ADVERTISEMENT

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶಕ್ಕಿಲ್ಲ ಸುರಕ್ಷೆ

ಸಿ.ಶಿವಾನಂದ
Published 18 ಜುಲೈ 2024, 5:44 IST
Last Updated 18 ಜುಲೈ 2024, 5:44 IST
<div class="paragraphs"><p>ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ನುಗ್ಗಿರುವ ಕುರಿಗಳು</p></div>

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ನುಗ್ಗಿರುವ ಕುರಿಗಳು

   

ಹಗರಿಬೊಮ್ಮನಹಳ್ಳಿ: ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿಧಾಮ, ‘ರಾಮ್‍ಸರ್’ ಪ್ರದೇಶ ಸೇರಿದ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನ ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಪ್ರತಿ ದಿನ ಅರಣ್ಯ ಕಾವಲುಗಾರರು ಮತ್ತು ದನಗಾಹಿಗಳು, ಕುರಿಗಾಹಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ.

ಜಾನುವಾರುಗಳು ಕೆರೆ ಪ್ರದೇಶಕ್ಕೆ ನುಗ್ಗುತ್ತಿವೆ. ಇದರಿಂದಾಗಿ ಬೀಡು ಬಿಟ್ಟಿರುವ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಇಂಡಿಯನ್ ಕಾರ್ಮೋರೆಂಟ್, ಗ್ರೇಟ್ ಕಾರ್ಮೋರೆಂಟ್, ಪೆಲಿಕಾನ್, ಐಬೀಸ್ ಸೇರಿದಂತೆ ಹಲವು ಪ್ರಭೇದಗಳ ಬಾನಾಡಿಗಳ ಬದುಕಿಗೆ ತೊಂದರೆ ಎದುರಾಗಿದೆ.

ADVERTISEMENT

ದನಗಳು ಪ್ರದೇಶದೊಳಗೆ ಪ್ರವೇಶಿ ಸಿದ ಕೂಡಲೇ ನೂರಾರು ಸಂಖ್ಯೆಯ ಬಾನಾಡಿಗಳು ಗಾಬರಿಗೊಂಡು ಮೇಲೆ ಹಾರುತ್ತವೆ. ಇದರಿಂದಾಗಿ ದನಗಾಹಿ ಗಳು, ಕುರಿಹಾಹಿಗಳು ಮತ್ತು ಕಾವಲು ಗಾರರು ನಡುವೆ ನಿರಂತರ ಜಗಳ ತಪ್ಪಿಲ್ಲ. ಕೇವಲ ಪಕ್ಷಿಗಳನ್ನು ವೀಕ್ಷಿಸಲು ಬಳಕೆಯಾಗುತ್ತಿದ್ದ ಇಲಾಖೆಯ ಬೈನಾಕುಲರ್ ಈಗ ಜಾನುವಾರು ನುಗ್ಗುವುದನ್ನು ಕಾಯಲು ಉಪಯೋಗವಾಗುತ್ತಿದೆ.

244 ಎಕರೆ ಮೀಸಲು ಪ್ರದೇಶದಲ್ಲಿ ನರೇಗಾ ಮತ್ತು ಅರಣ್ಯ ಇಲಾಖೆಯ ವಿಶೇಷ ಅನುದಾನದ ಅಡಿಯಲ್ಲಿ ವರ್ಷದ ಹಿಂದೆ ಅಂದಾಜು 1.7 ಕಿ.ಮೀ. ಚೈನ್‍ಲಿಂಕ್ ಮೆಶ್‍ನಿಂದ ಸುತ್ತುಗೋಡೆ ನಿರ್ಮಿಸಲಾಗಿದೆ. ಇನ್ನೂ 3 ಕಿ.ಮೀ. ಕಾಮಗಾರಿ ಬಾಕಿ ಇದೆ. ಸಂಪೂರ್ಣ ಸುತ್ತುಗೋಡೆ ನಿರ್ಮಾಣಗೊಳ್ಳದೆ ಇರುವುದರಿಂದ ಜನ, ಜಾನುವಾರುಗಳು ಅಕ್ರಮವಾಗಿ ಪಕ್ಷಿ ಸಂರಕ್ಷಿತ ಪ್ರದೇಶವನ್ನು ಪ್ರವೇಶ ಮಾಡಲು ಸುಲಭವಾಗಿದೆ.

ಕೆರೆ ಪ್ರದೇಶದ ಏರಿ ಪಕ್ಕದ ಪ್ರವೇಶ ದ್ವಾರದಲ್ಲಿಯೂ ಸುತ್ತುಗೋಡೆ ನಿರ್ಮಾಣಗೊಂಡಿಲ್ಲ. ಎಲ್ಲೆಂದರಲ್ಲಿ ವಾಹನಗಳು ನುಗ್ಗುತ್ತಿವೆ, ಹಕ್ಕಿಗಳ ವಾಸಸ್ಥಾನಕ್ಕೆ ಆತಂಕ ಮೂಡಿಸಿದೆ. 25ಕ್ಕೂ ಹೆಚ್ಚು ಪ್ರಭೇದಗಳ ಬಾನಾಡಿಗಳು ಸಂತಾನೋತ್ಪತ್ತಿಗಾಗಿಯೇ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿವೆ.

ಅಕ್ಟೋಬರ್ ತಿಂಗಳಿನಿಂದ ದೇಶ ವಿದೇಶಗಳ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. 8 ಕಿ.ಮೀ. ಸುತ್ತಳತೆಯ ಪ್ರದೇಶಕ್ಕೆ ಮೂವರು ಕಾವಲುಗಾರರನ್ನು ಅರಣ್ಯ ಇಲಾಖೆ ನಿಯೋಜಿಸಿದೆ. ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಬೇಕು. ಪ್ರದೇಶದಲ್ಲಿ ನೀರು ಖಾಲಿಯಾಗಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಉತ್ತಮವಾಗಿ ಹುಲ್ಲು ಬೆಳೆದಿದೆ. ಇದರಿಂದಾಗಿ ದನಗಳು, ಕುರಿಗಳನ್ನು ಮೇಯಿಸಲು ಎಗ್ಗಿಲ್ಲದೆ ನುಗ್ಗಿ ಬರುವ ದನಗಾಹಿಗಳು, ಕುರಿಗಾಹಿಗಳೊಂದಿಗೆ ಪ್ರತಿದಿನ ಸಂಘರ್ಷ ನಡೆಯುತ್ತಿದ್ದು, ಕೈ–ಕೈ ಮಿಲಾಯಿಸಿದ ಘಟನೆಗಳೂ ನಡೆದಿವೆ.

‘ಸಂಘರ್ಷ ತಪ್ಪಲು ಜರೂರು ಸಂಪೂರ್ಣ ಸುತ್ತುಗೋಡೆ ನಿರ್ಮಾಣಗೊಳ್ಳುವ ಅಗತ್ಯ ಇದೆ, ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎನ್ನುತ್ತಾರೆ ಪಕ್ಷಿ ಪ್ರೇಮಿ ಆನಂದ್‍ಬಾಬು.

ಬಾಕಿ ಇರುವ ಚೈನ್‍ಲಿಂಕ್ ಮೆಶ್ ನಿರ್ಮಿಸಲು ಇನ್ನೂ ₹ 1.5ಕೋಟಿ ಅನುದಾನದ ಅಗತ್ಯ ಇದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ
ಅಡವಿಹಳ್ಳಿ ಕರಿಬಸಪ್ಪಉಪ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.