ADVERTISEMENT

ಆ.15ಕ್ಕೆ ರೈತರಿಂದ ಟ್ರ್ಯಾಕ್ಟರ್ ರ್‍ಯಾಲಿ: ಶಾಂತಕುಮಾರ್‌ 

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:24 IST
Last Updated 10 ಆಗಸ್ಟ್ 2024, 16:24 IST
ಕುರುಬೂರು ಶಾಂತಕುಮಾರ್‌ 
ಕುರುಬೂರು ಶಾಂತಕುಮಾರ್‌    

ಬಳ್ಳಾರಿ: ರೈತರ ಹಕ್ಕುಗಳನ್ನು ದಮನ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ‌ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಆ.15ರಂದು ದೇಶವ್ಯಾಪಿ  ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲು ಕರೆ ನೀಡಿದೆ. ಅದರಂತೆ ರಾಜ್ಯದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ  ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದಾದ್ಯಂತ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಬಳಕೆ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸಬ್ಸಿಡಿ ನೀಡಬೇಕು. ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು ಎಂಬ ಒತ್ತಾಯಗಳೊಂದಿಗೆ ದೇಶದಾದ್ಯಂತ ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ರ್‍ಯಾಲಿ ನಡೆಸಲಾಗುವುದು’ ಎಂದು ಅವರು ಹೇಳಿದರು. 

‘ಭತ್ತ, ಅಕ್ಕಿ ವಿದೇಶಕ್ಕೆ ರಫ್ತು ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಪ್ರವಾಹ ಹಾನಿ, ಮಳೆಹಾನಿ, ಬೆಳೆ ಹಾನಿಗೆ ಒಳಗಾದ ಜನರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೃಷಿಪಂಪ್ ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ಸಬ್ಸಿಡಿ ನಿಲ್ಲಿಸುವ ಹುನ್ನಾರದಿಂದ, ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಲಿಂಕ್ ಜೋಡಣೆ ಕೈ ಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಶರಣಪ್ಪ ದೂಡ್ಡಮನಿ, ಲೇಪಾಕ್ಷಿ ಅಸುಂಡಿ, ಬಸವರಾಜ್ ಸ್ವಾಮಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷ ಜಿ ವಿ ಲಕ್ಷ್ಮೀದೇವಿ, ರೈತ ಮುಖಂಡ ಯಾದಗಿರಿ ಕೊಟ್ರೇಶ್ ಚೌದರಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.