ADVERTISEMENT

ಬಳ್ಳಾರಿ | ಸಾರಿಗೆಗೆ ‘ಶಕ್ತಿ’ಯ ಬಲ; ಸರತಿ, ಬಸ್‌ ಸಂಚಾರದಲ್ಲಿಯೂ ಗಣನೀಯ ಹೆಚ್ಚಳ

ಆರ್. ಹರಿಶಂಕರ್
Published 5 ಜುಲೈ 2024, 5:32 IST
Last Updated 5 ಜುಲೈ 2024, 5:32 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬಳ್ಳಾರಿ: ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಕಾರ್ಯಕ್ರಮಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಒಂದೆಡೆ ಆದಾಯ ಹರಿದಿಬರುತ್ತಿದೆ. ಇನ್ನೊಂದೆಡೆ, ಸಾರಿಗೆ ವ್ಯವಸ್ಥೆಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒತ್ತಡವೂ ಹೆಚ್ಚುತ್ತಿದೆ. ಹೀಗಾಗಿ ಇಲಾಖೆಯು ಬಸ್‌ ಮತ್ತು ಸರತಿ (ಟ್ರಿಪ್‌) ಸಂಖ್ಯೆಯನ್ನೂ ಹೆಚ್ಚಿಸುತ್ತಿದೆ.

ಕಳೆದ ವರ್ಷ ಜೂನ್‌ 10ರಂದು ಶಕ್ತಿ ಯೋಜನೆ ಆರಂಭವಾಗುವುದಕ್ಕೂ ಮೊದಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದಲ್ಲಿ 438 ಬಸ್‌ಗಳಿದ್ದವು. ಆದರೆ, ಶಕ್ತಿ ಯೋಜನೆ ಜಾರಿಗೆ ಬಂದ ಒಂದೇ ವರ್ಷದಲ್ಲಿ ಈ ಸಂಖ್ಯೆ 473ಕ್ಕೆ ಏರಿಕೆಯಾಗಿದೆ. 35 ಹೆಚ್ಚುವರಿ ಬಸ್‌ಗಳು ವಿಭಾಗಕ್ಕೆ ಸೇರ್ಪಡೆಗೊಂಡಿವೆ.  

ಸಂಡೂರು ತಾಲೂಕು ಒಂದಕ್ಕೇ 15 ಹೆಚ್ಚುವರಿ ಬಸ್‌ಗಳು ಸಿಕ್ಕಿದೆ. ಗ್ಯಾರೆಂಟಿ ಯೋಜನೆ ಜಾರಿಗೂ ಮುನ್ನ ಅಲ್ಲಿ 72 ಬಸ್‌ಗಳಿದ್ದವು. ಈಗ ಅಲ್ಲಿ 87 ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಬಳ್ಳಾರಿ ವಿಭಾಗ –1ಕ್ಕೆ–9, ವಿಭಾಗ –2ಕ್ಕೆ–3, ಸಿರುಗುಪ್ಪ ತಾಲ್ಲೂಕಿಗೆ–9, ಕುರುಗೋಡು ತಾಲ್ಲೂಕಿಗೆ–2 ಬಸ್‌ಗಳು ಈ ವರ್ಷ ಹೆಚ್ಚುವರಿಯಾಗಿ ಸಿಕ್ಕಿವೆ. ಆದರೆ, ಬಳ್ಳಾರಿ ವಿಭಾಗ–3ರಲ್ಲಿ ಮೂರು ಬಸ್‌ಗಳು ಕಡಿಮೆಯಾಗಿವೆ. 

