ADVERTISEMENT

ಲೋಕಸಭಾ ಚುನಾವಣೆ ಮತಎಣಿಕೆ: ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:09 IST
Last Updated 2 ಜೂನ್ 2024, 15:09 IST

ಬಳ್ಳಾರಿ: ಲೋಕಸಭಾ ಚುನಾವಣೆ ಮತಎಣಿಕೆ ಮಂಗಳವಾರ ನಡೆಯಲಿದ್ದು, ಬೆಳಿಗ್ಗೆ 6ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಮತ ಎಣಿಕೆ ನಡೆಯುವ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ. 

ಷರತ್ತುಗಳು: ಅಭ್ಯರ್ಥಿ ಅಥವಾ ಬೆಂಬಲಿಗರು ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ ಸಮಾರಂಭ, ವಾಹನ ಜಾಥಾ, ರ್‍ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸಬಾರದು. ಸ್ಪೋಟಕ, ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದುವುದು ಅಥವಾ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ.  

ಮತ ಎಣಿಕೆ ಕೇಂದ್ರ ನಿರ್ಬಂಧಿತ ಪ್ರದೇಶವಾಗಿದ್ದು, ಇಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆನಿಷೇಧಿಸಿದೆ. ಬಹಿರಂಗ ಘೋಷಣೆ,  ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಪ್ರದರ್ಶಿಸುವುದು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿ ಉಲ್ಲಂಘಿಸುವಂತಿಲ್ಲ. ಕೇಂದ್ರದ ಸುತ್ತಲೂ 100 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್‌, ಕಾರ್ಡ್‍ಲೆಸ್ ಫೋನ್‌ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

ADVERTISEMENT

ಶವ ಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.