ADVERTISEMENT

ತೆಕ್ಕಲಕೋಟೆ | ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ

ತೆಕ್ಕಲಕೋಟೆಯಲ್ಲಿ ಅವ್ಯವಸ್ಥೆ: ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 5:52 IST
Last Updated 28 ನವೆಂಬರ್ 2023, 5:52 IST
ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಸಾಲುಗಟ್ಟಿ ನಿಂತಿರುವುದು
ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಸಾಲುಗಟ್ಟಿ ನಿಂತಿರುವುದು   

ತೆಕ್ಕಲಕೋಟೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ರೋಗಿಗಳು ಪ್ರತಿದಿನ ಪರದಾಡುವಂತಾಗಿದೆ.

ಆರೋಗ್ಯ ಕೇಂದ್ರದ ಒಳಾಂಗಣ, ಶೌಚಾಲಯಗಳು ಅಸ್ವಚ್ಛತೆಯಿಂದ ಕೂಡಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 200ರಿಂದ 250 ಹಾಗೂ ಸೋಮವಾರ ಮತ್ತು ಗುರುವಾರದಂದು ಕನಿಷ್ಠ 350ರಿಂದ 400 ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಆದರೆ, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಹಾಗೂ ಆಯುಷ್ ವೈದ್ಯಾಧಿಕಾರಿಗಳ ಕೊರತೆಯಿಂದ ರೋಗಿಗಳು ಸಮಸ್ಯೆ ಅನುಭವಿಸುವಂತಾಗಿದೆ. ವೈದ್ಯರ ಕೊರತೆಯಿಂದ ಪಟ್ಟಣ ಸೇರಿ ಬಲಕುಂದಿ, ನಿಟ್ಟೂರು, ಉಡೇಗೋಳ, ಹಳೇಕೋಟೆ ಹಾಗೂ ವಿವಿಧ ಗ್ರಾಮಗಳ ಜನರು ಖಾಸಗಿ ಆಸ್ಪತ್ರೆಗಳನ್ನು ಅರಿಸಿ, ಸಿರುಗುಪ್ಪ ನಗರಕ್ಕೆ ತೆರಳುವಂತಾಗಿದೆ.

ADVERTISEMENT

ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯು ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನೇಮಕ ಮಾಡದೆ, ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

24 ಖಾಯಂ ಸಿಬ್ಬಂದಿ ಇರಬೇಕಾದ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ದಂತ ವೈದ್ಯಾಧಿಕಾರಿ ಮಾತ್ರ ಇದ್ದಾರೆ. ಸಾಮಾನ್ಯ ವೈದ್ಯ, ಸ್ತ್ರೀರೋಗ ತಜ್ಞೆ, ಎನ್‌ಸಿಡಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಮಕ್ಕಳ ತಜ್ಞರು ವೇತನ ರಹಿತ ರಜೆಗೆ ತೆರಳಿದ್ದು, ಅರವಳಿಕೆ ತಜ್ಞರು ಮೂರು ದಿನ ಮಾತ್ರ ಲಭ್ಯ ಇರುತ್ತಾರೆ. 8 ಶುಶ್ರೂಷಕಿಯರಲ್ಲಿ ಐವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆಯಿಂದ ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುವುದು ಸಾಮಾನ್ಯವಾಗಿದೆ.

ಆರೋಗ್ಯ ಕೇಂದ್ರದ ಸಿಬ್ಬಂದಿ ಸಣ್ಣಪುಟ್ಟ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡದೇ ನೇರವಾಗಿ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ. ಬಹುತೇಕ ಮಾತ್ರೆ, ಔಷಧಗಳನ್ನು ಖಾಸಗಿ ಔಷಧ ಅಂಗಡಿಗಳಿಂದ ತರುವಂತೆ ಶುಶ್ರೂಷಕಿಯರು ಹೇಳಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.

ವಿದ್ಯುದ್ದೀಪದ ಸಮಸ್ಯೆ: ಆರೋಗ್ಯ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಕೊಠಡಿಗಳಿದ್ದು, 25 ಕೆವಿ ಜನರೇಟರ್ ಹಾಕಲಾಗಿದೆ. ಇಲ್ಲಿ ಶಸ್ತ್ರಚಿಕಿತ್ಸಾ ವಿಭಾಗವೂ ಇರುವುದರಿಂದ 100 ಕೆವಿ ಜನರೇಟರ್ ಅಗತ್ಯ ಇದೆ. ಕೇವಲ 25 ಕೆವಿ ಜನರೇಟರ್ ಇರುವುದರಿಂದ ಸದಾ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿದೆ.

ಆರೋಗ್ಯ ಕೇಂದ್ರದಲ್ಲಿನ ಖಾಲಿ ಹುದ್ದೆಗಳ ಕುರಿತಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತರಲಾಗಿದೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ಡಾ. ಬಿ.ಈರಣ್ಣ ಸಿರುಗುಪ್ಪ ತಾಲ್ಲೂಕು ವೈದ್ಯಾಧಿಕಾರಿ
ವೈದ್ಯರ ಕೊರತೆ ಕುರಿತು ಗಮನಕ್ಕೆ ಬಂದಿದೆ. ಮಕ್ಕಳ ತಜ್ಞರು ಸಾಮಾನ್ಯ ವೈದ್ಯ ಸ್ತ್ರೀರೋಗ ತಜ್ಞೆ ಎನ್‌ಸಿಡಿ ವೈದ್ಯಾಧಿಕಾರಿ ಹುದ್ದೆ ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು
ಡಾ. ವೈ.ರಮೇಶ್ ಬಾಬು ಜಿಲ್ಲಾ ವೈದ್ಯಾಧಿಕಾರಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.