ADVERTISEMENT

ಬತ್ತಿಹೋದ ತುಂಗಭದ್ರೆ: ರಸ್ತೆಯಾದ ನದಿ

ಕಡತದಲ್ಲೆ ಉಳಿದ ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಾಣ ಕಾಮಗಾರಿ

RAJANI M
Published 30 ಮಾರ್ಚ್ 2024, 7:02 IST
Last Updated 30 ಮಾರ್ಚ್ 2024, 7:02 IST
ತೆಕ್ಕಲಕೋಟೆ ಸಮೀಪದ ನಿಟ್ಟೂರು ಬಳಿ ಬತ್ತಿದ ತುಂಗಭದ್ರಾ ನದಿಯಲ್ಲಿ ಬೈಕ್ ಸವಾರರು ಸಾಗುತ್ತಿರುವುದು
ತೆಕ್ಕಲಕೋಟೆ ಸಮೀಪದ ನಿಟ್ಟೂರು ಬಳಿ ಬತ್ತಿದ ತುಂಗಭದ್ರಾ ನದಿಯಲ್ಲಿ ಬೈಕ್ ಸವಾರರು ಸಾಗುತ್ತಿರುವುದು   

ತೆಕ್ಕಲಕೋಟೆ: ಸಮೀಪದ ನಿಟ್ಟೂರು-ಸಿಂಗಾಪುರ ಬಳಿಯ ತುಂಗಭದ್ರಾ ನದಿಯು ಬತ್ತಿ ಹೋದ ಪರಿಣಾಮ ನಿತ್ಯವೂ ಹರಿಗೋಲು ಮೂಲಕ ನದಿದಾಟುತ್ತಿದ್ದ ಜನ ಈಗ ವಿಧಿ ಇಲ್ಲದೆ ಬೈಕ್‌ಗಳನ್ನು ತಳ್ಳಿಕೊಂಡು ದಡ ಸೇರುವುದು ಅನಿವಾರ್ಯವಾಗಿದೆ.

ನದಿಯಲ್ಲಿ ನೀರು ಇರುವಾಗ 'ಹರಿಗೋಲು' ಮೂಲಕ ಪ್ರಯಾಣಿಸುವ ಗ್ರಾಮಸ್ಥರು ಈಗ ನದಿ ಬತ್ತಿರುವುದರಿಂದ ನಡೆದು ಇಲ್ಲವೆ ಬೈಕ್ ಸವಾರಿ ಮೂಲಕ ಪ್ರಯಾಣಿಸುವುದು ನಿತ್ಯದ ಕಾಯಕವಾಗಿದೆ.

2018ರಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಂದ ಭೂಮಿಪೂಜೆಗೊಂಡ ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಾಣ ಕಾಮಗಾರಿಯು ನಿರೀಕ್ಷೆಯಂತೆ ನಡೆಯದೆ ಇರುವುದರಿಂದ ಈ ಭಾಗದ ಜನ ನಿತ್ಯವೂ ಹಿಡಿಶಾಪ ಹಾಕುವಂತಾಗಿದೆ.

ADVERTISEMENT

ಆರಂಭದಲ್ಲಿ ₹80 ಕೋಟಿಯಷ್ಟು ಇದ್ದ ಅಂದಾಜು ವೆಚ್ಚ ನಂತರ ₹ 120ಕೋಟಿಗೆ ಏರಿದ ನಿಟ್ಟೂರು-ಸಿಂಗಾಪುರ ಸೇತುವೆ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕಳೆದ ಡಿಸೆಂಬರ್ ತಿಂಗಳಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸಿಇಪಿಎಂಐಝೆಡ್ ಯೋಜನೆಯಡಿ ₹13.6೦ ಕೋಟಿ ಕಾಯ್ದಿರಿಸಿದೆ. ಆದರೆ ಈವರೆಗೆ ಭೂ ಸ್ವಾಧೀನ ಪ್ರಕ್ರಿಯೆಯಾಗಲಿ ಕಾಮಗಾರಿಯಾಗಲಿ ಪ್ರಾರಂಭವಾಗದೆ ನಿರಾಸೆಯಾಗಿದೆ ಎನ್ನುತ್ತಾರೆ ನಿಟ್ಟೂರಿನ ಗ್ರಾಮಸ್ಥ ಕೊಟಗಿ ಮಲ್ಲಿಕಾರ್ಜುನ.

