ADVERTISEMENT

ಬಳ್ಳಾರಿ: ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಯಿತು ‘ಸಂಡೂರು ಅರಣ್ಯ ಉಳಿಸಿ’ ಅಭಿಯಾನ

ಆರ್. ಹರಿಶಂಕರ್
Published 17 ಜೂನ್ 2024, 5:41 IST
Last Updated 17 ಜೂನ್ 2024, 5:41 IST
ಸಂಡೂರು ಉಳಿಸಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವಿಡಿಯೊವೊಂದರ ಚಿತ್ರ 
ಸಂಡೂರು ಉಳಿಸಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವಿಡಿಯೊವೊಂದರ ಚಿತ್ರ    

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ‘ಕುದುರೆಮುಖ ಕಬ್ಬಿಣದ ಅದಿರು ಕಂ‍‍ಪನಿಯ (ಕೆಐಒಸಿಎಲ್‌)’ ಕಡತಕ್ಕೆ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಹಿ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

‘ಗಣಿಗಾರಿಕೆ ವಿರೋಧಿಸಿ ‘ಸೇವ್‌ ಸಂಡೂರು ಫಾರೆಸ್ಟ್‌’ ಎಂಬ ಅಭಿಯಾನ ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾಗಿದ್ದು, ಗಣಿ ವಿರುದ್ಧದ ದನಿ ನಿಧಾನವಾಗಿ ಬಲಗೊಳ್ಳುತ್ತಿದೆ. 

ಸರ್ಕಾರದ ನಿರ್ಧಾರದಂತೆ  ಸಂಡೂರು ಅರಣ್ಯದ ಸ್ವಾಮಿಮಲೈ ಬ್ಲಾಕ್‌ನ ಒಟ್ಟು 470.40 ಹೆಕ್ಟೇರ್‌ (1162.38 ಎಕರೆ) ಪ್ರದೇಶದಲ್ಲಿ ಕೆಐಒಸಿಎಲ್‌ ಗಣಿಗಾರಿಕೆ ನಡೆಸಲಿದೆ. ಗಣಿಗಾರಿಕೆಗೆ ಹಂತ ಹಂತವಾಗಿ ಒಟ್ಟಾರೆ 99 ಸಾವಿರಕ್ಕೂ ಅಧಿಕ ಮರಗಳು ಕಡಿಯಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯ ದಾಖಲೆಗಳಿಂದಲೂ ಗೊತ್ತಾಗಿದೆ.   

ADVERTISEMENT

ಈ ಕುರಿತ ಮಾಧ್ಯಮಗಳ ವರದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಪರಿಸರ ಪ್ರೇಮಿಗಳು ಗಣಿಗಾರಿಕೆಯನ್ನು ಆಕ್ಷೇಪಿಸಿದ್ದಾರೆ. ‘ಗಣಿಗಾರಿಕೆಯಿಂದ ಪರಿಸರ ನಾಶವಾಗಲಿದೆ, ಜನ ಜೀನವದ ಮೇಲೆ ಪರಿಣಾಮ ಬೀರಲಿದೆ, ಅಳಿದುಳಿದ ಅರಣ್ಯವನ್ನಾದರೂ ಉಳಿಸಿಕೊಳ್ಳಬೇಕು, ಸಂಡೂರಿನ ಅರಣ್ಯದ ಮೇಲೆ ಸರ್ಕಾರಗಳ ವಕ್ರದೃಷ್ಟಿ ಬಿದ್ದಿದೆ, ಕುಮಾರಣ್ಣನ ಕಣ್ಣು ಬಿದ್ದಿದೆ’ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ.

#SaveSandurForest ಎಂಬ ಹ್ಯಾಷ್‌ ಟ್ಯಾಗ್‌ಗಳನ್ನು ಬಳಸಿ ಪೋಸ್ಟ್‌ಗಳನ್ನು ಪ್ರಕಟಿಸಲಾಗುತ್ತಿದೆ. ಸಂಡೂರು ಅರಣ್ಯದ ವಿಹಂಗಮ ನೋಟ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನಾವರಣಗೊಳಿಸುವ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿನ ಅಭಿಪ್ರಾಯಗಳು

