ADVERTISEMENT

ವಿದ್ಯುತ್ ಕೈಕೊಟ್ಟಿದ್ದಕ್ಕೂ ಸಾವಿಗೂ ಸಂಬಂಧವಿಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ವಿಮ್ಸ್‌ ಐಸಿಯುನಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:42 IST
Last Updated 19 ಸೆಪ್ಟೆಂಬರ್ 2022, 4:42 IST
   

ಬಳ್ಳಾರಿ: ‘ವಿಮ್ಸ್‌ನಲ್ಲಿ ಇದೇ 14ರಂದು ವಿದ್ಯುತ್‌ ಕಡಿತಗೊಂಡಿದ್ದು ನಿಜ. ಇದಕ್ಕೂ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಸಂಭವಿಸಿದ ಇಬ್ಬರ ಸಾವಿಗೂ ಸಂಬಂಧವಿಲ್ಲ‘ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಸ್ಪಷ್ಟಪಡಿಸಿದರು.

ವಿಮ್ಸ್‌ ಐಸಿಯುನಲ್ಲಿ ಬುಧವಾರ ಸಂಭವಿಸಿದ ಸಾವಿನ ಪ್ರಕರಣಗಳನ್ನು ಕುರಿತು ಪರಿಶೀಲಿಸಲು ಭಾನುವಾರ ಖುದ್ದು ವಿಮ್ಸ್‌ಗೆ ಭೇಟಿ ನೀಡಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವರೊಂದಿಗೆ ಸಾರಿಗೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜತೆಗಿದ್ದರು.

‘ಬುಧವಾರ ಬೆಳಿಗ್ಗೆ 8.30ಕ್ಕೆ ವಿದ್ಯುತ್‌ ಕಡಿತಗೊಂಡಿತ್ತು. 8.30 ರಿಂದ 9.30ರ ನಡುವೆ ಇಬ್ಬರ ಸಾವು ಸಂಭವಿಸಿದೆ. ಮೌಲಾ ಹುಸೇನ್‌ ಮೂತ್ರಪಿಂಡದ ತೀ‌ವ್ರ ಸಮಸ್ಯೆಯಿಂದ ಬಳಲುತ್ತಿದ್ದರು. ದೀರ್ಘ ಸಮಯದಿಂದ ಡಯಾಲಿಸಿಸ್‌ನಲ್ಲಿದ್ದರು. ಸೆ. 11ರಂದು ಆಸ್ಪತ್ರೆಗೆ ಬಂದ ದಿನದಿಂದಲೇ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ರಕ್ತದೊತ್ತಡವಿತ್ತು. ಮಿದುಳಿನಲ್ಲಿ ರಕ್ತಸ್ರಾವ ಆಗಿತ್ತು’ ಎಂದು ಸಚಿವರು ವಿವರಿಸಿದರು.

ADVERTISEMENT

‘ಚಿಟ್ಟೆಮ್ಮ 13ರಂದು ಆಸ್ಪತ್ರೆಗೆ ದಾಖ ಲಾಗಿದ್ದರು. ರಕ್ತದೊತ್ತಡ ಕಡಿಮೆ ಇತ್ತು. ಆಮ್ಲಜನಕ ಮಟ್ಟವೂ ಇಳಿಮುಖವಾಗಿತ್ತು. ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗುತ್ತಿತ್ತು. ಅಗತ್ಯ ಔಷ ಧೋಪಚಾರ ಮಾಡಿದರೂ ರೋಗಿಯ ಪರಿಸ್ಥಿತಿ ಸುಧಾರಣೆ ಆಗಲಿಲ್ಲ. 8.20ಕ್ಕೆ ವಿದ್ಯುತ್‌ ಕೈಕೊಟ್ಟರೂ ವೆಂಟಿಲೇಟರ್‌ಗೆ ಬ್ಯಾಟರಿ ಬ್ಯಾಕಪ್‌ ಇತ್ತು. ಆದರೆ, 8.30ಕ್ಕೆ ಅವರ ಹೃದಯ ಬಡಿತ ನಿಂತಿತು. ಇದನ್ನು ವೈದ್ಯಕೀಯ ವರದಿ ಹೇಳಿದೆ. ಈ ವರದಿಯನ್ನು ತನಿಖಾ ಸಮಿತಿಗೆ ಕೊಡಲಾಗಿದೆ’ ಎಂದು ವಿವರಿಸಿದರು.