ಅಂತರ ರಾಜ್ಯ ಸಂಪರ್ಕ ಸೇತುವೆ:

ಈ ಯೋಜನೆಯು ಎರಡು ಗ್ರಾಮಗಳ ನಡುವೆ ಸೇತುವೆಯನ್ನು ನಿರ್ಮಿಸುವ ಮೂಲಕ ಅಂತರಜಿಲ್ಲೆ ಹಾಗೂ ರಾಷ್ಟ್ರೀಯ ಹೆದ್ದಾರಿ 150ಎ ಅನ್ನು ಸಂಪರ್ಕಿಸಿ ಹುಬ್ಬಳ್ಳಿಯಿಂದ ಆಂಧ್ರದ ತಿರುಪತಿಗೆ ನೇರ ಸಂಪರ್ಕ ಕಲ್ಪಿಸುವ ಮಾರ್ಗವಾಗಲಿದೆ. ಅಲ್ಲದೆ ಕಾರಟಗಿಯಿಂದ ಸಿರುಗುಪ್ಪಗೆ ಸುಮಾರು 70 ಕಿ.ಮೀ.ಗಳ ಅಂತರ ಕಡಿಮೆ ಆಗಲಿದೆ. ಇದು ಸಿರುಗುಪ್ಪ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎನ್ನುವುದು ಈ ಭಾಗದ ಜನರ ನಿರೀಕ್ಷೆಯಾಗಿದೆ.

ತೆಕ್ಕಲಕೋಟೆ ಸಮೀಪದ ನಿಟ್ಟೂರು ಬಳಿ ಬತ್ತಿದ ತುಂಗಭದ್ರಾ ನದಿ ಬತ್ತಿದ ಪರಿಣಾಮ ಜಾನುವಾರುಗಳಿಗೆ ನೀರಿಗೂ ತತ್ವಾರ ಉಂಟಾಗಿದೆ
ತೆಕ್ಕಲಕೋಟೆ ಸಮೀಪದ ನಿಟ್ಟೂರು ಬಳಿ ಬತ್ತಿದ ತುಂಗಭದ್ರಾ ನದಿ ಬತ್ತಿದ ಪರಿಣಾಮ ಜಾನುವಾರುಗಳಿಗೆ ನೀರಿಗೂ ತತ್ವಾರ ಉಂಟಾಗಿದೆ
ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಿಸಿದಲ್ಲಿ ಅಂತರ ಜಿಲ್ಲೆಗಳ ಸಂಚಾರ ಸುಲಭವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಮರೆತು ಹೋಗುತ್ತಾರೆ
ಅಂಬಣ್ಣ ಗ್ರಾಮಸ್ಥ ನಿಟ್ಟೂರು

ನದಿ ದಾಟಲು ನಿತ್ಯ ನೂರಾರು ಜನರ ಹರಸಾಹಸ ಸಿರುಗುಪ್ಪ ತಾಲ್ಲೂಕಿನ ನದಿ ಪಾತ್ರದ ಜನ ದೂರದ ಕಾರಟಗಿ ಸಿಂಧನೂರು ಹಾಗೂ ಗಂಗಾವತಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿದ್ದು. ಪ್ರತಿನಿತ್ಯ ಏನಿಲ್ಲವೆಂದರೂ ನೂರಾರು ಬೈಕ್ ಸವಾರರು ಇದೇ ಮರುಳಿನ ದಾರಿಯಲ್ಲಿ ಗಾಡಿ ತಳ್ಳಿಕೊಂಡೇ ಸಂಚರಿಸುತ್ತಾರೆ. ಮದುವೆ ಸೀಸಸ್‌ನಲ್ಲಿ ಇದು ಇನ್ನೂ ಹೆಚ್ಚು. ತುಂಗಭದ್ರಾ ನದಿ ದಡದ ಗ್ರಾಮಸ್ಥರು ಕೃಷಿಕರು ವ್ಯಾಪಾರಿಗಳು ಹಾಗು ವಿದ್ಯಾರ್ಥಿಗಳು ಪ್ರತಿದಿನ ನದಿ ದಾಟಲು ಹರಸಾಹಸ ಪಡುವಂತಾಗಿದೆ. ಇನ್ನು ಮುಂದಾದರೂ ಸೇತುವೆ ನಿರ್ಮಾಣದ ಕನಸು ನನಸಾಗಲಿ ಎಂಬುದು ಜನರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.