಕರು ಲೆಕ್ಕಕ್ಕಿಲ್ಲ| ರಾಜ್ಯ ನಾಯಕರು ಪತ್ತೆ ಇಲ್ಲ

ಆರ್. ಹರಿಶಂಕರ್
Published 1 ನವೆಂಬರ್ 2024, 0:20 IST
Last Updated 1 ನವೆಂಬರ್ 2024, 0:20 IST
ಕುಡತಿನಿಯಲ್ಲಿ ಬಿಜೆಪಿ ಕೈಗೊಂಡಿದ್ದ ಪ್ರಚಾರ ಸಭೆಯಲ್ಲಿ ಶ್ರೀರಾಮುಲು, ಅಭ್ಯರ್ತಿ ಬಂಗಾರು ಹನುಮಂತ, ಜನಾರ್ದನ ರೆಡ್ಡಿ, ದಿವಾಕರ್‌ ಮತ್ತಿತರರು ಇದ್ದರು. 
ಕುಡತಿನಿಯಲ್ಲಿ ಬಿಜೆಪಿ ಕೈಗೊಂಡಿದ್ದ ಪ್ರಚಾರ ಸಭೆಯಲ್ಲಿ ಶ್ರೀರಾಮುಲು, ಅಭ್ಯರ್ತಿ ಬಂಗಾರು ಹನುಮಂತ, ಜನಾರ್ದನ ರೆಡ್ಡಿ, ದಿವಾಕರ್‌ ಮತ್ತಿತರರು ಇದ್ದರು.    

ಬಳ್ಳಾರಿ: ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜ್ಯದ ಮೂರು ಉಪಚುನಾವಣೆಗಳನ್ನು ಎದುರಿಸುತ್ತಿವೆ. ಆದರೆ, ಸಂಡೂರಿನಲ್ಲಿ ಅದರ ಲಕ್ಷಣಗಳು ಕಾಣುತ್ತಿಲ್ಲ. ಕ್ಷೇತ್ರದಲ್ಲಿ ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಿರುವ ಬಿಜೆಪಿಯ ಜೊತೆಗೆ ಮೂಲ ಜೆಡಿಎಸ್‌ ನಾಯಕರು, ಕಾರ್ಯಕರ್ತರು ಎಲ್ಲಿಯೂ ಕಾಣಿಸುತ್ತಿಲ್ಲ. 

ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ನಾಮಪತ್ರ ಸಲ್ಲಿಸುವ ದಿನ ಜೆಡಿಎಸ್‌ ನಾಯಕ ಅನಿಲ್‌ ಲಾಡ್‌ ಮಾತ್ರ ಕಾಣಿಸಿಕೊಂಡಿದ್ದರು. ಅಲ್ಲಿಯೂ ಮೂಲ ಜೆಡಿಎಸ್‌ ಗೈರಾಗಿತ್ತು.  ನಂತರದ ದಿನಗಳಲ್ಲಿ ಲಾಡ್‌ ಕೂಡ ಸಕ್ರಿಯವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.  

‘ಬಿಜೆಪಿ ನಿತ್ಯ ನಡೆಸುವ ಪ್ರಚಾರ, ಸಭೆ ಮತ್ತು ಸಮಾರಂಭಗಳಿಗೆ ಜೆಡಿಎಸ್‌ನ ಯಾವ ನಾಯಕರನ್ನೂ ಆಹ್ವಾನಿಸುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಬೇಸರವಿದೆ. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಬಲ ಆಗಿಲ್ಲದಿರಬಹುದು. ಆದರೆ, ನಿರ್ಣಾಯಕವಾಗಲಿದೆ’ ಎಂದು ಜೆಡಿಎಸ್‌ನ ಕೆಲ ಮುಖಂಡರು ಹೇಳಿದರು.  

ADVERTISEMENT

ಜಿಲ್ಲೆಯಲ್ಲಿ ಜೆಡಿಎಸ್‌ 2013ರವರೆಗೆ ಗಟ್ಟಿ ಇತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವನ್ನು 1985ರಲ್ಲಿ ಮೊದಲ ಬಾರಿಗೆ ಮುರಿದಿದ್ದೇ ಜನತಾಪಕ್ಷ. ಅದರ ಬಳಿಕ ಮತ್ತೆ ಪ್ರಬಲಗೊಂಡಿದ್ದ ಕಾಂಗ್ರೆಸ್‌ನ್ನು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಂತೋಷ್‌ ಲಾಡ್‌ ಮತ್ತೆ ಸೋಲಿಸಿದ್ದರು. ಸಂತೋಷ್‌ ಲಾಡ್‌ ಪಕ್ಷ ತೊರೆದ ನಂತರವೂ ಜೆಡಿಎಸ್‌ ತನ್ನ ಸಾಮರ್ಥ್ಯ ಉಳಿಸಿಕೊಂಡಿತ್ತಾದರೂ, ನಂತರದ ಚುನಾವಣೆಗಳಲ್ಲಿ ಸೊರಗಿದೆ. ಆದರೂ, ಜೆಡಿಎಸ್‌ನ ಹಳೆ ಬೇರುಗಳು ಸಂಡೂರಿನಲ್ಲಿ ಜೀವಂತ ಇರುವುದು ಸುಳ್ಳಲ್ಲ. 

