ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ | ನಾಗೇಂದ್ರ ರಾಜೀನಾಮೆ ಪಡೆಯಿರಿ: ಶ್ರೀರಾಮಲು

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:19 IST
Last Updated 2 ಜೂನ್ 2024, 15:19 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಬಳ್ಳಾರಿ: ‘ವಾಲ್ಮೀಕಿ‌ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಆತಂಕ ಮಾಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ನೀಡಿದೆ. ಆದರೆ, ಎಸ್‌ಐಟಿಗೆ ಮಿತಿಗಳಿರುತ್ತವೆ. ನಾಗೇಂದ್ರ ಸಚಿವರಾಗಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಕೊಡಬೇಕು’ ಎಂದು ಹೇಳಿದರು.  

‘ಸಾಯುವಾಗ ಯಾರೂ ಸುಳ್ಳು ಹೇಳುವುದಿಲ್ಲ. ಹೀಗಾಗಿಯೇ ಸಚಿವರ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡಲೇಬೇಕು‘ ಎಂದು ಅವರು ಪ್ರತಿಪಾದಿಸಿದರು. 

ADVERTISEMENT

‘ವಾಲ್ಮೀಕಿ ನಿಗಮದಲ್ಲಿ ಮಾತ್ರವಲ್ಲ. ಎಲ್ಲ ನಿಗಮ ಮತ್ತು ಇಲಾಖೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಸರ್ಕಾರದ ಹಣವನ್ನು ಹೇಗೆ ಬಳಸಲು ಸಾಧ್ಯ? ಇದು ಹೀಗೆಯೇ ಮುಂದುವರಿದರೆ ಜನರು ಸರ್ಕಾರದ ವಿರುದ್ಧ ದಂಗೆ ಏಳಲಿದ್ದಾರೆ’ ಎಂದು ಎಚ್ಚರಿಸಿದರು. 

‘ಮೀಸಲು ಕ್ಷೇತ್ರದಿಂದ ಗೆದ್ದ ನಾಗೇಂದ್ರ ಅದೇ ಸಮಾಜಕ್ಕೆ ಸಮಸ್ಯೆ ಉಂಟು ಮಾಡಿದ್ದಾರೆ’ ಎಂದೂ ಶ್ರೀರಾಮುಲು ಟೀಕಿಸಿದರು.

ಮತಗಟ್ಟೆ ಸಮೀಕ್ಷೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇತ್ತು.  ಆದರೆ, ಮತಗಟ್ಟೆ ಸಮೀಕ್ಷೆಯಲ್ಲಿ ಕಡಿಮೆ ಬಂದಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 24ಕ್ಕೂ ಅಧಿಕ ಸ್ಥಾನ ಸಿಗಲಿದೆ‘ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.