ಅರಸೀಕೆರೆ: ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಐತಿಹಾಸಿಕ, ಧಾರ್ಮಿಕ ಪ್ರಸಿದ್ಧ ಉಚ್ಚಂಗೆಮ್ಮ ದೇವಿ ಪುಣ್ಯ ಕ್ಷೇತ್ರಕ್ಕೆ ಗುರು ಪೂರ್ಣಿಮೆಯ ಅಂಗವಾಗಿ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದರು.
ಆಗಾಗ್ಗೆ ಸುರಿಯುತ್ತಿದ್ದ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ, ಸಾಲು ಸಾಲು ಭಕ್ತರು ದೇವಿಯ ದರ್ಶನ ಪಡೆದರು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ದೇವಿಯ ನೈವೇದ್ಯಕ್ಕೆ ರೊಟ್ಟಿ, ಬದನೆಕಾಯಿ ಪಲ್ಯೆ, ಮೊಸರು ಬುತ್ತಿ, ಹಣ್ಣು, ಹೂ, ಕಾಯಿ, ಕರ್ಪೂರಗಳಿಂದ ಪೂಜೆ ನೆರೆವೇರಿಸಿ ಭಕ್ತಿ ಸಮರ್ಪಿಸಿದರು.
ಹುಣ್ಣಿಮೆ ಅಂಗವಾಗಿ ಬುಧವಾರ ಭಕ್ತರ ಸಮ್ಮುಖದಲ್ಲಿ ಆನೆ ಹೊಂಡ ಉತ್ಸವ ನಡೆಯಿತು. ಭಕ್ತರು ಚೌಟಿಗೆ, ಗೀಗೀ ಪದಗಳ ಮೂಲಕ ಉತ್ಸವಕ್ಕೆ ಮೆರಗು ಹೆಚ್ಚಿಸಿದರು. ದೇವಿಗೆ ಕುಂಕುಮಾರ್ಚನೆ, ಎಲೆ ಪೂಜೆ, ಹೊಳೆ ಪೂಜೆ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬಸ್ ಸೀಟಿಗೆ ಮುಗಿಬಿದ್ದ ಭಕ್ತರು: ಹುಣ್ಣಿಮೆ ಅಂಗವಾಗಿ ಎಲ್ಲೆಡೆಯಿಂದ ಬಂದಿದ್ದ ಭಕ್ತರಿಗೆ ಬಸ್ ಕೊರತೆ ಉಂಟಾಯಿತು. ಸಾರಿಗೆ ಅಡಚಣೆ ನಡೆವೆಯೂ ಸರ್ಕಾರಿ ಬಸ್ ಸೀಟಿಗಾಗಿ ಮಹಿಳೆಯರು ಮುಗಿಬಿದ್ದಿದ್ದರು.
ಮದ್ಯಾಹ್ನ ಸರ್ಕಾರಿ ಬಸ್ ಪಂಕ್ಚರ್ ಆಗಿದ್ದರಿಂದ ಗ್ರಾಮದ ಪಾದಗಟ್ಟೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ಭಕ್ತರು ಜಮಾಯಿಸಿದ್ದರು. ತುಂತುರು ಮಳೆ ನಡುವೆ ಮಕ್ಕಳೊಂದಿಗೆ ಬಂದಿದ್ದ ಭಕ್ತರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.