ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ತುಂಗಭದ್ರಾ ನದಿಯ ಒಡಲು ಬರಿದಾಗಿದ್ದು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಗೊಳ ಸಮೀಪದ ಕೂಡ್ಲಿಗಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ.
2007ರಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಆರಂಭಗೊಂಡ ಸಂದರ್ಭದಲ್ಲಿ ಕೂಡ್ಲಿಗಿಯಲ್ಲಿ ಅಂದಿನ ಜನಸಂಖ್ಯೆ ಕೇವಲ 18 ಸಾವಿರ ಇತ್ತು. ಇದಕ್ಕೆ ಅನುಗುಣವಾಗಿ ನಿತ್ಯ 20 ಲಕ್ಷ ಲೀಟರ್ ನೀರು ಮಾತ್ರ ಬೇಕಿತ್ತು. ಈಗ ಜನಸಂಖ್ಯೆ 36 ಸಾವಿರ ಗಡಿ ದಾಟಿದೆ. ಇಂದಿಗೂ ಅದೇ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿದೆ. ಅಲ್ಲದೆ ಬನ್ನಿಗೊಳದಿಂದ ಹಗರಿಬೊಮ್ಮನಹಳ್ಳಿ, ಬೆಣಕಲ್ಲು ಮೂಲಕ ಕೂಡ್ಲಿಗಿಗೆ ನೀರು ಬರಬೇಕು.
‘ಮಳೆಗಾಲದಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತಿತ್ತು. ಆದರೆ, ನದಿಯಲ್ಲಿ ನೀರು ಬತ್ತಿದ್ದು, ವಾರದಿಂದ ಪಟ್ಟಣಕ್ಕೆ ನೀರು ಬಂದಿಲ್ಲ. ಕಳೆದ ವರ್ಷ ಇದೇ ವೇಳೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿಂಗಟಾಲೂರು ಬ್ಯಾರೇಜ್‌ನಿಂದ ತುಂಗಭದ್ರೆಗೆ ನೀರು ಹರಿಸಿ ಬನ್ನಿಗೊಳ ಬಳಿ ಸಂಗ್ರಹ ಮಾಡಲಾಗಿತ್ತು. ಇದರಿಂದ ಇಡೀ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡಲಿಲ್ಲ. ಈ ವರ್ಷ ಈವರೆಗೂ ನೀರು ಬಿಡುಗಡೆಯಾಗಿಲ್ಲ’ ಎಂದು ನಿವಾಸಿಗಳು ಹೇಳುತ್ತಾರೆ.
‘ಸಿಂಗಟಾಲೂರು ಬ್ಯಾರೇಜ್‍ನಿಂದ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆದರೆ, ನದಿ ಪಾತ್ರದಲ್ಲಿ ಮೋಟರ್‌ಗಳನ್ನು ಇಟ್ಟುಕೊಂಡು ಜಮೀನುಗಳಿಗೆ ನೀರು ಹರಿಸಿಕೊಳ್ಳುವ ಕಾರಣ ಈ ನೀರು ಬನ್ನಿಗೊಳ ಸಮೀಪದ ಜಾಕ್‍ವೆಲ್‌ವರೆಗೆ ತಲುಪುತ್ತಿಲ್ಲ’ ಎಂದು ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.
‘ಪಟ್ಟಣದಲ್ಲಿ 4,662 ಅಧಿಕೃತ ನಳಗಳಿವೆ. ಬಳಕೆ ನೀರಿಗಾಗಿ 75 ಕೊಳವೆ ಬಾವಿಗಳಿದ್ದು, ನೀರು ಸಂಗ್ರಹಿಸಲು 115 ಕಿರು ಟ್ಯಾಂಕ್‌ಗಳಿವೆ. ನೀರು ಪೂರೈಕೆಗೆ ಪಟ್ಟಣ ಪಂಚಾಯಿತಿಯಲ್ಲಿ ನಾಲ್ಕು ಟ್ಯಾಂಕರ್ ಇದ್ದು, ಅಗತ್ಯ ಇರುವ ಕಡೆ ಕಳಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫೀರೋಜ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಭದ್ರಾ ಡ್ಯಾಂನಿಂದ 1.8 ಟಿಎಂಸಿ ಅಡಿ ನೀರು ಸಿಂಗಟಾಲೂರು ಬ್ಯಾರೇಜಿಗೆ ಬರಬೇಕಿತ್ತು. 0.5 ಟಿಎಂಸಿ ಅಡಿ ಮಾತ್ರ ನೀರು ಬಂದಿದೆ. ಅದರಲ್ಲೇ ನಿತ್ಯ 80 ಕ್ಯೂಸೆಕ್ ನೀರನ್ನು ತಂಗಭದ್ರಾ ನದಿಗೆ ಬಿಡಲಾಗುತ್ತಿದೆ–ಎಚ್.ಸಿ. ರಾಘವೇಂದ್ರ, ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ
ಸಿಂಗಟಾಲೂರು ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿಸಿದ್ದು ಅಡೆ ತಡೆ ಇಲ್ಲದೆ ನೀರು ಜಾಕ್‌ವೆಲ್ ತಲುಪುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ–ಶ್ರೀನಿವಾಸ್ ಎನ್.ಟಿ. ಶಾಸಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.