ಹೊಸಪೇಟೆ: ‘ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ರಾಜೀನಾಮೆ ಕೊಡಲು ಬಿಡೊಲ್ಲ’ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದ್ದಾರೆ.
ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಗಣೇಶ್‌ಗೆ ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಶುಕ್ರವಾರ ನಗರದಲ್ಲಿನ ಅವರ ಮನೆಗೆ ಬಂದಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
‘ನಾನು ಜಾರಕಿಹೊಳಿ ಅವರ ಮನವೊಲಿಸಿ, ರಾಜೀನಾಮೆ ನೀಡದಂತೆ ಕೋರುತ್ತೇನೆ. ನನ್ನ ಮೇಲಿನ ಅಭಿಮಾನದಿಂದ ಗಣೇಶ್ ಸಚಿವರಾಗುತ್ತಾರೆ ಎಂದು ಜಾರಕಿಹೊಳಿ ಹೇಳಿದ್ದರು. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದಿದ್ದಾರೆ.
‘ಆನಂದ್ ಸಿಂಗ್ ನನಗೆ ಅಣ್ಣನ ಸಮಾನ. ಅವರಿಗಾಗಿ ನಾನು, ನನ್ನ ತಂದೆ ಬಹಳ ಕೆಲಸ ಮಾಡಿದ್ದೇವೆ. ಸಿಂಗ್ ಮತ್ತು ನನ್ನ ಮಧ್ಯೆ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನೇನೂ ಮಾತನಾಡಲಾರೆ. ಕಾಂಗ್ರೆಸ್ ಪಕ್ಷ ನನ್ನ ಅಮಾನತು ಆದೇಶ ಹಿಂಪಡೆಯುವ ವಿಶ್ವಾಸ ಇದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.