ಪರಿಸ್ಥಿತಿ ಹೀಗಿದ್ದರೂ, ಬಿಜೆಪಿ ನಾಯಕರು ಜೆಡಿಎಸ್‌ನ ಮೂಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಮಾತು ಕೇಳಿ ಬಂದಿವೆ. ಚುನಾವಣಾ ಜವಾಬ್ದಾರಿ ವಹಿಸಿಕೊಂಡಿರುವ ಜನಾರ್ದನ ರೆಡ್ಡಿ, ಅಭ್ಯರ್ಥಿಯಾಗಲೀ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಲೀ ಒಂದು ಬಾರಿಯಾದರೂ ಜಿಲ್ಲಾ ಜೆಡಿಎಸ್‌ನ ಮುಖಂಡರನ್ನು ಕರೆದು ನೆರವು ಕೇಳಿಲ್ಲ ಎನ್ನಲಾಗಿದೆ. 

ಬಿಜೆಪಿ ನಡೆಸುತ್ತಿರುವ ಪ್ರಚಾರದಲ್ಲಿ ಜೆಡಿಎಸ್‌ನ ಸ್ಥಳೀಯ ನಾಯಕರ ಉಪಸ್ಥಿತಿ ಒಂದು ಕಡೆ ಇರಲಿ, ಜೆಡಿಎಸ್‌ನ ಬಾವುಟಗಳೂ ಕಾಣುತ್ತಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾತಿಗಷ್ಟೇ ಎಂಬಂತೆ ಕಾಣುತ್ತಿದೆ. 

ತಲೆ ಹಾಕದ ಜೆಡಿಎಸ್‌ ಪ್ರಮುಖರು 

ಜೆಡಿಎಸ್‌ ರಾಜ್ಯ ನಾಯಕರು ಸಂಡೂರು ಮರೆತಿದ್ದಾರೆ. ಎಲ್ಲರೂ ಚನ್ನಪಟ್ಟಣಕ್ಕೆ ಸೀಮಿತವಾಗಿದ್ದಾರೆ ಎಂಬ ಮಾತು ಬಿಜೆಪಿಯ ಕೆಲ ನಾಯಕರಿಂದ ವ್ಯಕ್ತವಾಗಿದೆ.

ಚನ್ನಪಟ್ಟಣದಲ್ಲಿ ನಿಖಿಲ್‌ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌ ಯಡಿಯೂರಪ್ಪ ಅವರೇ ಹೋದರು. ಆದರೆ, ಇಲ್ಲಿಗೆ ಮಾತ್ರ ಯಾವ ಪ್ರಮುಖ ನಾಯಕರೂ ಬರಲಿಲ್ಲ ಎನ್ನುತ್ತಾರೆ ಕೆಲವರು. 

ಇನ್ನೊಂದೆಡೆ ಜೆಡಿಎಸ್‌ನ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಜಿಲ್ಲೆಯ ಯಾವ ನಾಯಕರ ಹೆಸರೂ ಇಲ್ಲ. ಹೀಗಾಗಿ ಸಂಡೂರಿನಲ್ಲಿ ಬಿಜೆಪಿಗೆ ನೆರವಾಗುವುದನ್ನು ಜೆಡಿಎಸ್‌ ಕೂಡ ಮರೆತಂತಿದೆ ಎಂಬ ಮಾತೂ ಇದೆ.  

ಸಂಡೂರಿಗೆ ಬರುವರೇ ಎಚ್‌ಡಿಕೆ? 

‘ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರು ನವೆಂಬರ್ 8ರೊಳಗೆ ಯಾವುದಾದರೂ ಒಂದು ದಿನ ಪ್ರಚಾರಕ್ಕೆ ಬಂದು ಹೋಗುವುದಾಗಿ ಭರವಸೆ ನೀಡಿದ್ದಾರೆ’ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ  ಉಡೇದ್‌ ಸುರೇಶ್‌ ತಿಳಿಸಿದರು. 

ಮತ್ತೊಂದು ಕಡೆ ಕ್ಷೇತ್ರವನ್ನು 9 ಮಹಾಶಕ್ತಿ ಕೇಂದ್ರಗಳಾಗಿ ವಿಂಗಡಿಸಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಒಂದೊಂದು ಕೇಂದ್ರಕ್ಕೂ ಉಸ್ತುವಾರಿಗಳನ್ನು ನೇಮಿಸಿದೆ. ಈ ಉಸ್ತುವಾರಿ ಪಟ್ಟಿಯಲ್ಲಿ ಜೆಡಿಎಸ್‌ನ ಕರೆಮ್ಮ ನಾಯ್ಕ ಹೆಸರು ಇದೆ.

ಜನಾರ್ದನ ರೆಡ್ಡಿ ಅಭ್ಯರ್ಥಿ ಅಥವಾ ಬಿಜೆಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದರೂ ಮಿತ್ರ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ರಾಜ್ಯ ನಾಯಕರು ಸೂಚಿಸಿದ್ದಾರೆ.
ಮೀನಹಳ್ಳಿ ತಾಯಣ್ಣ ಅಧ್ಯಕ್ಷ ಜೆಡಿಎಸ್‌ ಜಿಲ್ಲಾ ಘಟಕ
ಜೆಡಿಎಸ್‌ ನಾಯಕರನ್ನು ಎಲ್ಲ ಸಭೆ ಪ್ರಚಾರಕ್ಕೆ ಕರೆಯುತ್ತಿದ್ದೇವೆ. ಮೈತ್ರಿಯಲ್ಲಿ ಯಾವ ವ್ಯತ್ಯಾಸವೂ ಇಲ್ಲ.ಎಚ್‌.ಡಿ ಕುಮಾರಸ್ವಾಮಿ ಅವರು ಒಂದಿಡೀ ದಿನ ಸಂಡೂರಲ್ಲಿದ್ದು ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
–ಉಡೇದ್‌ ಸುರೇಶ್‌ ಕಾರ್ಯದರ್ಶಿ ಬಿಜೆಪಿ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.