ADVERTISEMENT

ಸಂಘ, ಪಕ್ಷ ನಿಷ್ಠ ಬಂಗಾರು ಹನುಮಂತುಗೆ ಬಿಜೆಪಿ ಮಣೆ

ಬಳ್ಳಾರಿ ಬಿಜೆಪಿಯ ಬದಲಾದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತಿರುವ ಆಯ್ಕೆ

ಆರ್. ಹರಿಶಂಕರ್
Published 20 ಅಕ್ಟೋಬರ್ 2024, 7:03 IST
Last Updated 20 ಅಕ್ಟೋಬರ್ 2024, 7:03 IST
ಬಂಗಾರು ಹನುಮಂತು 
ಬಂಗಾರು ಹನುಮಂತು    

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಸ್ಥಳೀಯ ಮುಖಂಡ, ಸಂಘ ನಿಷ್ಠ, ಇತ್ತೀಚೆಗೆ ಜನಾರ್ದನ ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಂಗಾರು ಹನುಮಂತು ಸಿಕ್ಕಿದೆ.

‘ಬಂಗಾರು ಹನುಮಂತು ವಿಜಯೇಂದ್ರ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡವರು. ಅಷ್ಟೇ ಅಲ್ಲ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅಶ್ವತ್ಥ ನಾರಾಯಣ ಅವರಿಗೂ ಹತ್ತಿರ. ಸಂಘದಲ್ಲಿ ವಾದಿರಾಜ ಅವರಿಗೂ ಸನಿಹದಲ್ಲಿ ಇರುವವರು. ಈ ಎಲ್ಲಾ ಕಾರಣದಿಂದ ಅವರಿಗೆ ಟಿಕೆಟ್ ಸಿಕ್ಕಿದೆ’ ಎಂದು ಬಿಜೆಪಿಯ ಮೂಲಗಳು ಮಾಹಿತಿ ನೀಡಿವೆ. 

ಹನುಮಂತು ಅವರ ಈ ಲಕ್ಷಣಗಳು ಇತ್ತೀಚೆಗೆ ಅವರನ್ನು ಜನಾರ್ದನ ರೆಡ್ಡಿ ಅವರ ಸನಿಹಕ್ಕೆ ಹೋಗುವಂತೆ ಮಾಡಿದೆ. ಆರಂಭದಲ್ಲಿ ದಿವಾಕರ್‌ ಅವರಿಗೆ ಟಿಕೆಟ್‌ ಕೇಳುತ್ತಿದ್ದ ಜನಾರ್ದನ ರೆಡ್ಡಿ ಅವರೂ ಇತ್ತೀಚೆಗೆ ಹನುಮಂತು ಅವರ ಬೆನ್ನಿಗೆ ನಿಂತಿದ್ದರು ಎಂದು ಗೊತ್ತಾಗಿದೆ.  

ADVERTISEMENT

ಬಳ್ಳಾರಿ ರಾಜಕಾರಣದಲ್ಲಿ ಜನಾರ್ದನ ರೆಡ್ಡಿ ಪ್ರಬಲವಾಗಿ ಬೆಳೆಯುವುದರ ಹಿಂದೆ ವಾಲ್ಮೀಕಿ ಸಮುದಾಯದ ಮುಖಂಡರಾದ ಬಿ. ಶ್ರೀರಾಮುಲು ಮತ್ತು ಬಿ.ನಾಗೇಂದ್ರ ಅವರ ದುಡಿಮೆಯೂ ಇತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ. ನಾಗೇಂದ್ರ ಬೇರೆ ಪಕ್ಷದಲ್ಲಿದ್ದರೆ, ಶ್ರೀರಾಮುಲು ಮುನಿಸಿಕೊಂಡಿರುವುದು ಅವರ ನಡವಳಿಕೆಗಳಲ್ಲಿ ಗೋಚರಿಸುತ್ತಿದೆ. ಇಂಥ ಸಂದರ್ಭದಲ್ಲಿ ಪಕ್ಷದಲ್ಲಿ, ಸಂಘದಲ್ಲಿ, ಹೈಕಮಾಂಡ್‌ನಲ್ಲಿ ಉತ್ತಮ ಸಂಬಂಧ ಹೊಂದಿರುವ ವಾಲ್ಮೀಕಿ ಮುಖಂಡರೊಬ್ಬರು ರೆಡ್ಡಿ ಅವರಿಗೆ ಅನಿವಾರ್ಯವಾಗಿ ಬೇಕಾಗಿತ್ತು. ಹೀಗಾಗಿ ಸಹಜವಾಗಿಯೇ ಹನುಮಂತು ರೆಡ್ಡಿಗೆ ಆಪ್ತರಾಗಿದ್ದಾರೆ. ರೆಡ್ಡಿ ಕೂಡ ಹನುಮಂತುಗೆ ಟಿಕೆಟ್‌ ಕೊಡಿಸಲು ಕೆಲಸ ಮಾಡಿದ್ದರು ಎಂದು ಗೊತ್ತಾಗಿದೆ.

ಬಂಗಾರು ಹನುಮಂತು ಆರಂಭದಲ್ಲಿ ಶ್ರೀರಾಮುಲು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಟಿಕೆಟ್‌ ಲೋಕೇಶ್‌ ನಾಯ್ಕ ಅವರಿಗೆ ಸಿಕ್ಕ ಬಳಿಕ ಬಂಗಾರು ಹನುಮಂತು ಶ್ರೀರಾಮುಲು ಅವರಿಂದ ದೂರವಾಗಿದ್ದರು. ಸ್ವತಂತ್ರವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. 

ಬಂಗಾರು ಹನುಮಂತು ಕೆಎಸ್‌ಆರ್‌ಟಿಸಿ ಬಸ್‌ ಚಾಲಕರೊಬ್ಬರ ಮಗ. ಅವರ ತಂದೆ ಮೂಲ ಮರಿಯಮ್ಮನಹಳ್ಳಿ. ಆದರೆ, ಅವರ ತಾಯಿ ಸಂಡೂರಿನವರು. ವೃತ್ತಿ ನಿಮಿತ್ತ ಹನುಮಂತು ಅವರ ತಂದೆ ಕೂಡ್ಲಿಗಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಕೂಡ್ಲಿಗಿಯಲ್ಲಿ ಹನುಮಂತು ಅವರ ಬೇರುಗಳು ಗಟ್ಟಿಯಾಗಿವೆ.

ಸಿನಿಮಾ ನಟನೆ, ನಿರ್ಮಾಣದಲ್ಲೂ ಆಸಕ್ತಿ ಹೊಂದಿರುವ ಬಂಗಾರು ಹನುಮಂತು ಸಿನಿಮಾವೊಂದನ್ನು ನಿರ್ಮಿಸಿದ್ದೂ ಅಲ್ಲದೇ, ಅದರಲ್ಲಿ ನಾಯಕ ನಟನಾಗಿಯೂ ನಟಿಸಿದ್ದರು. 

2019ರ ಲೋಕಸಭಾ ಚುನಾವಣೆಯಲ್ಲೂ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಆ ಚುನಾವಣೆಯಲ್ಲಿ ಶ್ರೀರಾಮುಲು ಟಿಕೆಟ್‌ ಪಡೆದಿದ್ದರು. 2018ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಂಗಾರು ಹನುಮಂತು 7191 ಮತ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.