ADVERTISEMENT

ಕಂಪ್ಲಿ: ಕಾಲುವೆಯಲ್ಲಿ ಹೂಳು ತಪ್ಪದ ರೈತರ ಗೋಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 6:15 IST
Last Updated 22 ಜುಲೈ 2024, 6:15 IST
ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ ಬಳಿ ಆರಂಭವಾಗುವ ಎಚ್.ಎಲ್.ಸಿ ನಂ.2 ವಿತರಣಾ ನಾಲೆಯಲ್ಲಿರುವ ಕಲ್ಲುಗುಂಡುಗಳು
ಕಂಪ್ಲಿ ತಾಲ್ಲೂಕಿನ ಉಪ್ಪಾರಹಳ್ಳಿ ಬಳಿ ಆರಂಭವಾಗುವ ಎಚ್.ಎಲ್.ಸಿ ನಂ.2 ವಿತರಣಾ ನಾಲೆಯಲ್ಲಿರುವ ಕಲ್ಲುಗುಂಡುಗಳು   

ಕಂಪ್ಲಿ: ತಾಲ್ಲೂಕಿನ ಉಪ್ಪಾರಹಳ್ಳಿ, ಮೆಟ್ರಿ, ದೇವಲಾಪುರ, ಜವುಕು ಮತ್ತು ದೇವಸಮುದ್ರ ಗ್ರಾಮ ವ್ಯಾಪ್ತಿಯ ಸುಮಾರು 6100ಎಕರೆ ಭೂಮಿಗೆ ನೀರು ಒದಗಿಸುವ ತುಂಗಭದ್ರಾ ಎಚ್.ಎಲ್.ಸಿ ನಂ.2 ವಿತರಣಾ ನಾಲೆ ದಶಕದಿಂದ ದುರಸ್ತಿ ಕಾಣದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಎಚ್.ಎಲ್.ಸಿ ಮುಖ್ಯ ಕಾಲುವೆಯಿಂದ ನಂ.2 ವಿತರಣಾ ನಾಲೆಗೆ 40ಕ್ಯುಸೆಕ್ ನೀರು ನಿಗದಿಯಾಗಿದೆ. ಅದರಲ್ಲಿ ಉಪ ಕಾಲುವೆಗಳಾದ 1ಆರ್ ಕಾಲುವೆಗೆ 8.7ಕ್ಯುಸೆಕ್, 4ಎಲ್ ಕಾಲುವೆಗೆ 4.97ಕ್ಯುಸೆಕ್, 2ಎಲ್ 1.21ಕ್ಯುಸೆಕ್, 3ಆರ್ 1.33ಕ್ಯುಸೆಕ್, 5ಆರ್ 5.33ಕ್ಯುಸೆಕ್, 6ಎಲ್ 4.92ಕ್ಯುಸೆಕ್, 7ಆರ್ 8.34ಕ್ಯುಸೆಕ್ ಮತ್ತು 8ಟಿಇ ಕಾಲುವೆಗೆ 4.31ಕ್ಯುಸೆಕ್ ನೀರು ಪೂರೈಕೆಯಾಗುತ್ತದೆ.

ಆರಂಭದಲ್ಲಿ ಈ ಕಾಲುವೆಗಳ ವ್ಯಾಪ್ತಿಯಲ್ಲಿ ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ ಅವಕಾಶವಿತ್ತು. ಆದರೆ, ರೈತರು ಕ್ರಮೇಣ ವಾಣಿಜ್ಯ ಬೆಳೆಯಾದ ಭತ್ತದ ಕಡೆ ಹೆಚ್ಚು ಆಸಕ್ತಿ ವಹಿಸಿದ್ದರಿಂದ ಏಕಾಏಕಿ ನೀರಿನ ಕೊರತೆ ಪ್ರಮುಖವಾಗಿ ಕಾಣಿಸಿಕೊಂಡಿದೆ.

ADVERTISEMENT

ಕಾಲುವೆ ನೀರಿನ ಸಮಸ್ಯೆ ಎದುರಾಗಿದ್ದರಿಂದ ಕೆಲ ರೈತರು ಬೋರ್ ವೆಲ್ ಹಾಕಿಸಿಕೊಂಡಿದ್ದು, ಸಮತೋಲನ ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ, ಶೇ 80ರಷ್ಟು ರೈತರು ಇನ್ನು ಕಾಲುವೆ ನೀರನ್ನೇ ಆವಲಂಬಿಸಿದ್ದಾರೆ.

2014ರಲ್ಲಿ ಕಾಲುವೆ ದುರಸ್ತಿ ಭಾಗ್ಯ ಕಂಡಿದ್ದು ಬಿಟ್ಟರೆ ಇಲ್ಲಿಯವರೆಗೆ ಕನಿಷ್ಠ ನಿರ್ವಹಣೆಯೂ ಇಲ್ಲ. ಈ ಕಾರಣದಿಂದ ಕಾಲುವೆಗಳು ಮೂಲ ಸ್ವರೂಪಗಳನ್ನೇ ಕಳೆದುಕೊಂಡಿವೆ.