‘ಎಚ್‌ಡಿಕೆ ಅವರು ಸಂಡೂರಿನ ದಟ್ಟ ಕಾಡಿನಲ್ಲಿ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟಿರೋದು ಕನ್ನಡತಾಯಿ ಮೇಲೆ ಅತ್ಯಾಚಾರ ಮಾಡಿದ ಹಾಗೆ. ಮೊದಲು ಹಿಂಪಡೆಯಿರಿ. ದಿಕ್ಕಾರ ಎಂದು ಜ್ಞಾನ್ ಕಲ್ಲಹಳ್ಳಿ (@gnan007) ಎಂಬುವವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ  ಪೋಸ್ಟ್‌ ಪ್ರಕಟಿಸಿದ್ದರು.  ಇದೇ ಪೋಸ್ಟ್‌ ಅನ್ನು ‌ಅನಿ ಎ.ಎನ್ (@anian0423)  ಎಂಬುವವರು ಮರುಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಚಿಕೇತ್‌ ಭಟ್ಕಳ (@NachiketNaik6) ಎಂಬುವವರು ‘ಪ್ರಕೃತಿಗೆ ಹಾನಿ ಮಾಡುವ ಯಾವುದೇ ಅವೈಜ್ಞಾನಿಕ ಯೋಜನೆಗಳು ಇರಲಿ, ಅದಕ್ಕೆ ನಮ್ಮ ವಿರೋಧ ಇದ್ದೇ ಇರುತ್ತದೆ. ನದಿ ತಿರುವು ನಮ್ಮ ಕರಾವಳಿಗೆ ಸಂಬಂಧಿಸಿದ್ದಾಗಿತ್ತು ಹಾಗಾಗಿ ನಾವು ಅದನ್ನು  ವಿರೋಧಿಸಿದ್ದೇವೆ. ಹಾಗೆ ಬಳ್ಳಾರಿ ಜನರು ಯಾರಾದರೂ ಸಂಡೂರು ಅರಣ್ಯದ ಗಣಿಯನ್ನು ವಿರೋಧಿಸಿದರೆ ನಾವು ಖಂಡಿತವಾಗಿಯೂ ಬೆಂಬಲ ನೀಡುತ್ತೇವೆ‘ ಎಂದಿದ್ದಾರೆ. 

‘ರಾಜಕಾರಣಿಗಳಿಗೆ ಪರಿಸರದ ಸೂಕ್ಷ್ಮತೆಯ ಅರಿವಿಲ್ಲ. ಅವರಿಗೆ ಒಂದಿಷ್ಟು ಕಾಸು ಬಂದರೆ ಅಷ್ಟೇ ಸಾಕು. ಪರಿಸರದಲ್ಲಿ ಪ್ರತಿಯೊಂದು ಕೂಡ ಅವರಿಗೆ ವ್ಯಾಪಾರದ ಸರಕು. ಅದು ಅದಿರಿರಲಿ-ಬಿದಿರಿರಲಿ’ ಎಂದು @paddehuli91 ಎಂಬ  ಖಾತೆಯಿಂದ ಪೋಸ್ಟ್‌ ಪ್ರಕಟಿಸಲಾಗಿದೆ.  

‘ಸಂಡೂರು ಅರಣ್ಯ ಕೂಡ ಸರಿಯಾದ ಸಮಯದಲ್ಲಿ ಉಳಿಸದಿದ್ದರೆ ಛತ್ತೀಸ್‌ಗಢದ ಹಸ್ದೇವ್‌ನಂತೆ ಆಗುತ್ತದೆ. ದಯವಿಟ್ಟು ಧ್ವನಿ ಎತ್ತಿ ಮತ್ತು ಇನ್ನೊಂದು ಗಣಿಗಾರಿಕೆ ದುರಂತದಿಂದ ಕರ್ನಾಟಕವನ್ನು ಉಳಿಸಿ’ ಎಂದು ವೀಣಾ ಜೈನ್‌  (@DrJain21) ಎಂಬುವವರು ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರ ಜತೆಗೆ ಅವರು, ಸಂಡೂರಿನ ಪ್ರಕೃತಿ ವೈಭವವನ್ನು ಸಾರುವ ವಿಡಿಯೊವೊಂದನ್ನೂ ಹಂಚಿಕೊಂಡಿದ್ದಾರೆ. 

'ಕರ್ನಾಟಕದ ಇಬ್ಬರು ಬಲಿಷ್ಠ ಒಕ್ಕಲಿಗ ರಾಜಕಾರಣಿಗಳು ನೂರಾರು ಎಕರೆ ಅರಣ್ಯನಾಶ ಮಾಡುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಕಾಂಗ್ರೆಸ್ಸನ್ನು ಬೆಂಬಲಿಸುವ ಎಡಪಂಥೀಯರಿಗೆ ಕಾಂಗ್ರೆಸ್ಸಿನ ಯೋಜನೆಯನ್ನು ವಿರೋದಿಸೋ ಬದ್ಧತೆ ಇಲ್ಲ. ಬಿಜೆಪಿಯವರಿಗೆ ಪ್ರಾದೇಶಿಕ ಪಕ್ಷದ ಯೋಜನೆಯನ್ನು ವಿರೋದಿಸುವ ಬದ್ದತೆ ಇಲ್ಲ’ ಎಂದು ಚಯ್ತನ್ಯ ಗವ್ಡ (@Ellarakannada) ಎಂದು ಪೋಸ್ಟ್‌ ಪ್ರಕಟಿಸಿದ್ದಾರೆ. 

