ತೆಕ್ಕಲಕೋಟೆ: ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬೇಕಾದ ಅಂಗನವಾಡಿ ಕೇಂದ್ರಗಳು ಕೊಟ್ಟಿಗೆಯಂತಿರುವ ಶೆಡ್‌ನಲ್ಲಿ ನಡೆಯುತ್ತಿದ್ದು, ಜೊತೆಗೆ ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನೂ ಎದುರಿಸುತ್ತಿವೆ.
ಸಮೀಪದ ಸಿರಿಗೇರಿ ಕ್ರಾಸ್‌ನ ಶ್ರೀಬನ್ನಿ ಮಹಾಕಾಳಿ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರದಲ್ಲಿ 22 ಮಕ್ಕಳು ದಾಖಲಾಗಿದ್ದು, ನಿತ್ಯವೂ ಗಬ್ಬುನಾರುತ್ತಿರುವ ಚರಂಡಿ ನೀರು ದಾಟಿ ಶೆಡ್‌ನಲ್ಲಿನ ಅಂಗನವಾಡಿಗೆ ಬರಲು ಹರಸಾಹಸ ಪಡುವಂತಾಗಿದೆ.
ದೇವಸ್ಥಾನ ಸಮಿತಿಯವರು 48X36 ಅಳತೆಯ ನಿವೇಶನ ದಾನ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಇಲಾಖೆಯ ಅಧಿಕಾರಿಗಳು ಕಳೆದ 10 ವರ್ಷಗಳಿಂದ ಇದೇ ಶೆಡ್‌ನಲ್ಲಿ ಅಂಗನವಾಡಿ ನಡೆಸುತ್ತಿರುವುದು ವಿಪರ್ಯಾಸವೇ ಸರಿ.
ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳ ಸಮಸ್ಯೆ ಒಂದೆಡೆಯಾದರೆ ತೆಕ್ಕಲಕೋಟೆ ಕೇಂದ್ರದಲ್ಲಿ 42 ಅಂಗನವಾಡಿಗಳಿದ್ದು, ಇವುಗಳಲ್ಲಿ 12 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಬಹುತೇಕ ನಿವೇಶನ ರಹಿತ ಕೇಂದ್ರಗಳಾಗಿವೆ.
ಸಿರುಗುಪ್ಪ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳಾದ ಕಟ್ಟಡ ನಿರ್ಮಾಣಕ್ಕೆ ಜಾಗ, ಶೌಚಾಲಯ ನಿರ್ಮಾಣ, ಆಟಿಕೆ ಸಾಮಾನು ಇತ್ಯಾದಿಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಗ್ರಾಮೀಣ ಪ್ರದೇಶದ ಅಂಗನವಾಡಿಗಳು ಸ್ಥಳೀಯ ಗ್ರಾಮ ಪಂಚಾಯಿತಿಯೊ೦ದಿಗೆ ಸಮನ್ವಯ ಸಾಧಿಸಲು ವಿಫಲವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸದೇ ಇಲಾಖೆಯ ಕಡೆ ಬೊಟ್ಟು ಮಾಡುವುದು ಸಾಮಾನ್ಯವಾಗಿದೆ.
ಸರ್ಕಾರ ಇತ್ತೀಚಿಗೆ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡದ ಭರವಸೆಯನ್ನು ನೀಡಿ ಅದರ ಜೊತೆಗೆ ಹೊಸ ಅಂಗನವಾಡಿಗಳನ್ನು ತೆರೆಯಲು ಹಸಿರು ನಿಶಾನೆ ನೀಡಿದ್ದರೂ ಸಿರುಗುಪ್ಪ ತಾಲ್ಲೂಕಿನಲ್ಲಿ ನಿವೇಶನ ಲಭ್ಯವಿರುವ 24 ಕೇಂದ್ರ, ಅಲ್ಲದೆ ನಿವೇಶನ ಲಭ್ಯವಿಲ್ಲದ 9 ಕೇಂದ್ರ, ಶಾಲೆ ಹಾಗೂ ಇತರೆ ಕೇಂದ್ರಗಳಲ್ಲಿ ನಡೆಯುವ 8 ಕಟ್ಟಡ ಸೇರಿದಂತೆ ಒಟ್ಟು 41 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಭಾಗ್ಯವಿಲ್ಲದಿರುವುದು ದುರಂತವೇ ಸರಿ.
ಮೂಲಸೌಕರ್ಯ ಕೊರತೆ: ಅನೇಕ ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿವೆ. ಅನೇಕ ಕಡೆ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಪೂರೈಕೆ ಸಮಸ್ಯೆ ಇದೆ. ಇದಲ್ಲದೇ ಮಕ್ಕಳಿಗೆ ಪೂರಕ ವಾತಾವರಣ ಇಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಬಾಡಿಗೆ ಸಮಸ್ಯೆ: ನಗರ ಪ್ರದೇಶದಲ್ಲಿ 19 ಹಾಗೂ ಗ್ರಾಮೀಣ ಪ್ರದೇಶದ 14 ಒಟ್ಟು 33 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇಲಾಖೆಯು 3 ರಿಂದ 6 ತಿಂಗಳಿಗೊಮ್ಮೆ ಬಾಡಿಗೆ ಸಂದಾಯ ಮಾಡುವುದರಿಂದ ಇದನ್ನು ಕೇಳದ ಮಾಲೀಕರಿಗೆ ಅಂಗನವಾಡಿ ಕಾರ್ಯಕರ್ತೆಯರೇ ಬಾಡಿಗೆ ಕಟ್ಟಿ ನಂತರ ಇಲಾಖೆಯಿಂದ ಪಡೆಯಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆ.
ನಿವೇಶನ ಲಭ್ಯವಿರುವ 24 ಹಾಗೂ ಶಿಥಿಲಗೊಂಡಿರುವ 30 ಕೇಂದ್ರ ಸೇರಿದಂತೆ ಒಟ್ಟು 54 ಅಂಗನವಾಡಿ ಕೇಂದ್ರಗಳ ಹೊಸ ಕಟ್ಟಡ ನಿರ್ಮಾಣಕ್ಕೆ 2022- 23ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಪ್ರಸ್ತಾವ ಸಲ್ಲಿಸಲಾಗಿದೆ. ಉಳಿದಂತೆ 15 ಕಟ್ಟಡಗಳಿಗೆ ಹೆಚ್ಚಿನ ದುರಸ್ತಿ ಮಾಡುವ ಅವಶ್ಯಕತೆ ಇರುತ್ತದೆಜಿ. ಪ್ರದೀಪ್ ಸಿಡಿಪಿಒ ಸಿರುಗುಪ್ಪ
ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಯಾವುದೇ ಕೊರತೆಯಿಲ್ಲ. ಆದರೆ ನಿವೇಶನ ಕೋರಿ ಸಿಡಿಪಿಒ ಕಚೇರಿಯಿಂದ ಯಾವುದೇ ಪತ್ರ ಬಂದಿರುವುದಿಲ್ಲವೀರೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾನವಾಸಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.