ADVERTISEMENT

ಬಸ್‌ಗಳ ಸರತಿ ಸೇವೆಯಲ್ಲೂ ಹೆಚ್ಚಳವಾಗಿದೆ. 2023ರ ಜೂನ್‌ನಲ್ಲಿ ನಿತ್ಯ ವಿವಿಧ ಮಾರ್ಗಗಳಲ್ಲಿ 1,902 ಸರತಿಗಳಿದ್ದವು. ಆದರೆ, ಈ ವರ್ಷ ಜೂನ್‌ ಹೊತ್ತಿಗೆ ಅದು 2,293ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಬಸ್‌ಗಳನ್ನು ಪಡೆದಿರುವ ಸಂಡೂರಿನಲ್ಲಿ ‘ಶಕ್ತಿ’ಗೂ ಮುನ್ನ ನಿತ್ಯ 344 ಸರತಿಗಳಿದ್ದರೆ ಈಗ ಅದು 491ಕ್ಕೆ ಏರಿದೆ. ಅಂದರೆ 147 ಅಧಿಕ ಸರತಿಗಳನ್ನು ಸೇರ್ಪಡೆ ಮಾಡಲಾಗಿದೆ. ಬಳ್ಳಾರಿ–ವಿಭಾಗ 1ರಲ್ಲಿ 58, ಸಿರುಗುಪ್ಪದಲ್ಲಿ 42, ಕುರುಗೋಡಿನಲ್ಲಿ 87 ಹೆಚ್ಚುವರಿ ಸರತಿಗಳನ್ನು ಸೇರ್ಪಡೆ ಮಾಡಲಾಗಿದೆ. 

ಇನ್ನೊಂದೆಡೆ, ಬಸ್‌ಗಳು ನಿತ್ಯ ಸಂಚರಿಸುವ ಒಟ್ಟಾರೆ ಕಿ.ಮೀಗಳಲ್ಲಿ ಏರಿಕೆಯಾಗಿದೆ. 2023ರ ಜೂನ್‌ನಲ್ಲಿ ಸಾರಿಗೆ ಸಂಸ್ಥೆಗಳ ಬಸ್‌ಗಳು 1,37,550 ಕಿ.ಮೀ ಸಂಚರಿಸಿ ಜನರಿಗೆ ಸೇವೆ ನೀಡುತ್ತಿದ್ದವು. ಈಗ ಅದು 1,54,499ಕ್ಕೆ ಏರಿಕೆಯಾಗಿದೆ. ಅಂದರೆ 16,980 ಕಿ.ಮೀ ಅಧಿಕ ಸೇವೆ ಜನರಿಗೆ ಲಭ್ಯವಾಗುತ್ತಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. 

ಸಂಡೂರು ತಾಲ್ಲೂಕಿನಲ್ಲಿ 6,158 ಕಿ.ಮೀ, ಬಳ್ಳಾರಿ ವಿಭಾಗ –1ರಲ್ಲಿ 2,513 ಕಿ.ಮೀ, ಸಿರುಗುಪ್ಪದಲ್ಲಿ 3,349, ಕುರುಗೋಡು–1612 ಕಿ.ಮೀ ಹೆಚ್ಚುವರಿ ಸೇವೆ ಜನರಿಗೆ ಸಿಗುತ್ತಿದೆ. 

ಶಕ್ತಿ ಯೋಜನೆ ಬಂದ ಬಳಿಕ ಸಾರಿಗೆ ಸೇವೆ ಬಳಕೆ ಅಧಿಕವಾಗಿದೆ. ಜನರ ಸಂಚಾರ ಹೆಚ್ಚಾಗುತ್ತಿದೆ. ಜನರೂ ತಾವಿರುವ ಹಳ್ಳಿಗೆ ಬಸ್‌ ಸೇವೆ ಬರಲಿ ಎಂದು ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಹೊಸ ಹೊಸ ಜಾಗಗಳಿಗೆ ಬಸ್‌ ಸೇವೆ ನೀಡಲಾಗುತ್ತಿದೆ. ಹೀಗಾಗಿ ಬಸ್‌ಗಳು ಸಂಚರಿಸುವ ಕಿ.ಮೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಬಸ್‌ಗಳ ಸಂಖ್ಯೆ ಮತ್ತು ಸರತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಬಸ್‌ ಬಳಕೆ ಹೆಚ್ಚಿರುತ್ತಿತ್ತು. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹಿಂದೆಲ್ಲ ಬಸ್‌ಗಳನ್ನು ನಿಯೋಜನೆ ಮಾಡುತ್ತಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲ ಸಮಯದಲ್ಲೂ ಪ್ರಯಾಣಿಕರು ಬಸ್‌ಗಳನ್ನು ಅಪೇಕ್ಷಿಸುತ್ತಿರುವುದರಿಂದ ಹೆಚ್ಚುವರಿ ಬಸ್‌ಗಳನ್ನು, ಸರತಿಗಳನ್ನು ಓಡಿಸಲೇಬೇಕಾದ ಅಗತ್ಯ ಎದುರಾಗಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು. 

