ADVERTISEMENT

ಕ್ಷಣಾರ್ಧದಲ್ಲಿ 155 ಕೆ.ಜಿ ಗುಂಡು ಎತ್ತಿದ ವಿಜಯಪುರದ ಶೇಖಪ್ಪ

ಸಿ.ಶಿವಾನಂದ
Published 28 ಜನವರಿ 2023, 19:30 IST
Last Updated 28 ಜನವರಿ 2023, 19:30 IST
155 ಕೆ.ಜಿ. ತೂಕದ ಗುಂಡು ಎತ್ತಿ ಪ್ರಶಸ್ತಿ ಜಯಿಸಿದ ವಿಜಯಪುರದ ಶೇಖಪ್ಪ 
155 ಕೆ.ಜಿ. ತೂಕದ ಗುಂಡು ಎತ್ತಿ ಪ್ರಶಸ್ತಿ ಜಯಿಸಿದ ವಿಜಯಪುರದ ಶೇಖಪ್ಪ    

ಹಂಪಿ (ಹೊಸಪೇಟೆ): ಕಣ್ಣು ಮಿಟುಕಿಸುತ್ತಿದ್ದಂತೆಯೇ 155 ಕೆ.ಜಿ. ಭಾರದ ಗುಂಡನ್ನು ಕ್ಷಣಾರ್ಧದಲ್ಲಿ ಎತ್ತಿದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರು ಗ್ರಾಮದ ಶೇಖಪ್ಪ ಅವರು ಹಂಪಿ ಉತ್ಸವದಲ್ಲಿ ಹೊಸ ದಾಖಲೆ ಬರೆದರು.

ಹಂಪಿ ಉತ್ಸವದ ಅಂಗವಾಗಿ ಇಲ್ಲಿನ ಹೊಸಮಲಪನಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಅವರು ಈ ಸಾಹಸ ಮಾಡಿದರು. ಸತತ ನಾಲ್ಕನೇ ಬಾರಿ ಹಂಪಿ ಉತ್ಸವದಲ್ಲಿ ಪ್ರಶಸ್ತಿ ಪಡೆದ 38ರ ಪ್ರಾಯದ ಶೇಖಪ್ಪ 135 ಕೆ.ಜಿ.ತೂಕದ ಗುಂಡನ್ನು 3.46 ಸೆಕೆಂಡ್‍ಗಳಲ್ಲಿ ಎತ್ತಿ ನೆರೆದಿದ್ದವರ ಹುಬ್ಬೇರಿಸಿದರು.

ಬಳಿಕ ನಡೆದ 155 ಕೆ.ಜಿ. ತೂಕದ ಗುಂಡನ್ನು ಪ್ರಶಸ್ತಿ ಸುತ್ತಿನಲ್ಲಿ ಜಮಖಂಡಿಯ ಇಬ್ರಾಹಿಂ ಸಾಹೇಬ್ ಅವರು ಮೂರನೇ ಪ್ರಯತ್ನದಲ್ಲಿ 13.64 ಸೆಕೆಂಡ್‌ಗಳಲ್ಲಿ ಎತ್ತಿದರು, ಇನ್ನೇನು ಪ್ರಶಸ್ತಿ ಇವರ ಪಾಲಾಯಿತು ಎಂದು ನೆರೆದಿದ್ದ ನೂರಾರು ಪ್ರೇಕ್ಷಕರು ಮಾತಾಡಿಕೊಳ್ಳುತ್ತಿರುವಾಗಲೇ ಅಖಾಡಕ್ಕಿಳಿದ ಶೇಖಪ್ಪ ನೋಡ ನೋಡುತ್ತಿದ್ದಂತೆಯೇ (3 ಸೆಕೆಂಡ್‌ಗಳಲ್ಲಿ) 155 ಕೆ.ಜಿ.ತೂಕದ ಗುಂಡನ್ನು ಸಲೀಸಾಗಿ ತೊಡೆಮೇಲೆರಿಸಿಕೊಂಡು ಭುಜದ ಮೇಲೆತ್ತಿ ಬಟ್ಟೆಯ ಗಂಟಿನಂತೆ ಹಿಂದಕ್ಕೆಸೆದರು. ಆಗ ನೆರೆದಿದ್ದ ಕ್ರೀಡಾಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. 14 ಬಾರಿ ಗುಂಡೆತ್ತುವ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದ ಇಬ್ರಾಹಿಂ ಸಾಹೇಬ್ ಎರಡನೇ ಸ್ಥಾನಕ್ಕೆ ತಳ್ಳಿದರು. ಶೇಖಪ್ಪ ₹10 ಸಾವಿರ ನಗದು ಬಹುಮಾನ ಪಡೆದರು.

ADVERTISEMENT

ಬಿರುಬಿಸಿಲು ಲೆಕ್ಕಿಸದೇ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಕ್ರೀಡಾಪ್ರೇಮಿಗಳು ಕದಲದೇ ಪಂದ್ಯವನ್ನು ವೀಕ್ಷಿಸಿ, ಸಾಹಸಿಗರಿಗೆ ಚಪ್ಪಾಳೆ, ಕೇಕೆ ಹಾಕಿ ಬೆಂಬಲ ಸೂಚಿಸಿದರು. ಹೊಸಪೇಟೆಯ ಆನಂದ್ 125 ಕೆ.ಜಿ.ತೂಕದ ಗುಂಡನ್ನು 11.1 ಸೆಕೆಂಡುಗಳಲ್ಲಿ ಎತ್ತಿದರು, ಬಳಿಕ 135 ಕೆ.ಜಿ.ತೂಕದ ಗುಂಡನ್ನು 6.34 ಸೆಕೆಂಡ್‍ಗಳಲ್ಲಿ ಸಲೀಸಾಗಿ ಎತ್ತಿದ ಬಳಿಕ ಪ್ರಶಸ್ತಿ ಸುತ್ತಿನಲ್ಲಿ ಭಾರಿ ಕಸರತ್ತು ನಡೆಸಿದರಾದರೂ ಗುಂಡು ತೊಡೆಯಿಂದ ಮೇಲಕ್ಕೇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.