ಬಳ್ಳಾರಿ: ಪ್ರಸ್ತಕ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ, ರಾಗಿ, ಜೋಳ ಖರೀದಿಸಲು ಜಿಲ್ಲೆಯಲ್ಲಿ ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲು ಜಿಲ್ಲಾ ಟಾಸ್ಕ್‌ಫೋರ್ಸ್ ತೀರ್ಮಾನಿಸಿದೆ. ಈ ಹಿಂದೆ ಕೇವಲ ರಾಗಿ, ಜೋಳ ಬೆಳೆಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ನೋಂದಣಿ ಹಾಗೂ ಖರೀದಿ ಮಾಡಲಾಗುತ್ತಿತ್ತು. ಸದ್ಯ ಭತ್ತವನ್ನೂ ನೋಂದಣಿ ಮತ್ತು ಖರೀದಿ ಮಾಡಲಾಗುತ್ತಿದೆ‘ ಎಂದರು.
ಖರೀದಿ ಕೇಂದ್ರಗಳು
ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ ಎಪಿಎಂಸಿ ಯಾರ್ಡ್, ಹಚ್ಚೊಳ್ಳಿಯ ಎಪಿಎಂಸಿ ಯಾರ್ಡ್, ಕರೂರಿನ ಎಪಿಎಂಸಿ ಯಾರ್ಡ್‌ನಲ್ಲಿ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ.
ಕಳೆದ ಬಾರಿ ಐದು ಖರೀದಿ ಕೇಂದ್ರಗಳಿದ್ದವು. ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಖರೀದಿಸುವ ಉತ್ಪನ್ನ, ಬೆಂಬಲ ಬೆಲೆ: ಸಾಮಾನ್ಯ ಭತ್ತಕ್ಕೆ ₹2,300(ಪ್ರತಿ ಕ್ವಿಂಟಾಲ್‌ಗೆ), ಗ್ರೇಡ್-ಎ ಭತ್ತಕ್ಕೆ ₹2,320 ಇದ್ದು, ರಾಗಿ ಬೆಳೆಗೆ ₹4,290 ಇರುತ್ತದೆ.
ಹೈಬ್ರೀಡ್ ಬಿಳಿ ಜೋಳಕ್ಕೆ ₹3,371 ಇದ್ದು, ಮಾಲ್ದಂಡಿ ಬಿಳಿ ಜೋಳಕ್ಕೆ ₹3,421 ಬೆಲೆ ನಿಗದಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಏಜೆನ್ಸಿಯಾಗಿರುತ್ತಾರೆ. ರೈತರು ಫ್ರೂಟ್ ದಾಖಲೆ ಮೂಲಕ ನೋಂದಾಯಿಸಲು ಅವಕಾಶವಿರುತ್ತದೆ ಎಂದರು.
ಭತ್ತದ ಬೆಳೆ ನೋಂದಾಯಿಸಲು ನ.11 ರಿಂದ ಡಿ.31 ವರೆಗೆ ಅವಕಾಶವಿದೆ. ಭತ್ತ ಖರೀದಿ ಕೇಂದ್ರದಲ್ಲಿ 2025ರ ಜ.1 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ. ರಾಗಿ ಮತ್ತು ಜೋಳ ನೋಂದಣಿಯು ಡಿ.1 ರಿಂದ ಪ್ರಾರಂಭಗೊಳ್ಳುತ್ತದೆ. 2025ರ ಜ.1 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ ಎಂದು ಹೇಳಿದರು.
ರೈತರ ಹೆಸರು ಹೇಳಿ, ಅಕ್ರಮವಾಗಿ ಬೆಳೆ ನೋಂದಾಯಿಸಿಕೊಂಡು ಮಾರಾಟ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಳೆ ಮಾರಾಟ ಸಂದರ್ಭದಲ್ಲಿ ಗೋಣಿ ಚೀಲ ವ್ಯವಸ್ಥೆಯನ್ನು ಖರೀದಿ ಸಂಸ್ಥೆ ಅಥವಾ ಏಜೆನ್ಸಿ ಅವರೇ ಮಾಡಬೇಕು. ಉಗ್ರಾಣ ಸಮಸ್ಯೆ, ಕಳಪೆ ನಿರ್ವಹಣೆ ಸೇರಿದಂತೆ ಇನ್ನಿತರೆ ದೂರುಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಏಜೆನ್ಸಿ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಖರೀದಿ ಕೇಂದ್ರಗಳಲ್ಲಿ ಚೆಕ್‌ಪೊಸ್ಟ್ ತೆರೆಯಲಾಗುತ್ತದೆ. ಬೆಳೆಗಳ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೆ ಬೆಳೆಗಳ ನೋಂದಣಿ ಹಾಗೂ ಖರೀದಿ ನಡೆಯಬೇಕುಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ
ಈ ಹಿಂದಿನ ಬೆಳೆಗಳ ನೋಂದಣಿ ಹಾಗೂ ಖರೀದಿ ಸಮಯದಲ್ಲಾದ ಸಮಸ್ಯೆಗಳ ಕುರಿತು ಪರಿಶೀಲಿಸಬೇಕು. ರೈತರಿಗೆ ಯಾವುದೇ ರೀತಿ ಅಡಚಡಣೆಯಾಗದಂತೆ ಯಶಸ್ವಿಯಾಗಿ ನೋಂದಣಿ, ಖರೀದಿ ನಡೆಯಬೇಕು.ಡಾ. ಶೋಭಾರಾಣಿ ವಿ.ಜೆ, ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.