ADVERTISEMENT

ಹರಪನಹಳ್ಳಿ: ಜನರ ನಿದ್ದೆಗಡಿಸಿದ ಬೀದಿ ನಾಯಿಗಳು, ದಾಳಿಗೆ ಒಳಗಾದವರಲ್ಲಿ ಪುರುಷರೇ ಹೆಚ್ಚು

ವಿಶ್ವನಾಥ ಡಿ.
Published 16 ಜುಲೈ 2023, 5:39 IST
Last Updated 16 ಜುಲೈ 2023, 5:39 IST
ಹರಪನಹಳ್ಳಿ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಸಿ ಮಾಂಸಕ್ಕಾಗಿ ಕಾಯುತ್ತಿರುವ ಬೀದಿನಾಯಿಗಳು
ಹರಪನಹಳ್ಳಿ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಸಿ ಮಾಂಸಕ್ಕಾಗಿ ಕಾಯುತ್ತಿರುವ ಬೀದಿನಾಯಿಗಳು   

ಹರಪನಹಳ್ಳಿ: ಹಸಿ ಮಾಂಸದ ರುಚಿ ಕಂಡಿರುವ ಬೀದಿ ನಾಯಿಗಳು ಮಹಿಳೆಯರು, ಪುರುಷರ ಮೇಲೆ ಎರಗಿ ಗಾಯಗೊಳಿಸುತ್ತಿರುವ ಪ್ರಕರಣಗಳು ತಾಲ್ಲೂಕಿನ ಒಂದಲ್ಲ ಒಂದು ಕಡೆ ನಿತ್ಯವೂ ಕಂಡುಬರುತ್ತಿದೆ.

2023, ಜನವರಿಯಿಂದ ಜುಲೈ ತಿಂಗಳ 15ರವರೆಗೆ 294 ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 224 ಪುರುಷರು, 70 ಮಹಿಳೆಯರು ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 15 ದಿನಗಳಲ್ಲಿ 21 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅರಸೀಕೆರೆ, ತೆಲಿಗಿ, ಹಲವಾಗಲು, ಚಿಗಟೇರಿ ಸರ್ಕಾರಿ ಮತ್ತು ಹರಪನಹಳ್ಳಿ ಖಾಸಗಿ ಆಸ್ಪತ್ರೆಯಲ್ಲೂ ನಾಯಿ ಕಡಿತದ ಬೆರಳೆಣಿಕೆಯ ಪ್ರಕರಣಗಳು ಕಂಡುಬಂದಿವೆ.

ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಕೋಳಿ ಮತ್ತು ಇತರ ಮಾಂಸ ಮಾರಾಟದ ನಂತರ ಉಳಿಯುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬೀಸಾಕುವುದರಿಂದ ಬೀದಿ ನಾಯಿಗಳಿಗೆ ಹಸಿ ಮಾಂಸದ ರುಚಿ ಹತ್ತಿದೆ. ಜೊತೆಗೆ ಮರಿ ಹಂದಿಗಳನ್ನು ಬೆನ್ನತ್ತಿ ಕಿತ್ತು ತಿನ್ನುವ ನಾಯಿಗಳು ಜನರ ಮೇಲೆ ಎರಗಲೂ ಹೆದರುತ್ತಿಲ್ಲ ಎಂದು ಗಾಯಾಳು ಯಲ್ಲಪ್ಪ ತಿಳಿಸಿದರು.

ADVERTISEMENT

ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ಮಕ್ಕಳು, ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುವ ದಾರಿ ಹೋಕರ ಮೇಲೆಯೂ ದಾಳಿ ನಡೆಸುತ್ತಿವೆ. ಹೆಣ್ಣು- ಗಂಡು ನಾಯಿಗಳ ಹಿಂಡು ಪಟ್ಟಣದ ಬಾಪೂಜಿನಗರ, ಅಂಬೇಡ್ಕರ ನಗರ, ವಾಲ್ಮೀಕಿ ನಗರ, ಗಾಜಿಕೇರಿ, ತೆಕ್ಕದಗರಡಿಕೇರಿ, ಅರಸೀಕೆರೆ ರಸ್ತೆ, ಬಾಣಗೇರೆ, ಶಿರಸಪ್ಪ ಬಡಾವಣೆ, ಅಮೃತ ನಗರ ಸೇರಿದಂತೆ ಹಲವೆಡೆ ಓಡಾಡುತ್ತಿವೆ.

‘ಪ್ರತಿ ತಿಂಗಳು ಸರಾಸರಿ 40 ಜನ ನಾಯಿ ಕಡಿತದ ಚಿಕಿತ್ಸೆಗಾಗಿ ಬರುತ್ತಾರೆ. 24 ಗಂಟೆ ಚಿಕಿತ್ಸೆ ಲಭ್ಯ ಇರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧದ ಕೊರತೆ ಇಲ್ಲ. ನಾಯಿಯಿಂದ ಕಡಿಸಿಕೊಂಡ ರೋಗಿಗಳು ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯ ಮಾಡಬಾರದು’ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಂಕರನಾಯ್ಕ ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಸಿ ಮಾಂಸಕ್ಕಾಗಿ ಕಾಯುತ್ತಿರುವ ಬೀದಿನಾಯಿಗಳು.
ಬೀದಿ ನಾಯಿಗಳನ್ನು ನಿಯಂತ್ರಿಸಲು 2023ರ ಬಜೆಟ್‌ನಲ್ಲಿ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಗಿದೆ
-ಶಿವಕುಮಾರ ಎರಗುಡಿ ಮುಖ್ಯಾಧಿಕಾರಿ ಪುರಸಭೆ ಹರಪನಹಳ್ಳಿ
ಬೀದಿ ನಾಯಿ ಕರೆತಂದರೂ ಲಸಿಕೆ 2020ರ ಗಣತಿ ಪ್ರಕಾರ ಪಟ್ಟಣದಲ್ಲಿ 1850 ಗ್ರಾಮಾಂತರ ಪ್ರದೇಶದಲ್ಲಿ 4540 ನಾಯಿಗಳಿವೆ. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ಇದುವರೆಗೆ 657 ಸಾಕು ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕಲಾಗಿದೆ. ಯಾರಾದರೂ ಬೀದಿ ನಾಯಿ ಕರೆತಂದರೂ ಲಸಿಕೆ ಹಾಕುತ್ತೇವೆ
-ಡಾ.ಶಿವಕುಮಾರ ಜ್ಯೋತಿ ಸಹಾಯಕ ನಿರ್ದೇಶಕ ಪಶುಸಂಗೋಪನೆ ಇಲಾಖೆ ಹರಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.