ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಅಂಗನವಾಡಿ, ಸರ್ಕಾರಿ ಶಾಲೆಗಳ ದುಸ್ಥಿತಿ ಸದ್ಯ ಈ ಉಪ ಚುನಾವಣೆಯ ಮತದಾನದ ಪ್ರಕ್ರಿಯೆ ಮೂಲಕ ಬಹಿರಂಗವಾಗಿದೆ.
ಹಲವು ಶಾಲೆಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿರುವುದು, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು, ಕಲಿಕಾ ಕೇಂದ್ರಗಳ ಕಟ್ಟಡಗಳ ಸುತ್ತ ಕೊಳಕು ಆವರಿಸಿರುವುದು ಕಂಡು ಬಂತು.
ಕ್ಷೇತ್ರ ವ್ಯಾಪ್ತಿಯ ವೇಣಿವೀರಾಪುರದ ಶಂಕರಮಠದ ಹಿಂದಿನ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಜತೆಗೆ, ಶಾಲೆಯ ಶೌಚಾಲಯ ಕೊಳಕಿನ ಗುಂಡಿಯಂತಿರುವುದು ಗೋಚರವಾಯಿತು. ಫ್ಯಾನ್‌ಗೆ ಟ್ಯೂಬ್ ಲೈಟ್ ನೇತು ಹಾಕಲಾಗಿತ್ತು.
ಇನ್ನು ವಡ್ಡುವಿನ ಅಂಗನವಾಡಿ ಸುತ್ತಲೂ ಕೊಳಕು ಆವರಿಸಿತ್ತು. ಮತದಾನ ಪ್ರಕ್ರಿಯೆ ಉದ್ದೇಶಕ್ಕೆ ಅವಸರವಾಗಿ ಸುತ್ತಲ ಪರಿಸರ ಸ್ವಚ್ಛ ಮಾಡಿದಂತೆ ಕಂಡು ಬಂತಾದರೂ, ಸ್ವಚ್ಛತೆ ಸಮಸ್ಯೆ ಎದ್ದು ಕಾಣುತ್ತಿತ್ತು.
ಹಲವು ಶಾಲೆಗಳು ಕುಸಿದು ಬೀಳುವ ಹಂತದಲ್ಲಿರುವುದು, ಹಲವು ಶಾಲೆಗಳ ಆವರಣದಲ್ಲಿ ಗಿಡಗಳು ಬೆಳೆದು ನಿಂತಿರುವುದ ಕಾಣಿಸಿತು. ಮುಖ್ಯವಾಗಿ ಎಲ್ಲ ಕಡೆಗಳಲ್ಲೂ ಶೌಚಾಲಯದ ಸಮಸ್ಯೆ ಕಾಡುತ್ತಿರುವುದು ಬಹಿರಂಗವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.