ಆದಾಯದಲ್ಲೂ ಹೆಚ್ಚಳ: ಶಕ್ತಿ ಯೋಜನೆ ಆರಂಭವಾದ 2023ರ ಜೂನ್‌ 23ರಿಂದ 2024ರ ಜೂನ್‌ ವರೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದಲ್ಲಿ ಒಟ್ಟು 2,73,19,641 ಮಹಿಳೆಯರು ಸಂಚರಿಸಿದ್ದಾರೆ. ಇದರಲ್ಲಿ ವಯಸ್ಕರ ಸಂಖ್ಯೆ 2,61,96,490 ಆಗಿದ್ದರೆ, ಮಕ್ಕಳ ಸಂಖ್ಯೆ 11,23,151. ಇದರಿಂದ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಸರ್ಕಾರ ₹94,42,86,316 ಪಾವತಿ ಮಾಡಿದೆ. 

ಸ್ಕೂಲ್‌ ರೌಂಡ್‌ ಕಡ್ಡಾಯ: ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳುವ ಬೆಳಿಗ್ಗಿನ ಸಮಯದಲ್ಲಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಮೇಲೆ ವಿಪರೀತ ಒತ್ತಡ ಉಂಟಾಗುತ್ತಿದೆ. ಒತ್ತಡ ತಗ್ಗಿಸುವ ಸಲುವಾಗಿ ದೂರದ ಜಿಲ್ಲೆಗಳಿಂದ ಬಳ್ಳಾರಿಗೆ ಬೆಳಿಗ್ಗೆ ಬರುವ ಬಸ್‌ಗಳಿಗೆ ಒಂದು ಸರತಿ ‘ಸ್ಕೂಲ್ ರೌಂಡ್‌’ ಹೋಗಿ ಬರಲು ಸೂಚನೆ ನೀಡಲಾಗಿದೆ. ಇದರಿಂದ ಒತ್ತಡ ತಗ್ಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಗತ್ಯವಿರುವ ಕಡೆ ಸರ್ವೆ ಮಾಡಿ ಬಸ್‌ ವ್ಯವಸ್ಥೆ ತೊಂದರೆಗಳ ನಡುವೆಯೂ ಉತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ. ಶಾಲಾ– ಕಾಲೇಜು ಮಕ್ಕಳಿಗಾಗಿ ಸೇವೆ ಹೆಚ್ಚಿಸಿದ್ದೇವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ಬಸ್‌ ಹಾಕಿದ್ದೇವೆ. ಕೆಕೆಆರ್‌ಡಿಬಿ ಮತ್ತು ಡಿಎಂಎಫ್ ಅಡಿಯಲ್ಲಿ ಮತ್ತಷ್ಟು ಹೆಚ್ಚು ಬಸ್‌ಗಳು ಬರುತ್ತಿವೆ. ಕೆಲವರು ಸ್ವಾರ್ಥಕ್ಕೆ ಸ್ವಪ್ರತಿಷ್ಠೆಗೆ ತಮ್ಮ ಊರಿಗೆ ಪ್ರತ್ಯೇಕ ಬಸ್‌ಗಳು ಬೇಕೆಂದು ಬೇಡಿಕೆ ಇಡುತ್ತಿರುವುದು ಬೇಸರದ ಸಂಗತಿ. ಅಗತ್ಯ ಇರುವ ಕಡೆ ಸರ್ವೆ ಮಾಡಿ ಬಸ್‌ ಸೇವೆ ಒದಗಿಸುತ್ತೇವೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್‌ ಬಾಗ್‌ಬಾನ್‌ ತಿಳಿಸಿದರು.

ಶಕ್ತಿ ಯೋಜನೆ ಬಳಿಕ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ನಾವು ವ್ಯವಸ್ಥೆ ಬಲಪಡಿಸಲೇ ಬೇಕಾಗಿದೆ. ಹೀಗಾಗಿಯೇ ಬಸ್‌ ಸರತಿ ಮತ್ತು ಬಸ್‌ಗಳು ಸಂಚರಿಸುವ  ಕಿಲೊ ಮೀಟರ್‌ ಲೆಕ್ಕವೂ ಹೆಚ್ಚಾಗಿದೆ.
-ಚಾಮರಾಜ್‌, ವಿಭಾಗೀಯ ಸಂಚಾರ ಅಧಿಕಾರಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.