ಬಳ್ಳಾರಿ: ಸಂಡೂರಿನಲ್ಲಿ ಬಿರುಸುಗೊಂಡಿದ್ದ ಚುನಾವಣಾ ರಾಜಕೀಯ ಚಟುವಟಿಕೆಗೆ ದೀಪಾವಳಿ ಹಬ್ಬ ಶುಕ್ರವಾರ ತಾತ್ಕಾಲಿಕ ತಡೆ ಹಾಕಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು, ರಾಜಕೀಯ ನಾಯಕರು, ಮುಖಂಡರು ದೇವಾಲಯ ಭೇಟಿ, ಪೂಜೆ, ಮನೆಯಲ್ಲಿ ಹಬ್ಬದ ಆಚರಣೆಗೆ ಸೀಮಿತವಾದರು.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರಾಗಲಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರೂ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ತುಮಟಿ ಲಕ್ಷ್ಮಣ ಅವರ ತಂದೆ ನಿಧನರಾದ ಕಾರಣ ಕಾಂಗ್ರೆಸ್ ಮುಖಂಡರು ಅಲ್ಲಿ ಪಾಲ್ಗೊಂಡಿದ್ದರು.
ಹನುಮಂತ ಅವರ ಬೆನ್ನಿಗೆ ನಿಂತಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಶುಕ್ರವಾರ ತಮ್ಮ ನಿವಾಸದಲ್ಲಿ ಲಕ್ಷ್ಮೀ ಪೂಜೆ ಮಾಡಿ ಬಳಿಕ ಗಂಗಾವತಿ ತಾಲ್ಲೂಕಿಗೆ ತೆರಳಿದರು. ಅಲ್ಲಿ ರಾಜ್ಯೋತ್ಸವ ಆಚರಣೆಯಲ್ಲಿ ತೊಡಗಿಸಿಕೊಂಡರು. ಸಚಿವ ಸಂತೋಷ್ ಲಾಡ್ ಧಾರವಾಡಕ್ಕೆ ತೆರಳಿದ್ದರು.
ಹಬ್ಬದ ಬಳಿಕ ಅಬ್ಬರ: ಬಿಜೆಪಿ ನಾಯಕರು ಸೋಮವಾರದ ಬಳಿಕ ಮತ್ತೆ ಪ್ರಚಾರ ಬಿರುಸುಗೊಳಿಸಲಿದ್ದಾರೆ. ಈಗ ಸಭೆ ಸೇರಿ ಮುಂದಿನ ಯೋಜನೆ, ರಣತಂತ್ರ ರೂಪಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೋಮವಾರ ಬಳ್ಳಾರಿಗೆ ಆಗಮಿಸುತ್ತಿದ್ದು, ‘ವಕ್ಫ್’ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಂಡೂರಿಗೆ ತೆರಳಲಿರುವ ಅವರು, ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸೋಮವಾರ ರಂಗಪ್ರವೇಶ ಮಾಡಲಿದ್ದಾರೆ. ಪಂಚಾಯಿತಿಗೊಬ್ಬರಂತೆ ಉಸ್ತುವಾರಿಗಳನ್ನು ಕಾಂಗ್ರೆಸ್ ನೇಮಕ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮುಂದಿನ ವಾರ 2–3 ದಿನ ಕಾಲ ಸಂಡೂರಿನಲ್ಲೇ ಉಳಿಯುವ ಸಾಧ್ಯತೆಗಳಿವೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೂ ಒಂದು ದಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಮೈತ್ರಿಯಲ್ಲಿ ಮುನಿಸಿಲ್ಲ
ಬಿಜೆಪಿ– ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಾಸಕ ಜನಾರ್ದನಾ ರೆಡ್ಡಿ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಮೈತ್ರಿ ಧರ್ಮ ಪಾಲನೆಯಾಗುತ್ತಿದೆ. ಚುನಾವಣಾ ಪ್ರಚಾರವೂ ಚನ್ನಾಗಿ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಸಂಡೂರು ತಾಲೂಕು ಜೆಡಿಎಸ್ ಅಧ್ಯಕ್ಷ ಎನ್. ಸೋಮಪ್ಪ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.