ADVERTISEMENT

ದಾದಾ ‘ಕೈ’ಯಲ್ಲಿ ಸಂಡೂರಿನ ಸಾಮಾಜಿಕ ‘ನ್ಯಾಯ’

ತುಕಾರಾಂ ಕುಟುಂಬಕ್ಕೆ ಹೊರತಾದವರಿಗೆ ಟಿಕೆಟ್‌ ನೀಡಲು ಸ್ಥಳೀಯ ನಾಯಕರ ಪಟ್ಟು

ಆರ್. ಹರಿಶಂಕರ್
Published 19 ಅಕ್ಟೋಬರ್ 2024, 6:12 IST
Last Updated 19 ಅಕ್ಟೋಬರ್ 2024, 6:12 IST
ಸಂತೋಷ್‌ ಲಾಡ್‌
ಸಂತೋಷ್‌ ಲಾಡ್‌   

ಬಳ್ಳಾರಿ: ಶಾಸಕರಾಗಿದ್ದ ಇ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಸಂವಿಧಾನ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಚರ್ಚೆಗಳು ಮುನ್ನೆಲೆಗೆ ಬಂದಿವೆ.

‘ಸಂವಿಧಾನ ನಮಗೆ ಸಾಮಾಜಿಕ ನ್ಯಾಯ, ಮೀಸಲಾತಿ, ಸರ್ವರಿಗೂ ಸಮಪಾಲು, ಸಮಬಾಳು ನೀಡುತ್ತಿದೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸಂಡೂರು ಕ್ಷೇತ್ರ ಮಾತ್ರ ಸಂಸದ ಇ. ತುಕಾರಾಂ ಅವರಿಗೆ ಮೀಸಲಾಗಿದೆ. ಈಗ ಅವರ ಕುಟುಂಬಕ್ಕೆ ಮೀಸಲಾತಿ ಸಿಗುತ್ತಿದೆ. ಇದು ಮೀಸಲಾತಿ ಅರ್ಹ ಜನ ಸಮುದಾಯಗಳಿಗೆ ಸಿಗಬೇಕು. ತುಕಾರಾಂ ಮನೆಯವರಿಗೆ ಟಿಕೆಟ್‌ ನೀಡಬಾರದು’ ಎಂದು ಮುಖಂಡರು ಆಗ್ರಹಿಸಿದ್ದಾರೆ.  

‘ತುಕಾರಾಂ ಅವರ ಕುಟುಂಬ ಹೊರತುಪಡಿಸಿ ಯಾರಿಗಾದರೂ ಟಿಕೆಟ್‌ ಕೊಡಿ’ ಎಂಬುದು ಬಹುತೇಕ ಮುಖಂಡರ ಒತ್ತಾಯ. ಈ ಸಂಬಂಧ ಎಲ್ಲರೂ ಸಚಿವ ಸಂತೋಷ್‌ ಲಾಡ್‌ ಅವರ ಮೊರೆಯಿಟ್ಟಿದ್ದಾರೆ.

ADVERTISEMENT
ಟಿಕೆಟ್ ನೀಡುವುದು ಸೂಕ್ಷ್ಮ ವಿಷಯ. ಎಲ್ಲರೂ ನಮ್ಮವರೇ. ಅವರನ್ನೆಲ್ಲ ಕರೆದು ಮಾತಾಡಿಸುವೆ. ಸಾಮರ್ಥ್ಯದ ಜೊತೆ ಅಭ್ಯರ್ಥಿ ನಡತೆಯೂ ಮುಖ್ಯ. ಟಿಕೆಟ್‌ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನ ಅಂತಿಮ.
ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

ಕಾಂಗ್ರೆಸ್‌  ಭದ್ರಕೋಟೆ ಆಗಿದ್ದ ಸಂಡೂರು ಕ್ಷೇತ್ರವನ್ನು 2004ರಲ್ಲಿ ಜೆಡಿಎಸ್‌ ಅಭ್ಯರ್ಥಿ ಸಂತೋಷ್‌ ಲಾಡ್‌  ಮೊದಲ ಬಾರಿಗೆ ಭೇದಿಸಿದ್ದರು. ಆ ಅವಧಿಯಲ್ಲೇ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಸಂಡೂರು ಪರಿಶಿಷ್ಟ ಜಾತಿಗೆ ಮೀಸಲಾಯಿತು. ಮೊದಲ ಅವಧಿಯಲ್ಲೇ ಕ್ಷೇತ್ರ ಬದಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಸಂತೋಷ್‌ ಲಾಡ್‌ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು. ನಂತರ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.  

ಸಂಡೂರಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕಾರಣಕ್ಕೋ, ಅಪಾರ ಖನಿಜ ಸಂಪನ್ಮೂಲವಿರುವ ಕ್ಷೇತ್ರವೊಂದನ್ನು ಬೇರೊಬ್ಬರಿಗೆ ಬಿಟ್ಟುಕೊಡಬಾರದು ಎಂಬ ಉದ್ದೇಶಕ್ಕೋ ಅಥವಾ ತಮ್ಮ ಹುಟ್ಟೂರು ಎಂಬ ಕಾರಣಕ್ಕೋ ಸಂತೋಷ್‌ ಲಾಡ್‌ ಕ್ಷೇತ್ರದ ಮೇಲೆ ಹಿಡಿತ ಮುಂದುವರಿಸಿದರು. ತಮ್ಮ ಆಪ್ತ, ತಮ್ಮದೇ ಕಂಪನಿ ‘ವಿಎಸ್‌ ಲಾಡ್‌’ನಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಇ. ತುಕಾರಾಂ ಅವರನ್ನು ಸಂಡೂರಿನಿಂದ ಕಣಕ್ಕಿಳಿಸಿದ್ದರು. ನಾಲ್ಕು ವಿಧಾನಸಭಾ ಚುನಾವಣೆ, ಒಂದು ಲೋಕಸಭಾ ಚುನಾವಣೆಯಲ್ಲಿ ತುಕಾರಾಂ ಅವರ ಹಿಂದೆ ಇದ್ದದ್ದು ಇದೇ ಲಾಡ್‌ ಮತ್ತು ಅವರ ನೆರವು ಎಂಬ ಮಾತಿದೆ.

ಲಾಡ್‌ ಅನಿವಾರ್ಯತೆಗೆ ರಾಜಕೀಯಕ್ಕೆ ಬಂದ ತುಕಾರಾಂ ಈಗ ಸಂಸದರಾಗಿದ್ದರೂ, ಕ್ಷೇತ್ರ ತಮ್ಮ ಕುಟುಂಬಕ್ಕೆ ಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದು ಸ್ಥಳೀಯ ನಾಯಕರನ್ನು ಕೆರಳಿಸಿದೆ. 

‘ಈ ಕ್ಷೇತ್ರ ಲಾಡ್‌ ಅವರದ್ದು. ಅವರ ಕಾರಣಕ್ಕೆ ತುಕಾರಾಂ ನಾಲ್ಕು ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗ ಅವರು ಸಂಸದ. ಸಂಡೂರಿನಲ್ಲಿ ಈಗ ಅವರು ಪಾರುಪತ್ಯ ಮಾಡಲಾಗದು. ತಮ್ಮ ಕುಟುಂಬದವರಿಗೇ ಟಿಕೆಟ್‌ ಕೊಡಿಸಬೇಕು ಎಂಬ ಅವರ ನಿಲುವು ಸರಿಯಲ್ಲ. ಲಾಡ್‌ ಹೇಳಿದವರಿಗೆ ಟಿಕೆಟ್‌. ಅಷ್ಟಕ್ಕೂ ಇದು ಮೀಸಲು ಕ್ಷೇತ್ರ. ತಳ ಸಮುದಾಯಕ್ಕೆ ನ್ಯಾಯ ಸಿಗಲೆಂದು ಇರುವ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮಾಡುವುದು ಸರಿಯಲ್ಲ. ಲಾಡ್‌ ಅವರು ಒಂದು ವೇಳೆ ತುಕಾರಾಂ ಅವರನ್ನೇ ಅಭ್ಯರ್ಥಿ ಮಾಡಿದರೆ ತೀರ್ಪು ಜನರಿಗೆ ಬಿಟ್ಟಿದ್ದು’ ಎಂದು ಟಿಕೆಟ್‌ ಆಕಾಂಕ್ಷಿ ತುಮಟಿ ಲಕ್ಷ್ಮಣ ಹೇಳಿದರು.‌

‘ನಾವೆಲ್ಲರೂ ರಾಜಕೀಯ ಆರಂಭಿಸುವ ಹೊತ್ತಿಗೆ ತುಕಾರಾಂ ರಾಜಕೀಯ ನೋಡೇ ಇರಲಿಲ್ಲ. ಲಾಡ್‌ ಅವರ ಸೂಚನೆ ಮೇರೆಗೆ ಗೆದ್ದ ತುಕಾರಾಂ ಅವರು ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದಾರೆ. ತಮಗೆ ಬೇಕಾದವರನ್ನು ಬೇಕಾದಂತೆ ನೋಡಿಕೊಂಡಿದ್ದಾರೆ. ಲಾಡ್‌ ಬೆಂಬಲಿಗರನ್ನು ಕಡೆಗಣಿಸಿದ್ದಾರೆ. ಮುಂದೊಂದು ದಿನ ಲಾಡ್‌ ಈ ಕ್ಷೇತ್ರಕ್ಕೆ ಬಂದರೆ ಅವರೇ ಸೋಲುವ ಸ್ಥಿತಿಗೆ ಕ್ಷೇತ್ರವನ್ನು ತಂದಿಟ್ಟಿದ್ದಾರೆ. ತುಕಾರಾಂ ಕುಟುಂಬಕ್ಕೆ ಟಿಕೆಟ್‌ ನೀಡಬಾರದು. ಅವರಲ್ಲದೇ ಯಾರಿಗೇ ಟಿಕೆಟ್‌ ಕೊಟ್ಟರೂ ನಾವು ಒಮ್ಮತದಿಂದ ಕೆಲಸ ಮಾಡುತ್ತೇವೆ’ ಎಂದು ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಜಯಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.