ADVERTISEMENT

ಬಳ್ಳಾರಿ: ಎಸ್ಎಸ್‌ಎಲ್‌ಸಿ ಮರುದಾಖಲಾತಿಗೆ ನಿರಾಸಕ್ತಿ

ಸರ್ಕಾರ ಒದಗಿಸಿದ ಅವಕಾಶ ಸದ್ಬಳಕೆಗೆ ಮುಂದೆ ಬಾರದ ಎಸ್‌ಎಸ್‌ಎಲ್‌ಸಿ ಫೇಲ್‌ ವಿದ್ಯಾರ್ಥಿಗಳು

ಆರ್. ಹರಿಶಂಕರ್
Published 6 ಅಕ್ಟೋಬರ್ 2024, 4:44 IST
Last Updated 6 ಅಕ್ಟೋಬರ್ 2024, 4:44 IST
   

ಬಳ್ಳಾರಿ: ಎಸ್ಎಸ್‌ಎಲ್‌ಸಿ ವಾರ್ಷಿಕ ಮತ್ತು ಎರಡು ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 10ನೇ ತರಗತಿಗೆ ಮರು ದಾಖಲಾಗಲು ಅವಕಾಶ ನೀಡಿದರೂ ಜಿಲ್ಲೆಯ ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರವೇಶಾತಿ ಪಡೆಯುತ್ತಿಲ್ಲ.

ಎಸ್‌ಎಸ್‌ಎಲ್‌ಸಿಯ ಮೂರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲಾಗೆ ದಾಖಲಾಗಿ, ಪಾಠ ಕೇಳುವ ಅವಕಾಶವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿದ್ದರೂ ಮರು ದಾಖಲಾತಿಯ ಪ್ರಮಾಣ ಒಂದಂಕಿ ದಾಟದಿರುವುದು ಅಧಿಕಾರಿಗಳು, ಶಿಕ್ಷಕರರಲ್ಲಿ ಬೇಸರ ಮೂಡಿಸಿದೆ.  

2024ರ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ 19,946 ವಿದ್ಯಾರ್ಥಿಗಳು ಹಾಜರಾಗಿದ್ದರು. 13,951 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 5,995 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲೆಂದು ಎರಡು ಪೂರಕ ಪರೀಕ್ಷೆಗಳನ್ನು ಸಹ ನಡೆಸಲಾಗಿತ್ತು.

ADVERTISEMENT

ಎರಡನೇ ಪೂರಕ ಪರೀಕ್ಷೆಯಲ್ಲಿ 5,973 ವಿದ್ಯಾರ್ಥಿಗಳು ಕುಳಿತು 2,899 ವಿದ್ಯಾರ್ಥಿಗಳು ಪಾಸಾದರೆ, 3,074 ವಿದ್ಯಾರ್ಥಿಗಳು ಫೇಲಾದರು. ಈ ವೇಳೆ ಶೇ 48.54ರಷ್ಟು ಫಲಿತಾಂಶ ದಾಖಲಾಗಿತ್ತು. ಮೂರನೇ ಪೂರಕ ಪರೀಕ್ಷೆಗೆ 2,335 ವಿದ್ಯಾರ್ಥಿಗಳು ಕುಳಿತಿದ್ದು,  7,28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮುಂದಿನ ಶಿಕ್ಷಣಕ್ಕೆ ಅವಕಾಶ ಗಿಟ್ಟಿಸಿಕೊಂಡರು. ಆ ಪರೀಕ್ಷೆಯಲ್ಲಿ 1,607 ವಿದ್ಯಾರ್ಥಿಗಳು ಮತ್ತೆ ಅನುತ್ತೀರ್ಣರಾದರು.

ಮೂರು ಪರೀಕ್ಷೆಯಲ್ಲೂ ಫೇಲಾದ 1,607 ವಿದ್ಯಾರ್ಥಿಗಳ ಪೈಕಿ ಕೇವಲ ಐದು ಮಂದಿ ಮಾತ್ರ ಎಸ್‌ಎಸ್‌ಎಲ್‌ಸಿಗೆ ಮರು ದಾಖಲಾಗಿದ್ದಾರೆ. ಕುರುಗೋಡಿನಲ್ಲಿ ಮೂವರು, ಸಿರುಗುಪ್ಪ, ಸಂಡೂರಿನಲ್ಲಿ ತಲಾ ಒಬ್ಬೊಬ್ಬರು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನುಳಿದಂತೆ ಬಹುತೇಕರು ತರಗತಿಯಿಂದ ಹೊರಗೆ ಉಳಿದಿದ್ದಾರೆ. ಹಿಂದೆಲ್ಲ ಫೇಲಾದವರನ್ನು ಮರುದಾಖಲೀಕರಣ ಮಾಡಿಕೊಳ್ಳುತ್ತಿರಲಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಈ ವರ್ಷದಿಂದ ಮರುದಾಖಲೀಕರಣದಂಥ ವಿಶೇಷ ಅವಕಾಶವನ್ನು ಕಲ್ಪಿಸಿದೆ. ಆದರೆ, ಈ ಅವಕಾಶವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು.