ಒಂದು ಬೇಕಿದ್ದರೆ ಇನ್ನೊಂದು ಬಿಡಬೇಕು : ‘ವಿಶ್ವೇಶ್ವರಾಯ ಐರನ್‌ ಅ್ಯಂಡ್‌ ಸ್ಟೀಲ್‌ ಲಿಮಿಟೆಡ್‌ (ವಿಐಎಸ್‌ಎಲ್‌)’ ಬೇಕು ಅಂದರೆ ಸಂಡೂರು ಗಣಿಗಾರಿಕೆ ಬೇಕು. ಸಂಡೂರು ಗಣಿಗಾರಿಕೆ ಬೇಡ ಅಂದರೆ ವಿಐಎಸ್ಎಲ್‌ನ  ಆಸೆಯನ್ನು ಬಿಡಬೇಕು. ಒಂದು ಪಡೆಯಬೇಕಾದರೆ ಇನ್ನೊಂದು ತ್ಯಜಿಸಲೇಬೇಕು ಎಂದು ‘ಆಶೋಕ ಕೆ (ಹೆಚ್ಡಿಕೆ ಕುಟುಂಬ) (@kumarak2101)’ ಎಂಬವವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿದ್ದಾರೆ. 

ಯೋಜನೆ ಹಿಂಪಡೆಯಿರಿ :  ‘ಕುಮಾರಸ್ವಾಮಿ ಅವರೇ, ಇದು ತುಂಬಾ ಸೂಕ್ಷ್ಮ ಪ್ರದೇಶ. ದಯವಿಟ್ಟು ಸ್ವಲ್ಪ ಸಂಡೂರು ಕಾಡಿನ ಬಗ್ಗೆ ತಿಳಿದುಕೊಂಡು,  ಗಣಿಗಾರಿಕೆ ಅನುಮೋದನೆ ಹಿಂಪೆಡೆಯರಿ’ ಎಂದು ನವೀನ್‌ (@IamNaveen333) ಎಂಬುವವರು ಆಗ್ರಹಿಸಿದ್ದಾರೆ. 

ಸ್ಥಳೀಯರು ಪರಿಸರವಾದಿಗಳು ಎದ್ದೇಳಬೇಕು...
‘ಅಲ್ಲಿರುವ (ಸಂಡೂರು) ಜನ ಮೊದಲು ವಿರೋಧಿಸಬೇಕು. ನಾವು ಬಡ್ಕೊಳ್ಳೋದು ಅವರು ತೆಪ್ಪಗೆ ಇರೋದು ಸರಿಯಲ್ಲ. ಕಾವೇರಿ ನೀರಿಗಾಗಿ ಬೆಂಗಳೂರಿನ ಜನ ಸಮ್ಮನಿರ್ತಾರಲ್ಲ ಹಾಗೇ ಇದೂ ಆಗಬಾರದು. ಮೂಲ ನಿವಾಸಿಗಳು ಅರಚಬೇಕು... ಹೀಗೆಂದು ಜ್ಞಾನ್‌ (@GyanTtr)’ ಎಂಬುವವರು ಪೋಸ್ಟ್‌ ಮಾಡಿ ಸ್ಥಳೀಯ ಹೋರಾಟಗಾರರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದಾರೆ.  ‘ದಯವಿಟ್ಟು ಸ್ಥಳೀಯರು ಹೋರಾಟ ಮಾಡಿ ಯಾದರೂ ಸಂಡೂರಿನ ಪ್ರಕೃತಿಕ ಸೌಂದರ್ಯ ಉಳಿಸಬೇಕು’ ಎಂದು ತಪಸ್ವಿ (@Tapaswiji1993) ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.  ‘ಹೇಳೋರು ಕೇಳೋರು ಯಾರು ಇಲ್ಲ. ಇರೋ ಬೆಟ್ಟಗಳನ್ನೆಲ್ಲ ಬಗೆದು ಬರದ ನಾಡು ಮಾಡಲು ಹೊರಟಿದ್ದಾರೆ. ಇದನ್ನು ಸಾಮಾನ್ಯ ಜನ ಮತ್ತು ಪರಿಸರ ಹೋರಾಟಗಾರರು ವಿರೋಧಿಸಬೇಕು’ ಎಂದು ಗಿರೀಶ (@BellaryNaga55)  ಎಂಬುವವರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.