ನವಲಗುಂದ: ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಭಜನಾ ಮಂಡಳಿಗಳ ಮೆರವಣಿಗೆ, ದೇವರ ಭಜನಾ ಪದಗಳು ಮಕ್ಕಳಲ್ಲಿ, ಯುವಕರಲ್ಲಿ ದೇವರಲ್ಲಿ ಭಕ್ತಿ-ಭಾವ ಹಾಗೂ ನಂಬಿಕೆಯ ಜಾಗೃತಿಯುಂಟು ಮಾಡುತ್ತಿದ್ದವು.
ಆದರೆ ಇಂದಿನ ಆಧುನಿಕತೆ ಭರಾಟೆಯಲ್ಲಿ ಹಲವು ಗ್ರಾಮಗಳಲ್ಲಿ ಯುವಕರ ನಿರಾಸಕ್ತಿಯಿಂದ ಭಜನಾ ಮಂಡಳಿಗಳ ಭಜನಾ ಪದಗಳ ಮೆರವಣಿಗೆ ಸೊಗಡು ಮರೆಯಾಗುತ್ತಿದೆ. ಅವುಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎನ್ನುತ್ತಾರೆ ಭಜನಾ ಮಂಡಳಿ ಸದಸ್ಯರು.
ನಮ್ಮ ಸಂಸ್ಕೃತಿ ಅಲ್ಲದ ಪಾಶ್ಚಾತ್ಯ, ಚಲನಚಿತ್ರ ಗೀತೆಗಳ ಪ್ರಭಾವದಿಂದ ಜಾನಪದ ಕಲೆ ನೇಪಥ್ಯಕ್ಕೆ ಸರಿಯುತ್ತಿದೆ. ದಿನವಿಡೀ ವ್ಯವಸಾಯ ಮಾಡಿ ದುಡಿದು ದಣಿದ ದೇಹಗಳಿಗೆ ಮನತಣಿಸುವ ಶಕ್ತಿ ಗ್ರಾಮೀಣ ಜಾನಪದ ಗೀತೆ ಹಾಗೂ ರಾಮ ಭಜನೆಗಿದೆ.
ಯುವ ಸಮುದಾಯದ ಮನಸ್ಸು ಮತ್ತು ಕಣ್ಣಿಗೆ ತೃಪ್ತಿ ಇಲ್ಲದ ಚಲನಚಿತ್ರಗಳನ್ನು ದೂರ ಮಾಡಿ ಸಂಸ್ಕೃತಿ, ಸಂಸ್ಕಾರ, ಪರಂಪರೆ ಬೆಳೆಸಿ ಊರುಗಳಲ್ಲಿ ಸಾಮರಸ್ಯ ಪರಂಪರೆ ಮೂಡಿಸುವ ಜಾನಪದ ಗೀತೆ, ಭಜನೆ, ಕೋಲಾಟದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಬೆಳೆಸಬೇಕು ಎಂದು ಶಂಭುಲಿಂಗ ಕುಂಬಾರ ಹಾಗೂ ಸಚಿನ್ ಕುಂಬಾರ ಮನವಿ ಮಾಡಿದರು.
ನಮ್ಮ ಪೂರ್ವಿಕರ ಕಾಲದ ಊರುಗಳಲ್ಲಿ ಪ್ರತಿಯೊಂದು ಸಮುದಾಯಗಳ ಮಧ್ಯೆ ಜಾನಪದ ಸಾಮರಸ್ಯ ಇತ್ತು. ಇಂದು ಗ್ರಾಮೀಣ ಕಲೆ ಕಡೆಗಣಿಸಿ ಕ್ಷುಲ್ಲಕ ರಾಜಕೀಯ ಸಮುದಾಯಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ನೆಮ್ಮದಿ ಹಾಳಾಗಿ ಅಶಾಂತಿ ಅಡಗಿದೆ ಎಂದು ಗಣೇಶ ದೇವಸ್ಥಾನ ಸಮಿತಿ ಸದಸ್ಯ ಚನ್ನಪ್ಪ ಕೆಸರಪ್ಪನವರ ವಿಷಾದಿಸಿದರು.
ಬದುಕಿಗೆ ಶಿಕ್ಷಣ ಜೀವ ಉಳಿವಿಗೆ ಆಹಾರ ನೀರು ಗಾಳಿ ಎಷ್ಟು ಮುಖ್ಯವೋ ಗಾಯನ ಕಲೆ ಮನುಷ್ಯನನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುತ್ತದೆ-ಪ್ರಭು ಇಬ್ರಾಹಿಂಪುರ ಪುರಸಭೆ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.