ADVERTISEMENT

ಸಂಡೂರು ಉಪ ಚುನಾವಣೆ: ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೇ ಕುತೂಹಲ

ಸಂಡೂರು ಉಪ ಚುನಾವಣೆಗೆ ಮಹೂರ್ತ ನಿಗದಿ: ಬಿಜೆಪಿ, ಕಾಂಗ್ರೆಸ್‌ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 6:05 IST
Last Updated 16 ಅಕ್ಟೋಬರ್ 2024, 6:05 IST
   

ಸಂಡೂರು: ಶಾಸಕರಾಗಿದ್ದ ಇ.ತುಕಾರಾಂ ಅವರು ಸಂಸದರಾದ ನಂತರ ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ದಿನಾಂಕ‌ ನಿಗದಿಯಾಗಿದೆ. ಚುನಾವಣಾ ಪೂರ್ವ ತಾಲೀಮು ಎಂಬಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರೂ ಚುನಾವಣೆಗೆ ಅಭ್ಯರ್ಥಿಗಳು ಯಾರಾಗ್ತಾರೆ ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ನವೆಂಬರ್ 13 ಕ್ಕೆ ಮತದಾನ:

ಚುನಾವಣಾ ಆಯೋಗದ ಘೋಷಣೆಯಂತೆ ನ.13ಕ್ಕೆ ಮತದಾನ ನಡೆಯಲಿದೆ. ಅ.18ಕ್ಕೆ ಅಧಿಸೂಚನೆ, ಅ.25 ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರ ಪರಿಶೀಲನೆ ಅ.28, ನಾಮಪತ್ರ ಹಿಂಪಡೆಯಲು ಅ.30 ಹಾಗೂ ಫಲಿತಾಂಶ ಪ್ರಕಟಣೆ ನ.23 ಎಂದು ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.

ADVERTISEMENT

ಚುನಾವಣಾ ಪೂರ್ವ ತಾಲೀಮು:

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಈ ಬಾರಿ ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂಬ ಹುಮ್ಮಸ್ಸು ಕಮಲ ಪಾಳೆಯದಲ್ಲಿ ಮೂಡಿದೆ. ಇದೇ ದೃಷ್ಟಿಯಿಂದ ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಸ್ಥಳೀಯ ನಾಯಕರೆಲ್ಲಾ ಸೇರಿ ವಾಲ್ಮೀಕಿ ಹಗರಣದ ವಿರುದ್ಧ ಸಂಡೂರು ಪಟ್ಟಣದಲ್ಲಿ ಈಚೆಗೆ ಪ್ರತಿಭಟನೆ ನಡೆಸುವ ಹೆಸರಿನಲ್ಲಿ ಚುನಾವಣಾ ಪೂರ್ವ ತಾಲೀಮು ಆರಂಭಿಸಿದ್ದರು.

ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ಮುಕ್ತ ಅವಕಾಶ ಸಿಕ್ಕ 2ನೇ ದಿನಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೂಡಾ ಸಂಡೂರು ಪಟ್ಟಣದಲ್ಲಿ ರ್‍ಯಾಲಿ ನಡೆಸಿ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷವೂ ಕೂಡಾ ತನ್ನದೇ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ. ಸಂತೋಷ್ ಲಾಡ್ ಫೌಂಡೇಷನ್ ಮೂಲಕ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ಇತ್ಯಾದಿ ಹೆಸರಿನಲ್ಲಿ ಜನರನ್ನು ತಲುಪುವ ಪ್ರಯತ್ನ ನಡೆಸಿದ್ದರೆ ಅ.14 ರಂದು ತಾಲ್ಲೂಕಿನ ಸಾಧನಾ ಸಮಾವೇಶ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರ ದಂಡೇ ಆಗಮಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಬಹಿರಂಗವಾಗಿ ಕೋರಿದ್ದಾರೆ.

ಯಾರಾಗಬಹುದು ಕೈ-ಕಮಲ ಅಭ್ಯರ್ಥಿಗಳು?: ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಚಿಕ್ಕದಿದೆ. ಆದರೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ದೊಡ್ಡದು. ಕಾಂಗ್ರೆಸ್‌ನಿಂದ ತುಮಟಿ ಲಕ್ಷ್ಮಣ, ಶಿವರಾಮ್ ಭೀಮಪ್ಪ ಸೇರಿ ಮೂರ್ನಾಲ್ಕು ಜನ ಅರ್ಜಿ ಸಲ್ಲಿಸಿದ್ದರೆ. ಬಿಜೆಪಿಯಿಂದ ಮಾಜಿ ಸಂಸದ ದೇವೇಂದ್ರಪ್ಪ, ಕಳೆದ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವ ಕೆ.ಎಸ್ ದಿವಾಕರ್ ಸೇರಿದಂತೆ 19 ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅತ್ತ ಶ್ರೀರಾಮುಲು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರೂ ಆಶ್ಚರ್ಯವಿಲ್ಲ.ಈ ಮಧ್ಯೆ ಎರಡು ಪಕ್ಷಗಳಿಂದ ಅಂತಿಮವಾಗಿ ಅಖಾಡಕ್ಕೆ ಇಳಿಯುವ ಅಭ್ಯರ್ಥಿ ಯಾರಾಗಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ.