‘ಈ ಎರಡು ಸಾವು ಸಹಜವಾಗಿ ಆಗಿದ್ದರೆ ಯಾರ ವಿರುದ್ಧವೂ ಕ್ರಮ ಇಲ್ಲ. ಯಾವುದೇ ನಿರ್ಲಕ್ಷ್ಯ ಅಥವಾ ಲೋಪದಿಂದ ಆಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಖಚಿತ. ಈ ಬಗ್ಗೆ ಯಾವ ಅನುಮಾನವೂ ಬೇಡ. ಸತ್ಯ ಎಲ್ಲರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ ತನಿಖಾ ಸಮಿತಿ ರಚಿಸಲಾಗಿದೆ. ಸಮಿತಿ ವರದಿಯನ್ನು ವಿಧಾನಸಭೆ, ಮಾಧ್ಯಮ ಮತ್ತು ಜನರ ಎದುರು ಇಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಕಠಿಣ ಕ್ರಮದ ಎಚ್ಚರಿಕೆ
’ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ವೈದ್ಯರು ಕರ್ತವ್ಯದ ವೇಳೆ ಖಾಸಗಿ ಆಸ್ಪತ್ರೆಗಳು ಅಥವಾ ಪಾಲುದಾರಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ಸಚಿವ ಸುಧಾಕರ್‌ ಎಚ್ಚರಿಕೆ ನೀಡಿದರು.

’ಕರ್ತವ್ಯದ ವೇಳೆ ಹೊರಗಡೆ ಕೆಲಸ ಮಾಡುವುದನ್ನು ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ರೂಪಿಸುತ್ತಿದೆ. ಈಗ ವಿವರ ಕೊಡುವುದಿಲ್ಲ. ಒಂದೆರಡು ತಿಂಗಳಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ‘ ಎಂದು ಸುಧಾಕರ್‌ ಸ್ಪಷ್ಟಪಡಿಸಿದರು.

’ಈಗಾಗಲೇ ದಿನಕ್ಕೆ ಮೂರು ಸಲ ಬಯೋ ಮೆಟ್ರಿಕ್‌ ಹಾಜರಾತಿ ಕಡ್ಡಾಯ ಮಾಡಲಾಗಿದೆ. ನಾಲ್ಕು ಗಂಟೆ ಬಳಿಕೆ ಹೊರಗಡೆ ಸೇವೆ ಸಲ್ಲಿಸಬಹುದು. ವೈದ್ಯರನ್ನು ನಿಯಂತ್ರಿಸಲು ಸರ್ಕಾರಕ್ಕೆ ಭಯವಿಲ್ಲ. ಸರ್ಕಾರದ ಕಠಿಣ ತೀರ್ಮಾನಗಳು ಏನೆಂಬುದು ನಿಮಗೇ ಗೊತ್ತಾಗಲಿದೆ‘ ಎಂದು ಸುಧಾಕರ್‌ ವಿವರಿಸಿದರು.

‘ಬ್ಯಾಟರಿ ಬ್ಯಾಕಪ್‌ ಇರಲಿಲ್ಲ’
‘ಇಬ್ಬರ ಸಾವು ಸಂಭವಿಸಿದ ಐಸಿಯುನಲ್ಲಿ ವೆಂಟಿಲೇಟರ್‌ಗಳಿಗೆ ಬ್ಯಾಟರಿ ಬ್ಯಾಕಪ್‌ ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅರ್ಧಗಂಟೆಯೂ ವಿದ್ಯುತ್ ಇರುವುದಿಲ್ಲ’ ಎಂಬ ಆತಂಕಕಾರಿ ಸಂಗತಿ ಭಾನುವಾರ ಸಚಿವ ಸುಧಾಕರ ಅವರ ಗಮನಕ್ಕೆ ಬಂತು.

‘ಒಂದು ಬ್ಯಾಟರಿ ಬ್ಯಾಕಪ್‌ ಹೆಚ್ಚುವರಿಯಾಗಿ ಇರಬೇಕು. ಯುಪಿಎಸ್‌ ಇರಬೇಕು. ಹೆಚ್ಚುವರಿ ಬ್ಯಾಕಪ್ಪೂ ಇಲ್ಲ. ಯುಪಿಎಸ್‌ ಕೂಡಾ ಇಲ್ಲ’ ಎಂದು ಬಯೋ ಮೆಡಿಕಲ್‌ ಅಧಿಕಾರಿ ಸಚಿವರಿಗೆ ತಿಳಿಸಿದರು. ‘ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡರು.

ಕಠಿಣ ಕ್ರಮದ ಎಚ್ಚರಿಕೆ
‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ವೈದ್ಯರು ಕರ್ತವ್ಯದ ವೇಳೆ ಖಾಸಗಿ ಆಸ್ಪತ್ರೆಗಳು ಅಥವಾ ಪಾಲುದಾರಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಸುಧಾಕರ್‌ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.