ಹರಪನಹಳ್ಳಿ: ಸಿಎಂ ಸಿದ್ದರಾಮಯ್ಯ ಅವರಿಂದಲೇ 2018ರಲ್ಲಿ ಮುಂಜೂರಾಗಿದ್ದ ತಾಲ್ಲೂಕಿನ ತುಂಗಭದ್ರಾ ನದಿಗೆ ಗರ್ಭಗುಡಿ ಬಳಿ ಸೇತುವೆ ಸಹಿತ ಬಂದಾರ ನಿರ್ಮಾಣ ಕಾಮಗಾರಿ ಪಿಲ್ಲರ್ ಹಂತಕ್ಕೆ ಸ್ಥಗಿತಗೊಂಡಿದೆ.
1998ರಲ್ಲಿ ಮುಖ್ಯಮಂತ್ರಿಯಾಗಿದ್ದ ದಿ.ಜೆ.ಎಚ್.ಪಟೇಲ್ ಅವರು ಆ.14ರಂದು ತಾಂತ್ರಿಕ ಮೌಲ್ಯ ನಿರ್ಣಯ ಕೈಗೊಂಡು ಅದೇ ವರ್ಷ ಸೆಪ್ಟಂಬರ್ 9 ರಂದು ಕಾಮಗಾರಿ ನಿರ್ಮಾಣಕ್ಕೆ ₹ 8.30 ಕೋಟಿ ಆರ್‌ಐಡಿಎಫ್ ಅಡಿ ಮುಂಜೂರಾತಿ ನೀಡಿ, ಶಿಲಾನ್ಯಾಸ ನೆರವೇರಿಸಿದ್ದರು. ಗುತ್ತಿಗೆ ಪಡೆದಿದ್ದ ಕರ್ನಾಟಕ ರಾಜ್ಯ ನಿರ್ಮಾಣ ನಿಗಮ ನದಿಪಾತ್ರದ ಬಲ ಭಾಗದಲ್ಲಿ ಒಂದು ಅಬ್ಯಟ್ ಮೆಂಟ್ ಹಾಗೂ 9 ಪಿಯರ್ ಗಳನ್ನು ನದಿಯ ಬೆಡ್ ಲೆವೆಲ್ ವರೆಗೆ ಕಾಂಕ್ರಿಟ್ ಕೆಲಸ ಮಾಡಿತ್ತು.
ಎಡ ಮತ್ತು ಮದ್ಯ ಭಾಗದಲ್ಲಿ ತಳಪಾಯದ ಅಗೆತವನ್ನು ಕೈಗೊಂಡಾಗ ಅತಿಯಾದ ಜಿನುಗು ಪ್ರದೇಶದಿಂದಾಗಿ ಕಾಮಗಾರಿ ಸ್ಥಗಿತಗೊಳಿಸಿ ಗುತ್ತಿಗೆ ಒಪ್ಪದಿಂದಲೇ ದೂರ ಉಳಿದುಬಿಟ್ಟರು. ಪುನಃ 2011ರಲ್ಲಿ ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯು ಸ್ಟೂಪ್ ಕನ್ಸಲ್ಟೆಂಟ್ ಪ್ರೈ.ಲಿ. ಕಂಪನಿಯ ಮೂಲಕ ಸಮೀಕ್ಷೆ ನಡೆಸಿ, ₹ 47.10 ಕೋಟಿಗೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
2015ರಲ್ಲಿ ಶಾಸಕರಾಗಿದ್ದ ದಿವಂಗತ ಎಂ.ಪಿ.ರವೀಂದ್ರ ಅವರ ಶ್ರಮದಿಂದಾಗಿ ಬೆಂಗಳೂರು ವೃತ್ತದ ದರಪಟ್ಟಿ ಅನ್ವಯ ದರ ಪರಿಷ್ಕೃತಗೊಳಿಸಿ ₹ 51.40 ಕೋಟಿಗೆ ಪ್ರಸ್ತಾವ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ, ಆಡಳಿತ ಮತ್ತು ತಾಂತ್ರಿಕ ಅನುಮೋದನೆ ಪಡೆದು, ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದು ನದಿಯಲ್ಲಿ ಪಿಲ್ಲರ್ ಕಾಮಗಾರಿ ನಿರ್ವಹಿಸಿದ್ದು, ಅನುದಾನದ ಕೊರತೆಯಿಂದ ಮೊಟಕುಗೊಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್ ಯೋಜನೆಗೆ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ.-ಎಂ.ಪಿ.ಲತಾ ಮಲ್ಲಿಕಾರ್ಜುನ್, ಶಾಸಕಿ ಹರಪನಹಳ್ಳಿ.
ಸೇತುವೆ ನಿರ್ಮಾಣದಿಂದ ಆಗುವ ಲಾಭಗಳು
ಸೇತುವೆ ಸಹಿತ ಬಂದಾರ ನಿರ್ಮಾಣವಾದರೆ 0.4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 23 ಕಮಾನು 8.4 ಮೀಟರ್ ಅಗಲದ ಸೇತುವೆಯಲ್ಲಿ 7.50 ಮೀಟರ್ ರಸ್ತೆ ನಿರ್ಮಾಣವಾಗಲಿದೆ. 450 ಎಂಸಿಎಫ್‍ಟಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದುತ್ತದೆ ಅಷ್ಟೇ ಅಲ್ಲದೆ ರಾಣೆಬೆನ್ನೂರು- ಹರಪನಹಳ್ಳಿ ನೇರ ಸಂಪರ್ಕಕ್ಕೆ ಅನುಕೂಲವಾಗುತ್ತದೆ. ನದಿಪಾತ್ರದಲ್ಲಿರುವ ಗರ್ಭಗುಡಿ ನಂದ್ಯಾಲ ನಿಟ್ಟೂರು ತಾವರಗುಂದಿ ಹಲವಾಗಲು ಕಡತಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹಳ್ಳಿಗಳ ರೈತರ ಜಮೀನುಗಳಿಗೆ ನೀರುಣಿಸಲು ಸಹಕಾರಿ ಆಗುತ್ತದೆ. ಈಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ತಾಲ್ಲೂಕಿನ ಜನತೆ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್ ಯೋಜನೆಗೆ ಮರು ಜೀವ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.