ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನ ನೀರು ಸಂಗ್ರಹಣಾ ಮಟ್ಟವನ್ನು 506.80 ಮೀಟರ್‌ನಿಂದ 507.50 ಮೀಟರ್ ವರೆಗೆ ಏರಿಸಲು ಕರ್ನಾಟಕ ನೀರಾವರಿ ನಿಗಮ ತೀರ್ಮಾನ ಕೈಗೊಂಡಿದೆ.
‘ಗದಗ, ಹೂವಿನಹಡಗಲಿ, ಮುಂಡರಗಿ ಪಟ್ಟಣ ಸೇರಿದಂತೆ ಇತರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಬ್ಯಾರೇಜ್‌ನಲ್ಲಿ ಸಂಗ್ರಹವಾಗುವ ಹಿನ್ನೀರು ಅವಲಂಬಿಸಿವೆ. ಕಳೆದ ಬೇಸಿಗೆಯಲ್ಲಿ ಗದಗ ನಗರ ಸೇರಿದಂತೆ ಇತರೆ ಕಡೆ ನೀರಿನ ತೀವ್ರ ಸಮಸ್ಯೆ ಉಂಟಾಗಿತ್ತು. ಈಚೆಗೆ ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಬ್ಯಾರೇಜ್‌ನ ನೀರು ಸಂಗ್ರಹಣಾ ಮಟ್ಟ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸಿಂಗಟಾಲೂರು ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಮೂರ್ತಿ ತಿಳಿಸಿದ್ದಾರೆ.
ಬ್ಯಾರೇಜ್‌ನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡಬಾರದು. ಜಮೀನುಗಳಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು. ಮುಳುಗಡೆ ಪ್ರದೇಶದಿಂದ ಜನ, ಜಾನುವಾರು ಸಮೇತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ನೀರು ಸಂಗ್ರಹಣೆಯನ್ನು 2.26 ಟಿಎಂಸಿ ಅಡಿ ಹೆಚ್ಚಿಸಲು ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ 2012ರಲ್ಲಿ ಲೋಕಾರ್ಪಣೆಗೊಂಡಿದೆ. ಹಿನ್ನೀರು ಪ್ರದೇಶದಲ್ಲಿಯ ಕೆಲ ಗ್ರಾಮಗಳು ಸ್ಥಳಾಂತರಗೊಳ್ಳದೇ ಇದ್ದುದರಿಂದ ದಶಕ ಕಳೆದರೂ ಬ್ಯಾರೇಜ್‌ನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸುತ್ತಿರಲಿಲ್ಲ.
ಸಿಂಗಟಾಲೂರು ಬ್ಯಾರೇಜ್‌ನ ನೀರು ಸಂಗ್ರಹಣ ಮಟ್ಟ ಎಫ್ಆರ್‌ಎಲ್ 509 ಮೀಟರ್ ಇದ್ದು, ಈ ಎತ್ತರಕ್ಕೆ ನೀರು ನಿಲ್ಲಿಸಿದರೆ 3.12 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಎಡ ದಂಡೆಯಲ್ಲಿ ಗುಮ್ಮಗೋಳ, ಬಿದರಳ್ಳಿ ಗ್ರಾಮಗಳು ಸ್ಥಳಾಂತರಗೊಳ್ಳದೇ ಇರುವುದರಿಂದ 506.80 ಮೀಟರ್ ವರೆಗೆ ನೀರು ನಿಲ್ಲಿಸಿ 1.90 ಟಿಎಂಸಿ ಅಡಿ ಸಂಗ್ರಹಿಸಲಾಗುತಿತ್ತು. ಇದೀಗ 506.80 ಮೀಟರ್‌ನಿಂದ 507.50 ಮೀಟರ್ ವರೆಗೆ ನೀರಿನ ಮಟ್ಟ ಏರಿಸಿ 2.26 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ.
ಈ ಯೋಜನೆಯಿಂದ ತುಂಗಭದ್ರಾ ನದಿಯ ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ 35,791 ಎಕರೆ ಕಾಲುವೆ ನೀರಾವರಿಗೆ ಒಳಪಟ್ಟಿದ್ದರೆ, ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಪ್ರದೇಶ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ.
ತಾಲ್ಲೂಕಿನ ರಾಜವಾಳ ಶಾಖಾ ಕಾಲುವೆಯಿಂದ 3,000 ಎಕರೆ, ಕೆ.ಅಯ್ಯನಹಳ್ಳಿ ಶಾಖಾ ಕಾಲುವೆಯಿಂದ 5,000 ಎಕರೆ, ಮಾಗಳ ಶಾಖಾ ಕಾಲುವೆಯಿಂದ 4,000 ಎಕರೆ, ಹೂವಿನಹಡಗಲಿ ಶಾಖಾ ಕಾಲುವೆಯಿಂದ 23,791 ಎಕರೆ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.