ADVERTISEMENT

ತೋರಣಗಲ್ಲು | ಲಾರಿಗಳ ಆಟಾಟೋಪ: ಪಾದಚಾರಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:59 IST
Last Updated 28 ಅಕ್ಟೋಬರ್ 2024, 4:59 IST
ತೋರಣಗಲ್ಲು ಹೋಬಳಿಯ ಕುರೆಕುಪ್ಪ ಕ್ರಾಸ್‍ನಲ್ಲಿ ರಸ್ತೆಯ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿರುವುದು
ತೋರಣಗಲ್ಲು ಹೋಬಳಿಯ ಕುರೆಕುಪ್ಪ ಕ್ರಾಸ್‍ನಲ್ಲಿ ರಸ್ತೆಯ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿರುವುದು    

ತೋರಣಗಲ್ಲು: ಕೈಗಾರಿಕಾ ಹಬ್‌ ತೋರಣಗಲ್ಲು ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಅದಿರು, ಸರಕು ಸಾಗಣೆಗೆ ನಿತ್ಯ ಸಂಚರಿಸುವ ಸಾವಿರಾರು ಲಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಹಾಗೂ  ಸಾರ್ವಜನಿಕರಿಗೆ ಸಂಚಕಾರವಾಗಿ ಪರಿಣಮಿಸಿವೆ.

ವೇಗದಲ್ಲಿ ರಸ್ತೆಯಲ್ಲಿ ಓಡಾಡುವ ಲಾರಿಗಳು, ಪಾದಚಾರಿಗಳ ಮಾರ್ಗವನ್ನೂ ಆಕ್ರಮಿಸುತ್ತಿರುವುದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುರೆಕುಪ್ಪ ಪಟ್ಟಣದ ಕ್ರಾಸ್‍, ಜಿಂದಾಲ್ ಕಾರ್ಖಾನೆಯ ಹಳೇ ಗೇಟ್, 10 ಎಂಟಿ ಗೇಟ್‍ನ ಬಳಿಯ ಲಾರಿ ಟರ್ಮಿನಲ್‍ಗಳ ಹೊರ ಆವರಣದ ಪಾದಚಾರಿ ಮಾರ್ಗದಲ್ಲಿ ದೊಡ್ಡ ಟ್ರಕ್‌ಗಳು ನಿಲ್ಲಿಸುತ್ತಿರುವುದರಿಂದ ಜನರು ಮುಖ್ಯರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

ADVERTISEMENT

ಇಲ್ಲಿನ ರೈಲ್ವೆ ನಿಲ್ದಾಣದ ಪ್ರದೇಶದಲ್ಲೂ ರಸ್ತೆ ಪಕ್ಕದಲ್ಲೇ ಲಾರಿಗಳು ದಿನದ 24 ಗಂಟೆಯೂ ನಿಲ್ಲುತ್ತಿವೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಲಾರಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. 

ಲಾರಿಗಳು ಸದಾಕಾಲವೂ ರಸ್ತೆಯ ಬದಿಯಲ್ಲೇ ನಿಲ್ಲುವುದರಿಂದ ಬೈಕ್, ಲಾರಿಗಳ ನಡುವೆ ನಿರಂತರ ಅಪಘಾತ ಸಂಭವಿಸಿ ಅಪಾರ ಸಾವು– ನೋವು ನಡೆದಿವೆ.

ಜಿಂದಾಲ್ ಕಾರ್ಖಾನೆ, ಇತರೆ ಕಂಪನಿಗಳ ವಾಹನಗಳು ಬೈಪಾಸ್ ರಸ್ತೆಯಲ್ಲಿ ಸಂಚರಿಸದೇ ತೋರಣಗಲ್ಲು ಗ್ರಾಮದ ಕಿರಿದಾದ ರಸ್ತೆಯಲ್ಲಿ ಸಂಚಾರಿಸುವುದು ಇಲ್ಲಿ ಸಾಮಾನ್ಯವಾಗಿದೆ. ಬೆಳಿಗ್ಗೆ, ಸಂಜೆಯ ಸಮಯದಲ್ಲಿ ಅತಿಯಾದ ವಾಹನಗಳ ದಟ್ಟಣೆ ಉಂಟಾಗಿ, ಶಾಲಾ– ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹರಸಾಹಸ ಪಟ್ಟು ರಸ್ತೆ ದಾಟುತ್ತಿದ್ದಾರೆ. ಅನಿಯಂತ್ರಿತ ಸಂಚಾರ ನಿಯಂತ್ರಿಸದ ಸಾರಿಗೆ, ಪೊಲೀಸ್ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಗ್ರಾಮದ ರೈಲ್ವೆ ನಿಲ್ದಾಣ ಪ್ರದೇಶದ ಸಾರ್ವಜನಿಕ ರಸ್ತೆಯ ಎರಡು ಬದಿಯಲ್ಲಿ ಕಿರಾಣಿ ಅಂಗಡಿಗಳ ಸರಕು ತುಂಬಿದ ವಾಹನಗಳು ನಿಲ್ಲುತ್ತಿವೆ. ಬೀದಿಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಆಕ್ರಮಿಸಿ ರಸ್ತೆಯಲ್ಲೇ ವ್ಯಾಪಾರ ನಡೆಸುವುದರಿಂದ ದಿನ ಪೂರ್ತಿ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಕಂಡು ಕಾಣದಂತೆ ಮೌನವಹಿಸಿದ್ದಾರೆ’ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ.

