ಹೊಸಪೇಟೆ (ವಿಜಯನಗರ): ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಗಾಗಿ ರಚಿಸಲಾಗುವ ಶೋಧನಾ ಸಮಿತಿಗೆ ಸೂಕ್ತರಾದವರ ಹೆಸರು ಕಳಿಸಿಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆಯು ಪತ್ರ ಬರೆದು ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದರ ಪರಿಣಾಮ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ.ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2021ರ ನವೆಂಬರ್ 25ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದರು. ‘ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರ ಅವಧಿ ಬರುವ ಫೆಬ್ರುವರಿ 21ಕ್ಕೆ ಕೊನೆಗೊಳ್ಳಲಿದೆ. ಹೊಸ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಬೇಕಿದೆ. ಈ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಒಬ್ಬರ ಹೆಸರು ಕಳಿಸಿಕೊಡಬೇಕು’ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಡಿಸೆಂಬರ್ 6ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂಬ ನಿರೀಕ್ಷೆ ಇತ್ತು. ಆದರೆ, ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಡಿ. 23 ಅಥವಾ 24ರಂದು ಪುನಃ ಸಿಂಡಿಕೇಟ್ ಸಭೆ ಸೇರಿ ಅಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿತ್ತು. ಆದರೆ, ಇದುವರೆಗೆ ಸಿಂಡಿಕೇಟ್ ಸಭೆಯೇ ಸೇರಿಲ್ಲ. ಉನ್ನತ ಶಿಕ್ಷಣ ಇಲಾಖೆಯ ಸ್ಪಷ್ಟ ನಿರ್ದೇಶನವಿದ್ದರೂ ಕೂಡ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ವಿಳಂಬವೇಕೇ?:
ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ಅವರ ಅವಧಿ ಫೆಬ್ರುವರಿ 21ಕ್ಕೆ ಕೊನೆಗೊಳ್ಳಲಿದೆ. ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶೋಧನಾ ಸಮಿತಿಗೆ ಒಬ್ಬರ ಹೆಸರು ಕಳಿಸಿಕೊಟ್ಟರೆ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆಗೆ ದಾರಿ ಸುಗಮಗೊಳ್ಳುತ್ತದೆ. ಈ ಪ್ರಕ್ರಿಯೆ ಮುಂದುವರೆಯಬಾರದು ಎನ್ನುವ ಕಾರಣಕ್ಕಾಗಿಯೇ ಹೆಸರು ಕಳಿಸಲು ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.
ಕನಿಷ್ಠ 6 ತಿಂಗಳಿಂದ 1 ವರ್ಷದ ಅವಧಿಗೆ ಕಾಲಾವಕಾಶ ವಿಸ್ತರಿಸಿಕೊಳ್ಳಲು ಹಾಲಿ ಕುಲಪತಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ ಸತತವಾಗಿ ಬೆಂಗಳೂರಿಗೆ ಓಡಾಡುತ್ತಿದ್ದಾರೆ ಎಂದು ‘ಪ್ರಜಾವಾಣಿ’ಗೆ ಉನ್ನತ ಮೂಲಗಳಿಂದ ಗೊತ್ತಾಗಿದೆ. ಆದರೆ, ಕುಲಪತಿ ರಮೇಶ ವಿರುದ್ಧ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳನ್ನು ವಿ.ವಿ. ಬೋಧಕ ಹಾಗೂ ಬೋಧಕೇತರ ನೌಕರರು ಮಾಡಿದ್ದಾರೆ. 17 ಬೋಧಕ ಹುದ್ದೆಗಳ ನೇಮಕಾತಿ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ.
2015ರಿಂದ 2021ರ ವರೆಗಿನ ಕಾಮಗಾರಿ, ಖರೀದಿ, ಭ್ರಷ್ಟಾಚಾರದ ಆರೋಪಗಳ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಸದನದಲ್ಲೂ ಈ ವಿಷಯ ಚರ್ಚೆಯಾಗಿತ್ತು. ‘ಇಷ್ಟೆಲ್ಲ ಆದರೂ ಹಾಲಿ ಕುಲಪತಿಯ ಅವಧಿ ವಿಸ್ತರಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಇವರನ್ನು ಮುಂದುವರೆಸಬಾರದು’ ಎನ್ನುತ್ತಾರೆ ವಿ.ವಿ. ಬೋಧಕ ಹಾಗೂ ಬೋಧಕೇತರರ ನೌಕರರ ಸಂಘದವರು.
ಶೈಕ್ಷಣಿಕ ಪ್ರಗತಿ ಪರಿಶೀಲನೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗ ಮತ್ತು ಪೀಠಗಳ ಶೈಕ್ಷಣಿಕ ಪ್ರಗತಿ, ಆಡಳಿತದ ಕಾರ್ಯನಿರ್ವಹಣೆ ಪರಿಶೀಲನೆ ಕಾರ್ಯ ಸಿಂಡಿಕೇಟ್ ಸದಸ್ಯರು ಗುರುವಾರ ನಡೆಸಿದರು.
2015–16ರಿಂದ 2020–21ನೇ ಸಾಲಿನ ವರೆಗೆ ಕೈಗೊಂಡ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಲು ಡಿ. 6ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿತ್ತು. ಅದರಂತೆ ಈಗ ಪ್ರಗತಿ ಪರಿಶೀಲಿಸುತ್ತಿದ್ದಾರೆ. ಕುಲಪತಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಬೋಧಕ ಹಾಗೂ ಬೋಧಕೇತರ ನೌಕರರು ಹೋರಾಟಕ್ಕಿಳಿದಿದ್ದರು. ಅವರ ಹೋರಾಟವನ್ನು ಹತ್ತಿಕ್ಕಲು ಪ್ರಗತಿ ಪರಿಶೀಲನೆಯ ಅಸ್ತ್ರ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.