ADVERTISEMENT

ಸಂಡೂರು: ಶಾಲಾ ಮಕ್ಕಳಿಗೆ ಉಚಿತವಾಗಿ ಯೋಗ ಕಲಿಸುವ ಶಂಕರ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:19 IST
Last Updated 21 ಜೂನ್ 2024, 5:19 IST
   

ಸಂಡೂರು: ಯೋಗ ಕ್ಷೇತ್ರದಲ್ಲಿ ಸಾಧನೆ ಸುಲಭವಲ್ಲ. ಶ್ರದ್ಧೆ, ತಾಳ್ಮೆ, ಛಲ ಮುಖ್ಯ. ಯೋಗ ಕಲೆಯನ್ನು ಸಿದ್ಧಿಸಿಕೊಂಡಿರುವ ಸಂಡೂರಿನ ಎಂ. ಶಂಕರ್ ಯಾದವ್, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಯೋಗ‌ ತರಬೇತಿ ನೀಡುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಯೋಗ ತರಬೇತಿ ಕೋರ್ಸ್ ಮುಗಿಸಿರುವ ಶಂಕರ್ ಯಾದವ್, ಕಳೆದ ಐದು ವರ್ಷಗಳಿಂದ ಪಟ್ಟಣದ 6ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.

‘ತಾಲ್ಲೂಕಿನ ಬಡ ವಿದ್ಯಾರ್ಥಿಗಳು ಕೂಡ ಯೋಗ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು’ ಎಂಬ ಸದುದ್ದೇಶ ಇವರದ್ದು. ರಾಜ್ಯಮಟ್ಟದ ಅನೇಕ ಯೋಗ ಕಾರ್ಯಕ್ರಮ, ಸ್ಪರ್ಧೆ, ಶಿಬಿರಗಳಲ್ಲಿ ಭಾಗವಹಿಸಿದ ಕೀರ್ತಿ ಹೊಂದಿದ್ದಾರೆ ಶಂಕರ್ ಯಾದವ್.

ADVERTISEMENT

ಇವರಿಂದ ತರಬೇತಿ ಪಡೆದ ಮಕ್ಕಳು ಬೆಂಗಳೂರಿನ ಪತಂಜಲಿ ಯೋಗ ಕೇಂದ್ರ, ಆಚಾರ್ಯ ಯೋಗ ಸಂಸ್ಥೆ, ಶಿಕ್ಷಣ ಇಲಾಖೆ ನಡೆಸುವ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಭಾಗಮಟ್ಟ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲೂ ಸಾಧನೆ ಮಾಡಿರುವುದು ವಿಶೇಷ.

ಶಂಕರ್ ಅವರು ತಾಲ್ಲೂಕಿನ ಬೊಮ್ಮಗಟ್ಟದ ಕಸ್ತೂರ ಬಾ ಗಾಂಧಿ ವಸತಿ ಶಾಲೆ, ದೋಣಿಮಲೈ ಸರ್ಕಾರಿ ಪ್ರಾಥಮಿಕ ಶಾಲೆ, ಬನ್ನಿಹಟ್ಟಿ ಸರ್ಕಾರಿ ಶಾಲೆ ಸೇರಿದಂತೆ ಹಲವೆಡೆಯೂ ಯಾವುದೇ ಫಲಾಪೇಕ್ಷೆ ಇಲ್ಲದೇ ಯೋಗ ತರಬೇತಿ ನೀಡುತ್ತಿರುವುದು ಶ್ಲಾಘನೀಯ.

ಯಾವುದೇ ಅಪೇಕ್ಷೆಯಿಲ್ಲದೆ ಸರ್ಕಾರಿ ಶಾಲೆ ಮಕ್ಕಳಿಗೆ ತರಬೇತಿ ನೀಡುವ ಶಂಕರ್ ಯಾದವ್ ಸೇವೆ ನಮ್ಮ ಶಾಲೆಯ ಮಕ್ಕಳಿಗೆ ಮತ್ತಷ್ಟು ಉತ್ತೇಜನ ತಂದಿದೆ. ಅವರ ಸೇವೆ ತಾಲ್ಲೂಕಿನ ಎಲ್ಲಾ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ದೊರಕುವಂತಾಗಲಿ’ ಎನ್ನುತ್ತಾರೆ ಇಲ್ಲಿನ 6ನೇ ವಾರ್ಡ್ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರುಂಧತಿ ಕೆ.ಜೆ. ಅವರು.

‘ಗಿನ್ನಿಸ್ ದಾಖಲೆ’ಯ ಕನಸು
ಶಂಕರ್ ಯಾದವ್ ಅವರ ನಿಸ್ವಾರ್ಥ ಸೇವೆಗೆ ರಾಯಚೂರಿನ ಬೆಳಕು ಸಂಸ್ಥೆಯಿಂದ 2023ನೇ ಸಾಲಿನ ‘ಯೋಗರತ್ನ ಪ್ರಶಸ್ತಿ’ , ಕರ್ನಾಟಕ ರಾಜ್ಯ ರೈತ ಸಂಘದಿಂದ ‘ಕಾಯಕಯೋಗಿ’ ಪ್ರಶಸ್ತಿ, ಗೋಕಾಕ್‌ನ ಸ್ವಾಮಿ ವಿವೇಕಾನಂದ ಯೋಗ ಸಂಸ್ಥೆ– ‘ಉತ್ತಮ ಯೋಗ ಶಿಕ್ಷಕ’ ಪ್ರಶಸ್ತಿ, ಕರ್ನಾಟಕ‌ ರಾಜ್ಯ ರೈತ ಸಂಘ– ‘ಕಾಯಕ ಯೋಗಿ’ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಯೋಗವನ್ನೇ ಉಸಿರಾಗಿಸಿಕೊಂಡಿರುವ ಇವರು, 2022ರಲ್ಲಿ ಡಾ‌.ಜಗದೀಶ್ ಅವರ ಮಾರ್ಗದರ್ಶನದಲ್ಲಿ ‘ನೋಬೆಲ್ ವರ್ಲ್ಡ್ ರೆಕಾರ್ಡ್’ ಕೂಡ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯೋಗದಲ್ಲಿ ‘ಗಿನ್ನಿಸ್ ದಾಖಲೆ’ ನಿರ್ಮಿಸುವ ಕನಸು‌ ಇವರದ್ದಾಗಿದೆ.
ಯೋಗಕ್ಕೆ ಯಾವುದೇ ಜಾತಿ, ಧರ್ಮಗಳಿಲ್ಲ. ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಸರ್ಕಾರಿ ಶಾಲೆ ಮಕ್ಕಳು ರಾಷ್ಟ್ರಮಟ್ಟದಲ್ಲಿ‌ ಸಾಧನೆ ಮಾಡಬೇಕು ಎಂಬುದು ನನ್ನ ಕನಸಾಗಿದೆ
ಎಂ.ಶಂಕರ್ ಯಾದವ್ ಯೋಗ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.