ಪ್ರೌಢಶಾಲೆಯ 10ನೇ ತರಗತಿಗೆ ಮರು ದಾಖಲಾದ ವಿದ್ಯಾರ್ಥಿಗಳಿಗೆ ಶಾಲೆಯ ನೋಂದಣಿ ಕಾರ್ಡ್ ನೀಡಲಾಗುತ್ತದೆ. ಅಧ್ಯಯನ, ಎಲ್ಲ ವಿಷಯಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ಇಲ್ಲವೇ ಅವರು ಫೇಲಾದ ವಿಷಯಗಳಲ್ಲಿ ಮಾತ್ರ ಪರೀಕ್ಷೆ ಬರೆಯಲೂ ಅವಕಾಶವಿದೆ. ಶಿಕ್ಷಣ ಇಲಾಖೆಯ ನಿಯಮ ಅನುಸಾರ ನೀಡುವ ಸಮವಸ್ತ್ರ, ಪಠ್ಯಪುಸ್ತಕ, ಶೂ–ಸಾಕ್ಸ್, ಅಕ್ಷರ ದಾಸೋಹದ ಬಿಸಿಯೂಟದಂತಹ ಸೌಲಭ್ಯಗಳನ್ನು ಕೊಡಲಾಗುತ್ತದೆ. ಮರು ದಾಖಲಾದ ವಿದ್ಯಾರ್ಥಿಗಳನ್ನು ರೆಗ್ಯುಲರ್ ವಿದ್ಯಾರ್ಥಿಯಂತೆ ಪರಿಗಣಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಜುಗರ, ಸ್ವಾಭಿಮಾನ ಅಡ್ಡಿ!

ಈಗಾಗಲೇ ಮೂರು ಬಾರಿಯ ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಇನ್ನು ಶಾಲೆಗೆ ಹೋಗುವುದು ಹೇಗೆ ಎಂಬ ಮುಜುಗರ ಅನುಭವಿಸುತ್ತಿದ್ದಾರೆ. ಇನ್ನೂ ಕೆಲ ಮಕ್ಕಳಿಗೆ ‘ನಮ್ಮ ಕಿರಿಯರೊಂದಿಗೆ ಕುಳಿತು ಪಾಠ ಕೇಳುವುದು ಹೇಗೆ’ ಎಂಬ ಸ್ವಾಭಿಮಾನ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಪ್ರಚಾರ, ಮನವೊಲಿಕೆ

ಮಕ್ಕಳನ್ನು ಮರುದಾಖಲೀಕರಣ ಮಾಡಲು ಶಿಕ್ಷಣ ಇಲಾಖೆ ಆದೇಶ ನೀಡಿದ ಬಳಿಕ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಮನವೊಲಿಕೆ ಕಾರ್ಯ ಮಾಡಿದ್ದಾರೆ. ಪ್ರಚಾರ ನಡೆಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಎಸ್‌ಡಿಎಂಸಿ ಸಭೆಗಳಲ್ಲೂ ತಿಳಿಸಲಾಗಿದೆ. ಆದರೂ ವಿದ್ಯಾರ್ಥಿಗಳು, ಪೋಷಕರು ಮರುಪ್ರವೇಶಕ್ಕೆ ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.  ಮಕ್ಕಳು, ಪೋಷಕರನ್ನು ಮನವೊಲಿಸುವ ಕೆಲಸ ಜೂನ್‌ನಿಂದಲೇ ಆರಂಭವಾಗಿದೆ. ಈ ವರೆಗೆ ಕೆಲವರಷ್ಟೇ ಶಾಲೆಗೆ ಬಂದಿದ್ದಾರೆ. ಈಗ ಬಂದರೂ ಅವರನ್ನು ಶಾಲೆಗೆ ಸೇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.