ಕಾಲುವೆ ಭಾಗದಲ್ಲಿ ಒಂದೆರೆಡು ತೂಬುಗಳು (ನೀರುಗಂಡಿ) ಸರಿ ಇರುವುದು ಬಿಟ್ಟರೆ ಇನ್ನುಳಿದ ಕಾಲುವೆ ತೂಬುಗಳು ಹಾಳಾಗಿವೆ. ಕಾಲುವೆಯ ಪಾಶ್ರ್ವಗೋಡೆಗಳು ಅಲ್ಲಲ್ಲಿ ಶಿಥಿಲವಾಗಿ ನೀರು ಸೋರಿಕೆಯಾಗುತ್ತಿದೆ. ಇನ್ನು ಗಿಡಗಂಟೆಗಳು, ಕಾಲುವೆ ಮಧ್ಯ ಭಾಗದಲ್ಲಿ ಕಲ್ಲು ಗುಂಡುಗಳು, ಯಥೇಚ್ಛ ತ್ಯಾಜ್ಯ ತುಂಬಿರುವುದು ಕಂಡುಬರುತ್ತದೆ.

ಈ ಎಲ್ಲ ಕಾರಣಗಳಿಂದ ಕಾಲುವೆ ಕೊನೆ ಅಂಚಿಗೆ ಸಕಾಲಕ್ಕೆ ನೀರು ತಲುಪದೆ ಕೃಷಿ ಚಟುವಟಿಕೆಗೆ ಪ್ರತಿ ವರ್ಷ ಹಿನ್ನಡೆಯಾಗಿ ಇಳುವರಿ ಕುಸಿಯುತ್ತಿದೆ ಎಂದು ರೈತರು ಬೇಸರದಿಂದ ತಿಳಿಸುತ್ತಾರೆ.

