ತೆಕ್ಕಲಕೋಟೆ: ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯು ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇದರಿಂದ ಒಂದೆಡೆ, ಆಡಳಿತಾತ್ಮಕ ಸಮಸ್ಯೆ ಎದುರಾಗಿದ್ದರೆ, ಮತ್ತೊಂದೆಡೆ ಪಟ್ಟಣದಲ್ಲಿ ಸ್ವಚ್ಛತೆ ಪಾಲನೆಯೂ ಹಳಿ ತಪ್ಪಿದೆ.
ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ಮಂಜೂರಾತಿ ಹುದ್ದೆ 65. ಆದರೆ, ಇರುವುದು 32 ಸಿಬ್ಬಂದಿ ಮಾತ್ರ. ಇದರಲ್ಲಿ 9 ಜನ ಗುತ್ತಿಗೆ ನೌಕರರು. ಉಳಿದ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಪರಿಸ್ಥಿತಿ ಹೀಗಿರುವಾಗ ಸಿರುಗುಪ್ಪ ನಗರಸಭೆಗೆ ಮತ್ತು ಜಿಲ್ಲಾ ಅಭಿವೃದ್ಧಿ ಕೋಶಕ್ಕೆ ತಲಾ ಒಬ್ಬೊಬ್ಬರನ್ನು ಎರವಲು ಸೇವೆಯ ಮೇಲೆ ಕಳುಹಿಸಲಾಗಿದೆ. ಮುಖ್ಯಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಿರುವ ತಿಮ್ಮಪ್ಪ ಜಗಲಿ, ಪಟ್ಟಣ ಪಂಚಾಯ್ತಿಗೆ ಭೇಟಿ ನೀಡುವುದೇ ಅಪರೂಪ ಎಂದು ಸದಸ್ಯರು ದೂರಿದ್ದಾರೆ.
ಅಲ್ಲದೆ, ಸಹಾಯಕ ಅಭಿಯಂತರ, ಲೆಕ್ಕಾಧಿಕಾರಿ, ಕಚೇರಿ ವ್ಯವಸ್ಥಾಪಕ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಕಂದಾಯ ಶಾಖೆ ಸಿಬ್ಬಂದಿ, ಆರೋಗ್ಯ ನಿರೀಕ್ಷಣಾಧಿಕಾರಿ ಹೀಗೆ ಮಹತ್ವದ 20ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಸಿವಿಲ್ ಕಾಮಗಾರಿಗಳ ನಿರ್ವಹಣೆ, ಟೆಂಡರ್ ಪ್ರಕ್ರಿಯೆ ಕೆಲಸ ಕಾಮಗಾರಿಗಳ ಗುಣಮಟ್ಟ ಖಾತರಿಪಡಿಸಿಕೊಳ್ಳುವುದು, ಅಂದಾಜು ಪತ್ರಿಕೆ ಸಿದ್ಧಪಡಿಸುವುದಕ್ಕೆ ಒಬ್ಬರು ಕಾಯಂ ಎಂಜಿನಿಯರ್ ಇರಬೇಕು. ಆದರೆ, ಕಿರಿಯ ಎಂಜಿನಿಯರ್ ಮಾತ್ರ ಇದ್ದು, ಕಾಮಗಾರಿಗಳು ವಿಳಂಬವಾಗುತ್ತಿವೆ. ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿದ್ದರೂ ಕೇಳುವವರೇ ಇಲ್ಲ ಎಂಬಂತಾಗಿದೆ. ನೈರ್ಮಲ್ಯ ವ್ಯವಸ್ಥೆ ನಿರ್ವಹಣೆಗೆ ಎರಡು ಹುದ್ದೆಗಳ ಪೈಕಿ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದು ಪಟ್ಟಣದಲ್ಲಿ ಮಾಲಿನ್ಯ ಸಮಸ್ಯೆ ಬಿಗಡಾಯಿಸಿದೆ.
ಸಿಬ್ಬಂದಿ ಕೊರತೆಯಿಂದಾಗಿ ಮ್ಯೂಟೆಶನ್, ಆನ್‌ಲೈನ್ ದಾಖಲೆ ವಿತರಣೆ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೆಲಸ ನಿರ್ವಹಿಸುವವರೇ ಇಲ್ಲದಂತಾಗಿದೆ. ಸಿಬ್ಬಂದಿ ಮನೆ, ಅಂಗಡಿ ಬಾಗಿಲಿಗೆ ಹೋದರೂ ಜನ ಕರ ಪಾವತಿಸುವುದಿಲ್ಲ. ಈಗ ವಸೂಲಿಗೆ ಸಿಬ್ಬಂದಿಯೂ ಇಲ್ಲ. ಹಾಗಾಗಿ ಪಟ್ಟಣ ಪಂಚಾಯಿತಿಗೆ ಬರಬೇಕಿದ್ದ ಮಾಸಿಕ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ 1 ಜೆಸಿಬಿ, 1 ಟ್ರಾಕ್ಟರ್, 5 ಕಸ ವಿಲೇವಾರಿ ಆಟೋ, 1 ಸಕ್ಕಿಂಗ್ ಮಷಿನ್ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ಇವೆ. ಯಾವುದಕ್ಕೂ ಖಾಯಂ ಚಾಲಕರೇ ಇಲ್ಲ. ಇದರಿಂದಾಗಿ ವಾಹನಗಳು, ಯಂತ್ರಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ.
ಪಟ್ಟಣ ಪಂಚಾಯ್ತಿಗೆ ಖಾಯಂ ಸಿಬ್ಬಂದಿ ನೇಮಕವಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದುಶಂಶಾ ಆಲಂ ಸಿರುಗುಪ್ಪ ತಹಶೀಲ್ದಾರ್
ಸಿಬ್ಬಂದಿ ಕೊರತೆಯಿಂದಾಗಿ ಪಟ್ಟಣದ ಚರಂಡಿ ನೀರು ಹಾಗೂ ನೈರ್ಮಲ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಸಿಬ್ಬಂದಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲಸಿದ್ದವೇಂದ್ರ ಬಾಲಪ್ಪ ಪಟ್ಟಣ ಪಂಚಾಯಿತಿ ಸದಸ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.