ತುಕಾರಾಂ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್?

ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿ ಸಂಡೂರು ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಲಿದೆ. ಅಭ್ಯರ್ಥಿಯನ್ನಾಗಿ ಬಹುತೇಕ ತುಕಾರಾಂ ಕುಟುಂಬಕ್ಕೆ ಮಣೆ ಹಾಕುವ ಸಾಧ್ಯತೆಗಳಿವೆ ಎನ್ನುತ್ತಿವೆ ರಾಜಕೀಯ ಲೆಕ್ಕಾಚಾರಗಳು. ಶಾಸಕರಾಗಿ ನಾಲ್ಕನೇ ಬಾರಿ ಜಯ ಸಾಧಿಸಿದ್ದರೂ ಇ.ತುಕರಾಂ ಅವರನ್ನು ಕಾಂಗ್ರೆಸ್ ವರಿಷ್ಠರು ಒಂದಷ್ಟು ಭರವಸೆಗಳ ಮೇಲೆ ದೆಹಲಿಗೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಅದರ ಪ್ರಕಾರ ತುಕಾರಾಂ ಸಂಸದರಾದರೆ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ವಾಗ್ದಾನಗಳಾಗಿದ್ದು ಬಹುತೇಕ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಸ್ಪರ್ಧಿಸಬಹುದು ಎಂಬುದು ಸಾರ್ವಜನಿಕ ವಲಯದ ಚರ್ಚೆ.

ಕಾಂಗ್ರೆಸ್ ಪ್ರಾಬಲ್ಯ:

1983ರಿಂದ ಕಳೆದ ಹತ್ತು ಚುನಾವಣೆಗಳ ಇತಿಹಾಸದಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯ ಮೆರೆದಿದೆ. 8 ಬಾರಿ ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸೌಧವನ್ನು ಪ್ರವೇಶಿಸಿದ್ದಾರೆ. ಆ 8ರಲ್ಲಿ ತುಕಾರಾಂ ಅವರೇ ನಾಲ್ಕು ಬಾರಿ ಎಂಬುದು ವಿಶೇಷ.
2004 ರಲ್ಲಿ ಜೆಡಿಎಸ್ ಪಕ್ಷದಿಂದ ಸಂತೋಷ್ ಲಾಡ್ ಹಾಗೂ 1985 ರಲ್ಲಿ ಜೆಎನ್ ಪಿ ಪಕ್ಷದಿಂದ ಯು.ಭೂಪತಿ ಗೆಲುವು ಸಾಧಿಸಿದ್ದರು. ಉಳಿದಂತೆ ಎಂ.ವೈ ಘೋರ್ಪಡೆ 3 ಸಲ, ಹಿರೋಜಿ ಲಾಡ್ ಒಂದು ಸಲ ಗೆದ್ದಿದ್ದಾರೆ.

ಚುನಾವಣೆಗೆ ಸಿದ್ಧರಾಗಿದ್ದೇವೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಲವಾರು ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಎಲ್ಲವನ್ನೂ ಪರಾಮರ್ಶೆ ಮಾಡಲಿರುವ ಪಕ್ಷ ಸೂಕ್ತವಾದವರನ್ನು ಆಯ್ಕೆ ಮಾಡಲಿದೆ.
ಬಿ.ಕೆ ಸುಂದರ್‌, ಬಳ್ಳಾರಿ ಬಿಜೆಪಿ ವಕ್ತಾರ
ಅಭ್ಯರ್ಥಿ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಜೆಡಿಎಸ್‌ಗೆ ಸಿಕ್ಕರೂ ಸರಿ ಬಿಜೆಪಿಗೆ ಸಿಕ್ಕರೂ ಸರಿಯೇ. ನಾವು ಕೆಲಸ ಮಾಡುತ್ತೇವೆ. ಕ್ಷೇತ್ರ ಜೆಡಿಎಸ್‌ಗೆ ಸಿಕ್ಕರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಪಕ್ಷಕ್ಕೆ ತಿಳಿಸಿದ್ದೇನೆ. ಸೋಮಪ್ಪ ಅವರೂ ಆಕಾಂಕ್ಷಿಯಾಗಿದ್ದಾರೆ.
ಮೀನಹಳ್ಳಿ ತಾಯಣ್ಣ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ
ತುಕಾರಾಂ ಕುಟುಂಬದವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಸಂಡೂರಿನ ಕಾರ್ಯಕ್ರಮದಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ನ್ಯಾಯ ಗೆಲ್ಲಿಸಬೇಕು ಸುಳ್ಳು ಕುತುಂತ್ರಗಳನ್ನು ಸೋಲಿಸಬೇಕು. ಉಪ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ.
ಅಲ್ಲಂ ಪ್ರಶಾಂತ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.