ಕಂಪ್ಲಿ ತಾಲ್ಲೂಕಿನ ತುಂಗಭದ್ರಾ ಎಚ್.ಎಲ್.ಸಿ ನಂ.2 ವಿತರಣಾ ನಾಲೆಯಲ್ಲಿ ತುಂಬಿರುವ ಹೂಳು ಗಿಡಗಂಟೆಗಳ ದೃಶ್ಯ 
ನಂ.2 ವಿತರಣಾ ನಾಲೆ ಮತ್ತು ಉಪ ಕಾಲುವೆಗಳ ನಿರ್ವಹಣೆಗೆ ಸದ್ಯ ಕಾಯಂ ನಿರಗಂಟಿಗಳನ್ನು (ಲಸ್ಕರ್) ನೇಮಿಸಬೇಕು.
ಊಳೂರು ರಾಜಪ್ಪ ರೈತ ಮುಖಂಡ ಮೆಟ್ರಿ
ಅಧಿಕಾರಿಗಳಿಗೆ ಮನವಿ ಮಾಡಿದರೆ ಅನುದಾನವಿಲ್ಲ ಎನ್ನುತ್ತಾರೆ. ಈ ಕಾರಣದಿಂದ ಉಪ್ಪಾರಹಳ್ಳಿ ಮೆಟ್ರಿ ದೇವಲಾಪುರ ಜವುಕು ಮತ್ತು ದೇವಸಮುದ್ರ ಗ್ರಾಮದ ರೈತರೆಲ್ಲರು ಸೇರಿ ₹30ಸಾವಿರ ಸಂಗ್ರಹಿಸಿದ್ದೇವೆ. ನೀರು ಬಿಡುಗಡೆಗೆ ಮುನ್ನ ಕಾಲುವೆ ತಾತ್ಕಾಲಿಕ ದುರಸ್ತಿ ಮಾಡಿಕೊಳ್ಳುತ್ತೇವೆ.
ಎ. ಲೋಕೇಶ್ ರೈತ ಮೆಟ್ರಿ
4ಎಲ್ ಕಾಲುವೆಯ ನೀರಿನ ಜೊತೆಗೆ ಮೆಟ್ರಿ ಗ್ರಾಮದ ಎಲ್ಲ ಚರಂಡಿಗಳ ನೀರು ಸೇರಿ ಹೊಲ ಗದ್ದೆಗಳಿಗೆ ಸೇರುತ್ತಿದೆ. ರೈತರು ನೀರಿಗಿಳಿದಾಗ ಚರ್ಮ ಕಾಯಿಲೆ ನವೆ(ತಿಂಡಿ) ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
-ಮೈಲಾಪುರ ಜಡೆಪ್ಪ ರೈತ ಮೆಟ್ರಿ
ರೈತರ ಬೇಡಿಕೆಗಳು
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಮುಖ್ಯ ಕಾಲುವೆಗೆ ಮತ್ತು ನಂ.2 ವಿತರಣಾ ನಾಲೆ ತೂಬಿಗೆ ಮಟ್ಟ ಸಮವಿಲ್ಲದ ಕಾರಣ ನಿಗದಿಪಡಿಸಿದ ನೀರು ಪೂರೈಕೆಯಾಗುತ್ತಿಲ್ಲ. ಈ ತಾಂತ್ರಿಕ ತೊಂದರೆ ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಕಾಲುವೆಗೆ ನಿಗದಿಪಡಿಸಿರುವ ನೀರು ರೈತರಿಗೆ ಸಾಲುತ್ತಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಇದೇ ಕಾಲುವೆಯಿಂದ ಕೆಲ ಗ್ರಾಮಗಳ ಕುಡಿಯುವ ನೀರಿಗಾಗಿ ಜೆಜೆಎಂ ಯೋಜನೆಯಡಿ ಕಾಲುವೆ ಬಳಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕೂಡಲೇ ಈ ಕಾಮಗಾರಿ ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ನಂ.2 ವಿತರಣಾ ನಾಲೆಗೆ ಸದ್ಯ 40ಕ್ಯುಸೆಕ್ ನೀರು ಪೂರೈಕೆಯಾಗುತ್ತಿದ್ದು ಇನ್ನಷ್ಟು ಹೆಚ್ಚಿಸಬೇಕು. ಕಾಲುವೆ ಸಂಪೂರ್ಣ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿಬೇಕು. ಅಲ್ಲಿಯವರೆಗೆ ಕನಿಷ್ಠ ದುರಸ್ತಿ ಜೊತೆಗೆ ಹೂಳು ಗಿಡಗಂಟೆಗಳನ್ನು ತೆರವುಗೊಳಿಸಬೇಕು.
ಲೈನಿಂಗ್ ಕಾಮಗಾರಿಗೆ ₹76ಕೋಟಿ ಪ್ರಸ್ತಾವ
ಕಂಪ್ಲಿ ಫಿರ್ಕಾದ ವಿವಿಧ ಕಾಲುವೆಗಳ ಲೈನಿಂಗ್ ಶಾಶ್ವತ ದುರಸ್ತಿಗೆ ₹ 76ಕೋಟಿ ಅಂದಾಜು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ವೈಯಕ್ತಿಕ ವೆಚ್ಚ ಭರಿಸಿ ಸದ್ಯ ನಂ.2 ವಿತರಣಾ ನಾಲೆ ವ್ಯಾಪ್ತಿಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಜೆಸಿಬಿಯಿಂದ ತೆರವುಗೊಳಿಸುವ ಕಾರ್ಯ ಮಾಡಿರುವೆ. –ಜೆ.ಎನ್. ಗಣೇಶ್ ಶಾಸಕ ಕಂಪ್ಲಿ ವಿಧಾನಸಭಾಕ್ಷೇತ್ರ ಸಹಕಾರ ಸಂಘ ರಚನೆಗೆ ಸೂಚನೆ ಕಾಲುವೆ ವ್ಯಾಪ್ತಿಯಲ್ಲಿ ಮೂರು ನೀರು ಬಳಕೆದಾರರ ಸಹಕಾರ ಸಂಘ ರಚಿಸಲು ಅವಕಾಶವಿದೆ. ರೈತರು ಸಂಘಟಿತರಾಗಿ ಸಂಘ ಅಸ್ತಿತ್ವಕ್ಕೆ ತಂದಲ್ಲಿ ಕಾಲುವೆ ನಿರ್ವಹಣೆಗೆ ಪ್ರತ್ಯೇಕ ಹಣ ದೊರೆಯಲಿದೆ. ಈ ಕುರಿತು ರೈತರಿಗೆ ಜಾಗೃತಿ ಮೂಡಿಸಲಾಗಿದೆ. –ಬಿ.ಚಂದ್ರಶೇಖರ್ ಸಹಾಯಕ ಎಂಜಿನಿಯರ್ ನೀರಾವರಿ ನಿಗಮ ಕಂಪ್ಲಿ ಕ್ರಿಯಾಯೋಜನೆ ಸಲ್ಲಿಕೆ ನಂ.2 ವಿತರಣಾ ನಾಲೆ ಮತ್ತು ಉಪ ಕಾಲುವೆಗಳ ಶಾಶ್ವತ ಲೈನಿಂಗ್ ಕಾಮಗಾರಿ ಮತ್ತು ತಾತ್ಕಾಲಿಕ ದುರಸ್ತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಾಲುವೆಗಳಿಗೆ ಚರಂಡಿ ನೀರು ಬಿಡದಂತೆ ಮೆಟ್ರಿ ಗ್ರಾಮ ಪಂಚಾಯಿತಿಗೆ ನೋಟೀಸ್ ನೀಡಲಾಗಿದೆ.–ಎ.ಶ್ರೀನಿವಾಸ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀರಾವರಿ ನಿಗಮ ಕಂಪ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.