ಕೊಡಾಲು ಗ್ರಾಮದಲ್ಲಿ ಜಿಂದಾಲ್, ಪದ್ಮಾವತಿ, ಮಿನೇರಾ ಸ್ಟೀಲ್ ಕೈಗಾರಿಕೆ ಸೇರಿದಂತೆ ಇತರೆ ಕೈಗಾರಿಕೆಗಳ ಅದಿರು ಲಾರಿ, ಭಾರಿ ಗಾತ್ರದ ವಾಹನಗಳ ಸಂಚಾರದಿಂದ ಗ್ರಾಮದಲ್ಲಿ ಸಂಚಾರ ದಟ್ಟಣೆ ಉಂಟಾಗಿ ತೊಂದರೆ ಎದುರಾಗಿದೆ. 

ಲಾರಿಗಳ ಅತಿಯಾದ ಸಂಚಾರದಿಂದ ಧೂಳು ಉಂಟಾಗಿ ರಸ್ತೆಯ ಪಕ್ಕದಲ್ಲಿನ ಮನೆ, ಅಂಗಡಿಗಳನ್ನು ಆವರಿಸುತ್ತಿದೆ. ಜನರು ಲಾರಿಗಳಿಂದ ರೋಸಿಹೋಗಿದ್ದಾರೆ. ಹಲವಾರು ವರ್ಷಗಳಿಂದ ಸಮಸ್ಯೆ ಇದ್ದರೂ, ಗ್ರಾಮ ಪಂಚಾಯಿತಿಯಾಗಲಿ, ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 

ತೋರಣಗಲ್ಲು ಹೋಬಳಿಯ ಕೊಡಾಲು ಗ್ರಾಮದಲ್ಲಿ ಅದಿರು ಸಾಗಣೆ ಲಾರಿಗಳ ಸಂಚಾರ 
ರವಿ
ಸ್ವಾಮಿ
ಕಾಲೂಬ
ಯು. ಡಾಕೇಶ್

Cut-off box - ಕೋಟ್‌ಗಳು  ಸಂಚಾರ ದಟ್ಟಣೆ ನಿಯಂತ್ರಿಸಲು ವಿಫಲ! ತೋರಣಗಲ್ಲು ಗ್ರಾಮದ ವ್ಯಾಪ್ತಿಯಲ್ಲಿ ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕೆಗಳಿಂದ ಗ್ರಾಮವು ಹೆಚ್ಚು ಜನಸಾಂದ್ರತೆ ಹೊಂದಿದೆ. ನಿತ್ಯ ಸಾವಿರಾರು ವಾಹನಗಳ ಸಂಚಾರ ದಿಂದ ದಟ್ಟಣೆ ಉಂಟಾಗುತ್ತಿದೆ. ಸಂಚಾರ ದಟ್ಟಣೆ ನಿವಾರಿಸುವಲ್ಲಿ ಸ್ಥಳೀಯ ಸಾರಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆಎ.ಸ್ವಾಮಿ ಸಿಪಿಎಂ ಮುಖಂಡ ‘ಕಾನೂನು ಕ್ರಮವಾಗಲಿ’ ಕುರೆಕುಪ್ಪ ಕ್ರಾಸ್ ಜಿಂದಾಲ್ ಕಾರ್ಖಾನೆಯ ಲಾರಿ ಟರ್ಮಿನಲ್‍ಗಳ ಬಳಿಯ ರಸ್ತೆಯ ಬದಿಯಲ್ಲಿ ಕಾನೂನು ಬಾಹಿರವಾಗಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಲಾರಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುಎಸ್.ಕಾಲುಬಾ ಡಿವೈಎಫ್‍ಐ ಜಿಲ್ಲಾ ಸಮಿತಿ ಸದಸ್ಯ ‘ಆರೋಗ್ಯದ ಮೇಲೆ ದುಷ್ಪರಿಣಾಮ’ ಗ್ರಾಮದ ಚಿಕ್ಕ ರಸ್ತೆಯಲ್ಲಿ ಲಾರಿಗಳ ಅನಿಯಂತ್ರಿತ ಸಂಚಾರ ದಟ್ಟಣೆಯಿಂದ ಗ್ರಾಮದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಧೂಳು ಆವರಿಸಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಲಾರಿಗಳ ಸಂಚಾರವನ್ನು ನಿಯಂತ್ರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸಾರಿಗೆ ಪೊಲೀಸ್ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲರವಿ ಕೊಡಾಲು ಗ್ರಾಮದ ನಿವಾಸಿ ನಿಯಮ ಉಲ್ಲಂಘಿಸಿದವರಿಗೆ ದಂಡ ತೋರಣಗಲ್ಲು ಗ್ರಾಮ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಸಂಚಾರದ ದಟ್ಟಣೆ ನಿವಾರಿಸಲು ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಲಾರಿಗಳಿಗೆ ದಂಡ ಹಾಕಲಾಗುತ್ತಿದೆ ಯು.ಡಾಕೇಶ್ ಪಿಎಸ್‍ಐ ತೋರಣಗಲ್ಲು ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.