ಕೊಟ್ಟೂರು: ಜನತೆಗೆ ಎಲ್ಲಾ ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ ತಾಲ್ಲೂಕಿನಾದ್ಯಂತ ರಸ್ತೆಗಳಿಗೆ ದುರಸ್ತಿ ಭಾಗ್ಯ ಮಾತ್ರ ಕರುಣಿಸಿಲ್ಲ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳ ಮಧ್ಯೆ ರಸ್ತೆಯ ಜಾಡನ್ನು ಹುಡುಕುತ್ತಾ ವಾಹನ ಚಲಾಯಿಸುವಂತಹ ಪರಿಸ್ಥಿತಿ ಇದೆ.
ಇತ್ತೀಚಿಗೆ ಕೆಲವು ರಸ್ತೆಗಳು ದುರಸ್ತಿ ಆಗಿದ್ದರೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಸುವ ಮೊದಲೇ ತಗ್ಗು ಗುಂಡಿಗಳು ಪ್ರತ್ಯಕ್ಷವಾಗಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ಪಟ್ಟಣದಲ್ಲಿರುವ ರಸ್ತೆಗಳನ್ನು 24X7 ನೀರಿನ ಯೋಜನೆ ಗುತ್ತಿಗೆ ಪಡೆದ ಗುತ್ತಿಗೆದಾರರು ಪಟ್ಟಣದಾದ್ಯಂತ ತಕ್ಕಮಟ್ಟಿಗೆ ಉತ್ತಮವಾಗಿದ್ದ ರಸ್ತೆಗಳನ್ನು ಅಗೆದು ಪೈಪ್ ಹಾಕಿದ್ದು, ಇಂದಿಗೂ ಜನತೆಗೆ ನೀರೂ ಸಿಕ್ಕಿಲ್ಲ, ಅಗೆದ ರಸ್ತೆಗೆ ದುರಸ್ತಿಯೂ ಆಗಿಲ್ಲ. ಜನತೆ ವಾಹನ ಚಲಾಯಿಸುವಾಗ ತಗ್ಗು ಗುಂಡಿಗಳಲ್ಲಿ ಬಿದ್ದು ಉರುಳಿದ ವಾಹನವನ್ನು ಎತ್ತುತ್ತಾ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುವುದನ್ನು ನಿತ್ಯವೂ ಕಾಣಬಹುದಾಗಿದೆ.
ತಾಲ್ಲೂಕಿನ ಧಾರ್ಮಿಕ ಕ್ಷೇತ್ರಗಳಾದ ಉಜ್ಜಯಿನಿ ಹಾಗೂ ಗಾಣಗಟ್ಟೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಸುಮಾರು ಹತ್ತು ವರ್ಷಗಳಿಂದ ಈ ರಸ್ತೆ ದುರಸ್ತಿ ಕಾಣದಿರುವುದರಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ನಿಂಬಳಗೆರೆ ಗ್ರಾಮದ ನಟರಾಜ್ ಹೇಳುತ್ತಾರೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಾದ ಇಟಗಿ ರಸ್ತೆ, ಕೂಡ್ಲಿಗಿ ರಸ್ತೆ ಹಾಗೂ ಜೋಳದಕೂಡ್ಲಿಗಿ ರಸ್ತೆಗಳ ಅವ್ಯವಸ್ಥೆ, ಬೇವೂರು, ಅಂಬಳಿ ಗ್ರಾಮಗಳ ರಸ್ತೆಯಲ್ಲಿ ಸಂಚರಿಸುವವರ ಗೋಳು ಹೇಳತೀರದು. ಕಳೆದ 20 ವರ್ಷಗಳಿಂದ ದುರಸ್ತಿ ಕಾಣದ ಚಿರಿಬಿ ಗ್ರಾಮದ ರಸ್ತೆಯ ಕಾಮಗಾರಿ ಕಳೆದೆರಡು ವರ್ಷಗಳಿಂದ ಅಮೆಗತಿಯಲ್ಲಿ ಸಾಗುತ್ತಿದೆ.
ರಸ್ತೆಗಳ ದುಸ್ಥಿತಿಯಿಂದ ಸಕಾಲಕ್ಕೆ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ತಲುಪಲು ಸಾದ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಉಜ್ಜಯಿನಿ ಗ್ರಾಮದ ಉಪನ್ಯಾಸಕ ಸಿದ್ಧೇಶ ಬೇಸರ ವ್ಯಕ್ತಪಡಿಸುತ್ತಾರೆ.
ತಾಲ್ಲೂಕಿನ ರಸ್ತೆಗಳ ಸ್ಥಿತಿಗತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನಾದರೂ ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.
ನಮ್ಮ ಕ್ಷೇತ್ರಕ್ಕೆ ಒಳಪಡುವ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಗಮನವಿದ್ದು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು–ಕೆ.ನೇಮರಾಜನಾಯ್ಕ ಶಾಸಕ ಹಗರಿಬೊಮ್ಮನಹಳ್ಳಿ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.