ADVERTISEMENT

ಬಳ್ಳಾರಿ ಪ್ರವೇಶ ಮುಕ್ತ: ರೆಡ್ಡಿ ಬೆಂಬಲಿಗರ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 16:03 IST
Last Updated 30 ಸೆಪ್ಟೆಂಬರ್ 2024, 16:03 IST
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ಮಂಜೂರು ಮಾಡಿದ್ದರಿಂದ ಅವರ ಬೆಂಬಲಿಗರು ಬಳ್ಳಾರಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು. 
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ಮಂಜೂರು ಮಾಡಿದ್ದರಿಂದ ಅವರ ಬೆಂಬಲಿಗರು ಬಳ್ಳಾರಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.    

ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಅನುಮತಿ ಮಂಜೂರು ಮಾಡಿದ್ದರಿಂದ ಅವರ ಬೆಂಬಲಿಗರು ಬಳ್ಳಾರಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು. 

ನಗರದ ಕನಕದುರ್ಗೆ ದೇಗುಲ, ಎಸ್‌ಪಿ ವೃತ್ತದ ಬಳಿ ಜಮಾಯಿಸಿದ ಅಭಿಮಾನಿಗಳು ಪಟಾಕಿ ಸಿಡಿಸಿದರು. ಕೇಕ್‌ ಕತ್ತರಿಸಿದರು. ಸಿಹಿ ಹಂಚಿ ಖುಷಿಪಟ್ಟರು. 

ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011ರ ಸೆ. 5 ರಂದು ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಜನಾರ್ದನ ರೆಡ್ಡಿ, 2015ರಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದರು. ಆದರೆ, ಅವರು ಬಳ್ಳಾರಿ ಪ್ರವೇಶಿಸಲು ನಿರ್ಬಂಧಿಸಲಾಗಿತ್ತು. ಈ ಮಧ್ಯೆ ಮಗಳ ಮದುವೆ, ಹೆರಿಗೆ,  ಮೊಮ್ಮಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಕೋರ್ಟ್ ಅನುಮತಿಯೊಂದಿಗೆ ಅವರು ಬಳ್ಳಾರಿಗೆ ಬಂದಿದ್ದರು.

ADVERTISEMENT

ಸದ್ಯ ಅವರು ಬಳ್ಳಾರಿ ಪ್ರವೇಶಿಲು ಇದ್ದ ಎಲ್ಲ ಷರತ್ತುಗಳನ್ನೂ ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದು, ಕಾಯಂ ಉಳಿಯಲು ಅವಕಾಶ ನೀಡಿರುವುದು ಅವರ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ. 

ಸ್ವಾಗತಕ್ಕೆ ಪೂರ್ವಭಾವಿ ಸಭೆ

ಜನಾರ್ದನ ರೆಡ್ಡಿಯವನರನ್ನು ಬಳ್ಳಾರಿಗೆ ಹೇಗೆ ಕರೆತರಬೇಕು, ಮಾರ್ಗ ಯಾವುದು,  ಕಾರ್ಯಕ್ರಮವನ್ನೇನಾದರೂ ಆಯೋಜಿಸಬೇಕೆ, ಆಗಮನದ ದಿನ ಯಾವೆಲ್ಲ ದೇವಾಲಯಗಳಿಗೆ ಭೇಟಿ ನೀಡಬೇಕು, ಎಷ್ಟು ಜನರನ್ನು ಸೇರಿಸಬೇಕು ಎಂಬುದನ್ನು ಚರ್ಚಿಸಲು ಇಂದು ಬಳ್ಳಾರಿಯ ಅವರ ನಿವಾಸದಲ್ಲಿ ಸಭೆ ನಡೆಯಲಿದೆ. ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಅವರ ಸಮ್ಮುಖದಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರ ಸಭೆ ನಡೆಯಲಿದೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. 

ಮಂಗಳವಾರ ಗಂಗಾವತಿಗೆ ತೆರಳಲಿರುವ ಜನಾರ್ದನ ರೆಡ್ಡಿ, ಅಂಜನಾದ್ರಿಗೆ ಭೇಟಿ ನೀಡಲಿದ್ದಾರೆ. ಬಳಿಕ ಬಳ್ಳಾರಿ ಭೇಟಿಯ ಬಗ್ಗೆ ಅಲ್ಲಿಯೂ ಪ್ರತ್ಯೇಕವಾಗಿ ಬೆಂಬಲಿಗರ ಸಭೆ ನಡೆಸಲಿದ್ದಾರೆ ಎಂದೂ ಗೊತ್ತಾಗಿದೆ. 

ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಸಿರುಗುಪ್ಪ:
ಬಳ್ಳಾರಿ ಪ್ರವೇಶಿಸಲು ಜನಾರ್ದನ ರೆಡ್ಡಿಗೆ ಅವಕಾಶ ಸಿಕ್ಕಿರುವುದಕ್ಕೆ ಸಿರುಗುಪ್ಪ ತಾಲೂಕಿನಲ್ಲೂ ಸಂಭ್ರಮಾಚರಣೆ ನಡೆಯಿತು. ಬಿಜೆಪಿ ಮುಖಂಡ ಟಿ.ದರಪ್ಪ ನಾಯಕ ಅವರ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. 

ಮುಖಂಡರಾದ ಮಾರೆಪ್ಪ, ಅಜೀಮ್ ಅವರು, ವಿನೋದ್ ಗೌಡ, ಬಲಕುಂದಿ ಎಸ್.ಗಾದಿಲಿಂಗಪ್ಪ, ಬುಳ್ಳಪ್ಪ, ದರೂರ್ ವೀರಭದ್ರ, ಶಾನವಾಸಪುರ ನಾರಾಯಣ, ರೆಹಮಾನ್, ಗೆಣಿಕಿಹಾಳ್ ಗಾದಿಲಿಂಗಪ್ಪ, ಮನೋಜ್ ಕುಮಾರ್, ಚೌದ್ರಿ, ಉಡೆಗೋಳ ಸತ್ಯನಾರಾಯಣ, ಚನ್ನಬಸವ, ಧನಸಿಂಗ್ ನಾಯ್ಕ್ ಮತ್ತಿತರರು ಇದ್ದರು. 

ರಂಗೇರಲಿದೆ ಉಪ ಚುನಾವಣೆ 

ಬಳ್ಳಾರಿ ಜಿಲ್ಲೆ ಜನಾರ್ದನ ರೆಡ್ಡಿಗೆ ಮುಕ್ತವಾಗಿರುವುದರಿಂದ ಅವರು ಸಂಡೂರು ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಅನುಕೂಲವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಸೇರಿದ್ದರಾದರೂ ಪ್ರಚಾರ, ತಂತ್ರಗಾರಿಕೆ ವಿಷಯದಲ್ಲಿ ಬಳ್ಳಾರಿಯಿಂದ ದೂರವೇ ಉಳಿದಿದ್ದರು. ಆದರೆ, ಈಗ ಚುನಾವಣಾ ಕಾರ್ಯದಲ್ಲಿ ಅವರು ಖುದ್ದು ಭಾಗಿಯಾಗುವುದರಿಂದ ಸಹಜವಾಗಿಯೇ ಸಂಡೂರು ಉಪ ಚುನಾವಣೆ ರಂಗೇರಲಿದೆ. ಟಿಕೆಟ್‌ ಬೇಕು ಎಂಬ ಅವರ ಬೆಂಬಲಿಗರೊಬ್ಬರ ಬಯಕೆಗೆ ಬಲ ಬಂದಂತೆ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.