ಹೊಸಪೇಟೆ: ತೀವ್ರ ಕುತೂಹಲ ಕೆರಳಿಸಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೋಮವಾರ (ಡಿ.9) ಬೆಳಿಗ್ಗೆ ಎಂಟು ಗಂಟೆಗೆ ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಮತ ಎಣಿಕೆಗೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಚುನಾವಣೆಗೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಭವಿಷ್ಯ ಈಗಾಗಲೇ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಭದ್ರವಾಗಿದೆ. ಮತಗಳ ಎಣಿಕೆಯೊಂದಿಗೆ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಆನಂದ್ ಸಿಂಗ್ ಒಂದುವರೆ ವರ್ಷದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ, ಅವರು ಎರಡನೇ ಸಲ ಪಕ್ಷಾಂತರ ಮಾಡಿ, ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿಂಗ್ ಅವರನ್ನು ಸ್ಪೀಕರ್ ಕೆ.ಆರ್. ರಮೇಶ ಕುಮಾರ್ ಅನರ್ಹಗೊಳಿಸಿದ್ದರು. ಸುಪ್ರೀಂಕೋರ್ಟ್ ಕೂಡ ಅದನ್ನು ಎತ್ತಿ ಹಿಡಿದಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತು. ಆದರೆ, ಜನತಾ ನ್ಯಾಯಾಲಯದಲ್ಲಿ ಅವರು ಅರ್ಹರಾಗುತ್ತಾರೋ ಅಥವಾ ತಕ್ಕ ಶಾಸ್ತಿ ಮಾಡುವ ಮೂಲಕ ಅನರ್ಹಗೊಳಿಸಲಾಗುತ್ತದೆಯೋ ಎನ್ನುವುದು ಗೊತ್ತಾಗಬೇಕಿದೆ.
ಆನಂದ್ ಸಿಂಗ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲೇಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಸಂಸದರು, ಶಾಸಕರು ಸೇರಿದಂತೆ ಡಜನ್‌ಗಟ್ಟಲೇ ಮುಖಂಡರು ಮೂರು ವಾರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಒಮ್ಮೆ ಪ್ರಚಾರ ಕೈಗೊಂಡಿದ್ದಾರೆ.
ಇನ್ನು, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರ ಗೆಲುವಿಗೆ ಆ ಪಕ್ಷದ ಹಲವು ಮುಖಂಡರು ಬೆವರು ಹರಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಂದು ಪ್ರಚಾರ ನಡೆಸಿದ್ದಾರೆ. ಜೆ.ಡಿ.ಎಸ್. ಅಭ್ಯರ್ಥಿ ಎನ್.ಎಂ. ನಬಿ ಪರ ಎಚ್.ಡಿ. ಕುಮಾರಸ್ವಾಮಿ ಪ್ರಚಾರಕ್ಕೆ ಬಂದು ಹೋಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮಾಡಿದ್ದಾರೆ.
ಹೀಗಿದ್ದರೂ ಹಿಂದಿನ ಚುನಾವಣೆಗೆ ಹೋಲಿಸಿದರೆ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದು ಯಾರಿಗೆ ವರವಾಗುತ್ತದೆಯೋ ಅಥವಾ ಪ್ರತಿಕೂಲವಾಗಿ ಪರಿಣಮಿಸುತ್ತದೆಯೋ ಗೊತ್ತಿಲ್ಲ. ಆಯಾ ಪಕ್ಷದ ಅಭ್ಯರ್ಥಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ಇದ್ದಾರೆ. ಅದಕ್ಕೆ ಸೋಮವಾರ ಮಧ್ಯಾಹ್ನ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.