ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಇಕ್ಕಟ್ಟಾಗಿರುವ ಸ್ಥಳದಲ್ಲೇ 56 ಚಿಣ್ಣರು ಕೂರಬೇಕು, ಮಲಗಬೇಕು. ಊಟ, ಪಾಠ ಕೂಡಾ’. ಇದು ತಾಲ್ಲೂಕಿನ ವಲ್ಲಭಾಪುರ ಗ್ರಾಮದ ಅಂಗನವಾಡಿ ಕೇಂದ್ರದ ದುಸ್ಥಿತಿ.
ಅಂಗನವಾಡಿಯ ಪೂರ್ವ ಪ್ರಾಥಮಿಕ ಶಿಕ್ಷಣದ ಉದ್ದೇಶವೇ ಇಲ್ಲಿ ಮರೀಚಿಕೆಯಾಗಿದೆ. ಎರಡೂವರೆ ವರ್ಷಗಳಿಂದ ಎರಡು ಕೇಂದ್ರಗಳ ಮಕ್ಕಳು ಒಂದೇ ಕೇಂದ್ರದಲ್ಲಿದ್ದಾರೆ. ಹಿಂದೆ ಇದ್ದ ಕಾರ್ಯಕರ್ತೆ ನಿವೃತ್ತರಾಗಿದ್ದು, ಎರಡನೇ ಕೇಂದ್ರದ ಕಾರ್ಯಕರ್ತೆ ಎರಡನ್ನೂ ನಿಭಾಯಿಸುತ್ತಾರೆ.
ಕೇಂದ್ರದಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲ, ಫ್ಯಾನ್ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಬಿಸಿಲಿನ ಝಳಕ್ಕೆ ಮಕ್ಕಳು ನಲುಗಿದ್ದಾರೆ. ನೀರು ತೊಟ್ಟಿ ಇದ್ದರೂ ಉಪಯೋಗವಿಲ್ಲ. ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿದ್ದ ಕೈತೋಟ ನೀರಿಲ್ಲದೇ ಒಣಗಿದೆ.
ಅಂದಾಜು ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ಉದ್ಘಾಟನೆಗೊಂಡರೂ ಒಂದು ದಿನವೂ ಅಲ್ಲಿರುವ ಕೇಂದ್ರದತ್ತ ಮಕ್ಕಳು ಸುಳಿದಿಲ್ಲ. ಸದ್ಯ ಅದು ಉಗ್ರಾಣವಾದಂತಾಗಿದೆ. ಕಾರ್ಯಕರ್ತೆಯರ ನೇಮಕ ವಿಳಂಬದಿಂದಾಗಿ ಎರಡೂ ಕೇಂದ್ರಗಳ ಮಕ್ಕಳು ಒಂದೇ ಕಡೆ ಇರಬೇಕಿದೆ.
‘ಸ್ಥಳಾಭಾವದಿಂದಾಗಿ ಎರಡೂ ಕೇಂದ್ರಗಳ ಮಕ್ಕಳಿಗೆ ಅಕ್ಷರಭ್ಯಾಸ, ಪಠ್ಯೇತರ ಚಟುವಟಿಕೆ ಮಾಡಿಸಲು ತೊಂದರೆ ಆಗುತ್ತಿದೆ, ಬೆಳಿಗ್ಗೆಯಿಂದ ಮಧ್ಯಾಹ್ನ 4 ಗಂಟೆಯವರೆಗೂ ಕೇಂದ್ರ ನಡೆಸಬೇಕಿದೆ’ ಎಂದು ಅಂಗನವಾಡಿ ಕೇಂದ್ರ-2ರ ಕಾರ್ಯಕರ್ತೆ ಗೀತಾ ಹೇಳಿದರು.
ತಾಲ್ಲೂಕಿನಲ್ಲಿ ಒಟ್ಟು 243 ಅಂಗನವಾಡಿ ಕೇಂದ್ರಗಳಿವೆ. 226 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಪಟ್ಟಣದ ಎರಡು ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ.
‘ತಾಲ್ಲೂಕಿನಲ್ಲಿ 7 ಜನ ಕಾರ್ಯಕರ್ತೆಯರು, 12 ಜನ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದ್ದು ಶೀಘ್ರವೇ ಭರ್ತಿ ಮಾಡಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. 15 ದಿನಗಳಲ್ಲಿ ನೂತನ ಕಾರ್ಯಕರ್ತೆಯರು ಕೆಲಸ ನಿರ್ವಹಿಸಲಿದ್ದಾರೆ.–ಸುದೀಪ್ ಕುಮಾರ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಗರಿಬೊಮ್ಮನಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.